ರು. 2.58 ಕೋಟಿ ಬಾಡಿಗೆ ಬಾಕಿ!
ಹುಬ್ಬಳ್ಳಿ: ಅಂಗಡಿಕಾರರಲ್ಲಿ ಪಾಲಿಕೆ ಸುಪರ್ದಿಯಲ್ಲಿರುವ ಮಳಿಗೆಗಳನ್ನು ಪಡೆದುಕೊಳ್ಳುವಾಗಿನ ಆರಂಭ ಶೂರತ್ವ ಅದರ ಬಾಡಿಗೆ ಪಾವತಿಸುವ ಕಾಲಕ್ಕೆ ಇರುವುದಿಲ್ಲ. ಇಂಥ ಅಂಗಡಿಕಾರರಿಂದ ಪಾಲಿಕೆಗೆ ಕೋಟ್ಯಂತರ ರುಪಾಯಿ ಬಾಡಿಗೆ ಬರಬೇಕಾಗಿದ್ದು, ಅಂಗಡಿಕಾರರ ವಿರುದ್ಧ ಇದೀಗ ಹುಬ್ಬಳ್ಳಿ-ಧಾರವಾಡ ಮಹಾನಗರ ಪಾಲಿಕೆ ಸಮರ ಸಾರಿದೆ.
ಹುಬ್ಬಳ್ಳಿ ನಗರ ವ್ಯಾಪ್ತಿಯಲ್ಲಿ ಪಾಲಿಕೆಗೆ ಸಂಬಂಧಪಟ್ಟ ಮಳಿಗೆಯನ್ನು ಬಾಡಿಗೆಗೆ ಪಡೆದುಕೊಂಡಿರುವ ಅನೇಕ ಅಂಗಡಿಕಾರರು ಬಾಡಿಗೆ ಪಾವತಿಸಿಲ್ಲ. ಹೇಳಿ-ಕೇಳಿ ಮಾಡಿದ್ದಲ್ಲದೇ, ನೊಟೀಸ್ ಜಾರಿ ಮಾಡಿ ಜಪ್ಪಯ್ಯ ಎಂದರೂ ಬಾಡಿಗೆ ಕೊಡಲಾರದ ಅಂಗಡಿಕಾರರ ಅಂಗಡಿಗಳಿಗೆ ಇದೀಗ ಪಾಲಿಕೆ ಬೀಗ ಹಾಕುವುದರ ಜತೆಗೆ ಕಾನೂನು ಕ್ರಮಕ್ಕೆ ಮುಂದಾಗಿದೆ.
1948 ಮಳಿಗೆ: ಹುಬ್ಬಳ್ಳಿಯಲ್ಲಿ ಪಾಲಿಕೆ ವ್ಯಾಪ್ತಿಗೆ ಸೇರಿದ ಒಟ್ಟು 1948 ಮಳಿಗೆಗಳಿವೆ. ನಗರದ ಜನತಾ ಬಜಾರ್, ಹಳೆಹುಬ್ಬಳ್ಳಿ, ಎಂ. ಜಿ. ಮಾರ್ಕೇಟ್, ತಿರುಪತಿ ಬಜಾರ, ಕೊಪ್ಪಿಕರ ರೋಡ್, ಇಂಡಿಪಂಪ್, ಸ್ವೀಮಿಂಗ್ ಫೂಲ್ ಕಾಂಪ್ಲೆಕ್ಸ್ನಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಪಾಲಿಕೆಯ ಮಳಿಗೆಗಳಿವೆ. ಪಾಲಿಕೆಗೆ ಕಾಯಂ ಆದಾಯ ಬರುವಂತಾಗಲಿ ಎನ್ನುವ ದೂರದೃಷ್ಟಿಯಿಂದ ಕಳೆದ ಸುಮಾರು 25ರಿಂದ 30 ವರ್ಷಗಳ ಹಿಂದೆ ಈ ಮಳಿಗೆಗಳನ್ನು ನಿರ್ಮಿಸಲಾಗಿತ್ತು. ಜತೆಗೆ ಈ ಎಲ್ಲ ಮಳಿಗೆಗಳು ಮಾರುಕಟ್ಟೆ ಪ್ರದೇಶಕ್ಕೆ ಹೊಂದಿಕೊಂಡಿರುವುದರಿಂದ ಅಂಗಡಿಕಾರರಿಗೂ ಉತ್ತಮ ಲಾಭ ಬರುತ್ತಿದೆ.
