ಪ್ರತಿವರ್ಷ 1.36 ಲಕ್ಷ ಜನ ಅಪಘಾತದಲ್ಲಿ ಸಾವು
ಕನ್ನಡಪ್ರಭ ವಾರ್ತೆ, ಹುಬ್ಬಳ್ಳಿ, ಜ. 24
ಪ್ರತಿ ಮೂರುವರೆ ನಿಮಿಷಕ್ಕೊಂದು ಅಪಘಾತ ಪ್ರಕರಣಗಳು ಭಾರತದಲ್ಲಿ ಸಂಭವಿಸುತ್ತಿದ್ದು, ವರ್ಷವೊಂದರ ಅವಧಿಯಲ್ಲಿ ಭಾರತದಲ್ಲಿ ಅಪಘಾತದಲ್ಲಿ ಮೃತರಾಗುವವರ ಸಂಖ್ಯೆ 1.36 ಲಕ್ಷ ಎಂದು ಡಿಸಿಪಿ ಶ್ರೀನಾಥ ಜೋಶಿ ಹೇಳಿದರು.
ಶುಕ್ರವಾರ ಇಲ್ಲಿ ಬಿವಿಬಿ ಎಂಜಿನಿಯರಿಂಗ್ ಕಾಲೇಜಿನಲ್ಲಿ ರಸ್ತೆ ಸುರಕ್ಷತಾ ಸಪ್ತಾಹದ ಅಂಗವಾಗಿ ಸುಗಮ ಸಂಚಾರಕ್ಕೆ ಪೋಲಿಸರು ಮಾತ್ರ ಜವಾಬ್ದಾರರೇ ಕುರಿತು ಆಯೋಜಿಸಿದ್ದ ಚರ್ಚಾಸ್ಪರ್ಧೆಯಲ್ಲಿ ಅವರು ಮಾತನಾಡಿದರು.
ಅವಳಿ ನಗರದ ವ್ಯಾಪ್ತಿಯಲ್ಲಿ ಸಂಭವಿಸುವ ಅಪಘಾತಗಳ ಪೈಕಿ ಶೇ. 44ರಷ್ಟು ಅಪಘಾತ ಪ್ರಕರಣಗಳಲ್ಲಿ 19-35 ವಯಸ್ಸಿನ ಯುವಕರೇ ಇದ್ದು, ಶೇ. 95ರಷ್ಟು ಅಪಘಾತ ಪ್ರಕರಣಗಳಲ್ಲಿ ತಲೆಗೆ ಏಟು ಬೀಳುತ್ತಿವೆ. ಸಂಭವಿಸುವ ಹತ್ತು ಅಪಘಾತ ಪ್ರಕರಣಗಳಲ್ಲಿ ಎಂಟು ಪ್ರಕರಣಗಳಲ್ಲಿ ನಿರ್ಲಕ್ಷ್ಯದ ವಾಹನ ಚಾಲನೆ ಮತ್ತು ಅತಿವೇಗ ಕಾರಣ ಎಂದು ಹೇಳಿದರು.
ಅಪಘಾತದಲ್ಲಿ ಗಾಯಗೊಳ್ಳುವುದರಿಂದ ಅಥವಾ ವ್ಯಕ್ತಿಯ ಸಾವಿನಿಂದ ಆಯಾ ಕುಟುಂಬದ ಆರ್ಥಿಕ ಮತ್ತು ಸಾಮಾಜಿಕ ಸ್ಥಿತಿಯ ಮೇಲೆ ವ್ಯತಿರಿಕ್ತ ಪರಿಣಾಮ ಉಂಟಾಗುತ್ತದೆ. ನಗರದಲ್ಲಿ ಸಂಚಾರಿ ನಿಯಮ ಉಲ್ಲಂಘನೆಗಳ ಪತ್ತೆಗಾಗಿ 175 ಸಿಸಿ ಟಿವಿ ಕ್ಯಾಮೆರಾಗಳನ್ನು ಅಳವಡಿಸಲಾಗಿದೆ ಎಂದು ತಿಳಿಸಿದರು.
ಚರ್ಚಾ ಸ್ಪರ್ಧೆಯಲ್ಲಿ ಪಾಲ್ಗೊಂಡಿದ್ದ ವಿವಿಧ ಕಾಲೇಜು ವಿದ್ಯಾರ್ಥಿಗಳ ಪೈಕಿ ಕೆಲವರು ವಿಷಯದ ಪರವಾಗಿ ಮತ್ತು ವಿರೋಧಿಸಿ ಮಾತನಾಡಿದರು. ಕೆಎಲ್ಇ ಪಾಲಿಟೆಕ್ನಿಕ್ ಕಾಲೇಜು ವಿದ್ಯಾರ್ಥಿನಿ ದೇವಿಕಾ, ಟ್ರಾಫಿಕ್ ನಿಯಮಾವಳಿಗಳನ್ನು ಅವಳಿ ನಾಗರಿಕರು ಪಾಲಿಸಬೇಕಾದ ಜವಾಬ್ದಾರಿ ಇದೆ. ಪೊಲೀಸರು ನಾವು ಸಂಚಾರಿ ನಿಯಮಗಳನ್ನು ತಪ್ಪಿದ್ದರೆ ತಿದ್ದುವ ಕೆಲಸ ಮಾಡಿ ಸೂಕ್ತ ಮಾರ್ಗದರ್ಶನ ನೀಡುತ್ತಾರೆ ಎಂದು ಹೇಳಿದರು.
ಪಿ.ಸಿ. ಜಾಬಿನ್ ಕಾಲೇಜು ವಿದ್ಯಾರ್ಥಿ ತಾನಾಜಿ ಪಾಟೀಲ, ಪ್ರತಿಯೊಬ್ಬರಿಗೂ ಜವಾಬ್ದಾರಿ ಇದ್ದು, ಟ್ರಾಫಿಕ್ ನಿಯಮಗಳ ಪಾಲನೆಯಾಗುವಂತೆ ನೋಡುವುದು ಟ್ರಾಫಿಕ್ ಪೊಲೀಸರ ಕರ್ತವ್ಯ ಎಂದು ಹೇಳಿದರು.
ಜೈನ್ ಕಾಲೇಜು ವಿದ್ಯಾರ್ಥಿನಿ ನಾಝನಿನ್ ಅವರನ್ನು ವಿಜೇತ ವಿದ್ಯಾರ್ಥಿ ಎಂದು ಘೋಷಿಸಲಾಯಿತು. ಆರ್ಎಲ್ಎಸ್ ಮಹಾವಿದ್ಯಾಲಯದ ಅನುಷಾ ಪ್ರಭುನವರ ಮತ್ತು ಪಿ.ಸಿ. ಜಾಬಿನ್ ಕಾಲೇಜು ವಿದ್ಯಾರ್ಥಿನಿ ಪೂಜಿತಾ ಅವರಿಗೆ ಕ್ರಮವಾಗಿ ದ್ವಿತೀಯ ಮತ್ತು ತೃತೀಯ ಸ್ಥಾನ ಲಭಿಸಿತು. ಸುಮಾರು 80ಕ್ಕೂ ಹೆಚ್ಚು ವಿದ್ಯಾರ್ಥಿಗಳು ಚರ್ಚಾಸ್ಪರ್ಧೆಯಲ್ಲಿ ಪಾಲ್ಗೊಂಡಿದ್ದರು.