ರು. 2.58 ಕೋಟಿ ಬಾಕಿ: ಆದಾಗಿಯ್ಯೂ ಪಾಲಿಕೆಯ ಒಟ್ಟು 1948 ಅಂಗಡಿಗಳ ಪೈಕಿ ಸುಮಾರು 500 ಮಳಿಗೆಗಳು ಮಾತ್ರ ಕಾಲಕ್ಕೆ ಸರಿಯಾಗಿ ಬಾಡಿಗೆ ಭರಣ ಮಾಡಿವೆ. ಇನ್ನುಳಿದವುಗಳು ಬಾಡಿಗೆಯನ್ನು ಪಾವತಿಸಿಲ್ಲ. ಇಂಥ ಅಂಗಡಿಗಳಿಂದ ಪಾಲಿಕೆಗೆ ಒಟ್ಟು ರು. 2.58 ಕೋಟಿ ಬಾಡಿಗೆ ಬರಬೇಕಿದೆ.
ಮಳಿಗೆ ಬಾಡಿಗೆಗೆ ಪಡೆಯುವ ಪೂರ್ವದಲ್ಲಿ ಅಂಗಡಿಕಾರರೇ ಲೀಲಾವಿನ ಮೂಲಕ ಬಾಡಿಗೆಗೆ ಬಿಡ್ ಮಾಡುತ್ತಾರೆ. ಹೆಚ್ಚು ಬಿಡ್ ಮಾಡಿದವರಿಗೆ ಆ ಮಳಿಗೆಯನ್ನು ಪಾಲಿಕೆ ನೀಡುತ್ತದೆ. ಈ ಸಂದರ್ಭದಲ್ಲಿ ಅಂಗಡಿಕಾರರು ತೋರಿಸುವ ಪೈಪೋಟಿ ತದನಂತರ ತಿಂಗಳಿಗೆ ಸರಿಯಾಗಿ ಬಾಡಿಗೆ ತುಂಬುವ ಕಾಲಕ್ಕೆ ತೋರಿಸುವುದಿಲ್ಲ. ಹೀಗಾಗಿ ಕಳೆದ ಏಪ್ರಿಲ್ 2013ರಿಂದ ಈವರೆಗೆ ರು. 2.58 ಕೋಟಿ ಬಾಡಿಗೆ ಬಾಕಿ ಉಳಿದುಕೊಂಡಿದೆ.
ನೋಟಿಸ್ ನೀಡಿದರೂ...: ಬಾಡಿಗೆ ತುಂಬದ ಅಂಗಡಿಕಾರರಿಗೆ ಪಾಲಿಕೆ ಸಾಕಷ್ಟು ಬಾರಿ ಮೌಖಿಕವಾಗಿ ಸೂಚನೆ ನೀಡಿದೆ. ತದ ನಂತರ ಕಾನೂನು ರಿತ್ಯಾ ಮೊದಲನೇ ಹಂತವಾಗಿ ಬಾಡಿಗೆ ತುಂಬಲು 15 ದಿನಗಳ ಕಾಲಾವಕಾಶ ನೀಡಿ ಅಂಗಡಿಕಾರರಿಗೆ ನೊಟೀಸ್ ಜಾರಿ ಮಾಡಿದೆ. ಆ ಬಳಿಕವೂ ಬಾಡಿಗೆ ತುಂಬದಿರುವಾಗ ಎರಡನೇ ಹಂತದಲ್ಲಿ 7 ದಿನ ಬಳಿಕ ಮೂರನೇ ಹಂತದಲ್ಲಿ 3 ದಿನಗಳ ಕಾಲಾವಕಾಶ ನೀಡಿ ನೊಟೀಸ್ ಜಾರಿ ಮಾಡಿದೆ. ಆದಾಗಿಯ್ಯೂ ಸ್ಪಂದಿಸದ ಅಂಗಡಿಕಾರರ ವಿರುದ್ಧ ಕಾನೂನು ಕ್ರಮಕ್ಕೆ ಪಾಲಿಕೆ ಮುಂದಾಗಿದೆ.
ಕಾರ್ಯಾಚರಣೆ ಶುರು: ಸಮಯ ಮೀರಿದ್ದನ್ನು ಗಮನಿಸಿದ ಪಾಲಿಕೆ ಆಯುಕ್ತ ರಮಣದೀಪ ಚೌಧರಿ ಪಾಲಿಕೆಯ ಮಾರುಕಟ್ಟೆ ಅಧೀಕ್ಷಕ ವಾಸುದೇವ ರಾಯ್ಕರ್ ನೇತೃತ್ವದಲ್ಲಿ ತಂಡ ರಚಿಸಿ, ಕಟ್ಟು ನಿಟ್ಟಾಗಿ ಬಾಡಿಗೆ ವಸೂಲಿಗೆ ಸೂಚನೆ ನೀಡಿದ್ದಾರೆ. ಈ ಹಿನ್ನೆಲೆಯಲ್ಲಿ ಗುರುವಾರ ಕಾರ್ಯಾಚರಣೆ ಆರಂಭಿಸಿದ ತಂಡ ಸುಪರ್ ಮಾರುಕಟ್ಟೆಯಲ್ಲಿನ ಬಾಡಿಗೆ ಪಾವತಿಸದ 9 ಅಂಗಡಿಗಳಿಗೆ ಬೀಗಮುದ್ರೆ ಹಾಕಿದೆ. ಶುಕ್ರವಾರವೂ ಸುಪರ್ ಮಾರ್ಕೇಟ್, ಕೊಪ್ಪಿಕರ ರಸ್ತೆಯಲ್ಲಿ ಕಾರ್ಯಾಚರಣೆ ನಡೆಸಿದೆ.
ರು. 3.05 ಲಕ್ಷ ವಸೂಲಿ: ಪಾಲಿಕೆ ಅಧಿಕಾರಿಗಳು ತಮ್ಮ ಅಂಗಡಿಗಳಿಗೂ ಬೀಗ ಹಾಕಬಹುದೆಂಬ ಭೀತಿಯಿಂದ ಬಾಡಿಗೆ ಪಾವತಿಸದಿದ್ದ ಅಂಗಡಿಕಾರರು, ಗುರುವಾರ ಕೈಲಾದಷ್ಟು ಬಾಡಿಗೆ ಕಟ್ಟಿದ್ದಾರೆ. ಕಾರ್ಯಾಚರಣೆ ಆರಂಭವಾದ ಮೊದಲನೇ ದಿನವೇ ರು. 3.05 ಲಕ್ಷ ಬಾಡಿಗೆ ವಸೂಲಾಗಿದೆ. ಮಾರ್ಚ್ ವರೆಗೂ ಕಾರ್ಯಾಚರಣೆ ನಡೆಯುವುದರಿಂದ ಮತ್ತಷ್ಟು ಬಾಡಿಗೆ ವಸೂಲಾಗಿ ಪಾಲಿಕೆಗೆ ಆದಾಯ ಬರುವ ನಿರೀಕ್ಷೆ ಅಧಿಕಾರಿಗಳು ಹೊತ್ತಿದ್ದಾರೆ.
ಕ್ರಿಮಿನಲ್ ಕೇಸ್
ಬಾಡಿಗೆ ಪಾವತಿಸಲು ನಿರಾಕರಿಸುವ ಅಂಗಡಿಗಳಿಗೆ ಬೀಗಮುದ್ರೆ ಹಾಕಿ ಪಂಚನಾಮೆ ಮಾಡಲಾಗುತ್ತಿದೆ. ಆ ಬಳಿಕ ಅಂಗಡಿಯನ್ನು ಪಾಲಿಕೆ ತನ್ನ ವಶಕ್ಕೆ ತೆಗೆದುಕೊಳ್ಳುತ್ತದೆ. ಪುನಃ ಹರಾಜು ಮಾಡುತ್ತದೆ. ಹಿಂದಿನ ಬಾಡಿಗೆ ಹಣ ಪಾವತಿಸದೇ ಇರುವ ಅಂಗಡಿಕಾರರ ವಿರುದ್ಧ ಪಾಲಿಕೆಯ ಮಾರುಕಟ್ಟೆ ಅಧಿ ನಿಯಮ 483ರ ಪ್ರಕಾರ ಕ್ರಿಮಿನಲ್ ಪ್ರಕರಣ ಹಾಗೂ ಸಿವಿಲ್ ಪ್ರಕರಣ ದಾಖಲಿಸಲಿದೆ.
ನೋಡೆಲ್ ಟೀಮ್
ಪ್ರಸ್ತುತ ಬಾಡಿಗೆ ವಸೂಲಿಗೆ ಮಾರುಕಟ್ಟೆ ಅಧೀಕ್ಷಕರ ನೇತೃತ್ವದಲ್ಲಿ ತಂಡ ರಚಿಸಲಾಗಿದೆ. ಆದರೆ ಇದೊಂದೇ ತಂಡದಿಂದ ಎಲ್ಲ ಅಂಗಡಿಕಾರರಿಂದ ಬಾಡಿಗೆ ವಸೂಲಿ ಮಾಡಲು ಸಾಧ್ಯವಾಗುವುದಿಲ್ಲ. ಪ್ರಸ್ತುತ ನಡೆದಿರುವ ಕಾರ್ಯಾಚರಣೆಯ ಒಂದು ತಿಂಗಳು ಮುಗಿಸಿದ ನಂತರ ವಲಯವಾರು ನೋಡೆಲ್ ಟೀಮ್ ರಚಿಸಲು ಪಾಲಿಕೆ ಮುಂದಾಗಿದೆ.
ಬಾಡಿಗೆ ಪಾವತಿಗೆ ಕಾಲಾವಕಾಶ...
ಬಾಡಿಗೆ ತುಂಬುವಂತೆ ಅಂಗಡಿಕಾರರಿಗೆ ಸಾಕಷ್ಟು ಕಾಲಾವಕಾಶ ನೀಡಲಾಯಿತು, ನೊಟೀಸ್ ಕೂಡ ಜಾರಿ ಮಾಡಲಾಯಿತು. ಆದಾಗಿಯ್ಯೂ ಬಾಡಿಗೆ ತುಂಬದಿರುವುದರಿಂದ ಕಟ್ಟು ನಿಟ್ಟಿನ ಕ್ರಮಕ್ಕೆ ಸೂಚಿಸಲಾಗಿದೆ. ಬಾಡಿಗೆ ಪಾವತಿಸುವ ಅಂಗಡಿಕಾರರಿಗೆ ಸಹಕರಿಸಲಾಗುವುದು, ಇಲ್ಲದಿರುವವರ ವಿರುದ್ಧ ನಿರ್ದಾಕ್ಷಿಣ್ಯ ಕ್ರಮ ಕೈಗೊಳ್ಳಲಾಗುವುದು.
- ರಮಣದೀಪ್ ಚೌಧರಿ
ಹು-ಧಾ ಪಾಲಿಕೆ ಆಯುಕ್ತ
-ಪ್ರಕಾಶ ಎಸ್. ಶೇಟ್