ಜನಸ್ನೇಹಿಯಾದ ಸಹಾಯವಾಣಿ
ಕನ್ನಡಪ್ರಭ ವಾರ್ತೆ, ಹುಬ್ಬಳ್ಳಿ, ಜ. 26
ಮಳೆಗಾಲದಲ್ಲಿ ಮನೆ, ಅಂಗಡಿಗಳಿಗೆ ನೀರು ನುಗ್ಗಿದಾಗ, ಬೀದಿ ದೀಪ ಕೈಕೊಟ್ಟಾಗ, ಬೀದಿಯಲ್ಲಿ ಪ್ರಾಣಿಗಳು ಸತ್ತಾಗ ಮತ್ತಿತರ ಸಂದರ್ಭದಲ್ಲಿ ಹುಬ್ಬಳ್ಳಿ-ಧಾರವಾಡದ ಜನತೆಗೆ ತಕ್ಷಣ ನೆನಪಾಗುವುದು ಮಹಾನಗರ ಪಾಲಿಕೆಯ ಸಹಾಯವಾಣಿ.
ದಿನದ 24 ಗಂಟೆಯೂ ಸಾರ್ವಜನಿಕರ ಸಮಸ್ಯೆ ಆಲಿಸಿ, ನಿಗದಿತ ಅವಧಿಯಲ್ಲಿ ಸಮಸ್ಯೆ ನಿವಾರಿಸುವ ಸಹಾಯವಾಣಿ ನಿಜಕ್ಕೂ ಜನಸ್ನೇಹಿ. ದೂರವಾಣಿ ಸಂಖ್ಯೆ 2213869 ಹಾಗೂ 2213888ಗೆ ಕರೆ ಮಾಡಿದ ತಕ್ಷಣ ಕರೆ ಮಾಡಿರುವವರ ಸಮಸ್ಯೆಯನ್ನು ತಾಳ್ಮೆಯಿಂದ ಆಲಿಸಿ, ದೂರು ನೋಂದಾಯಿಸುವ ಜತೆಗೆ ದೂರು ಸ್ವೀಕೃತಿಯ ಸಂಖ್ಯೆ ನೀಡುವ ಸಹಾಯವಾಣಿಯ ಕಾರ್ಯವೈಖರಿ ಬಗ್ಗೆ ಜನಸಾಮಾನ್ಯರಿಗೆ ಎಷ್ಟು ಗೊತ್ತು?
ನಿತ್ಯ ಮೂರು ಶಿಫ್ಟ್ನಲ್ಲಿ ಕಾರ್ಯನಿರ್ವಹಿಸುವ ಸಹಾಯವಾಣಿ ಸಿಬ್ಬಂದಿ, ದೂರು ದಾಖಲಿಸಿಕೊಂಡು ಸಂಬಂಧಿಸಿದ ವಿಭಾಗಕ್ಕೆ ದೂರು ಹಸ್ತಾಂತರಿಸುವುದಲ್ಲದೇ, ಸಮಸ್ಯೆ ನಿವಾರಣೆಯಾಗಿರುವ ಕುರಿತು ಪರಿಶೀಲನೆಯನ್ನೂ ನಡೆಸುತ್ತಾರೆ. ಗುತ್ತಿಗೆದಾರರು ನಿಗದಿತ ಅವಧಿಯಲ್ಲಿ ಸಮಸ್ಯೆ ನಿವಾರಿಸದಿದ್ದರೆ ಗುತ್ತಿಗೆದಾರರ ಕಾರ್ಯವೈಖರಿ ಬಗ್ಗೆ ಸಂಬಂಧಿಸಿದ ಇಲಾಖೆ ಅಧಿಕಾರಿಗಳಿಗೆ ಮಾಹಿತಿ ನೀಡಿ, ದಂಡ ವಿಧಿಸುವಂತೆ ಶಿಫಾರಸನ್ನೂ ಮಾಡುತ್ತಾರೆ.
ಹುಬ್ಬಳ್ಳಿ ಮತ್ತು ಧಾರವಾಡದಿಂದ ಬರುವ ಕರೆಗಳನ್ನು ವಿಂಗಡಿಸಲಾಗುತ್ತಿದ್ದು, ಇದಕ್ಕಾಗಿ ಎರಡು ಪ್ರತ್ಯೇಕ ಸಾಫ್ಟ್ವೇರ್ಗಳಿವೆ. ಧಾರವಾಡ ಹಾಗೂ ಹುಬ್ಬಳ್ಳಿಯ ಕರೆಗಳನ್ನು ಸ್ವೀಕರಿಸಿ, ಸ್ಪಂದಿಸುವುದಕ್ಕಾಗಿ ಸಿಬ್ಬಂದಿಯನ್ನೂ ವಿಂಗಡಿಸಲಾಗಿದೆ.
ಸಹಾಯವಾಣಿಗೆ ಹೆಚ್ಚಿನ ಕರೆಗಳು ಬರುವುದು ಮಳೆಗಾಲದಲ್ಲಿ. ತಗ್ಗು ಪ್ರದೇಶದ ಮನೆ, ಅಂಗಡಿಗಳಿಗೆ ಮಳೆಗಾಲದಲ್ಲಿ ನೀರು ನುಗ್ಗುವುದು ಸಾಮಾನ್ಯ. ಇಂಥ ಸಂದರ್ಭದಲ್ಲಿ ಜನಸಾಮಾನ್ಯರು ಮೊದಲು ಸ್ಮರಿಸಿಕೊಳ್ಳುವುದೇ ಈ ಸಹಾಯವಾಣಿಯನ್ನು.
ಈ ಹಿಂದೆ ಪಿ. ಮಣಿವಣ್ಣನ್ ಹುಬ್ಬಳ್ಳಿ-ಧಾರವಾಡ ಮಹಾನಗರ ಪಾಲಿಕೆ ಆಯುಕ್ತರಾಗಿದ್ದಾಗ ಸಾರ್ವಜನಿಕರ ಸಮಸ್ಯೆಗಳನ್ನು ಸರಳ ಹಾಗೂ ತುರ್ತಾಗಿ ನಿವಾರಿಸಲು ಅನುಕೂಲವಾಗಲೆಂಬ ಉದ್ದೇಶದಿಂದ ಸಹಾಯವಾಣಿ ಪ್ರಾರಂಭಿಸಿದ್ದರು.
ಅಂದಿನಿಂದ ಅವಳಿ ನಗರದ ಸಾರ್ವಜನಿಕರಿಗೆ ಈ ಸಹಾಯವಾಣಿ ಆಪ್ತಮಿತ್ರನಂತಾಗಿದೆ. ಬೀದಿ ನಾಯಿ, ಹಂದಿ, ದನಗಳ ಉಪಟಳ ಹೆಚ್ಚಾದಾಗ, ಚರಂಡಿ ತುಂಬಿ ಹರಿದಾಗ, ರಸ್ತೆ ಪಕ್ಕ ತ್ಯಾಜ್ಯ ಕಂಡಾಗ, ಬೀದಿ ದೀಪ ಹತ್ತದೇ ಇದ್ದಾಗ, ರಸ್ತೆ ಹದಗೆಟ್ಟಾಗ ಮತ್ತಿತರ ಸಮಸ್ಯೆಗಳು ಉದ್ಭವಗೊಂಡಾಗ ನಾಗರಿಕರು ತಕ್ಷಣ ಸಹಾಯವಾಣಿಗೆ ಕರೆ ಮಾಡುತ್ತಾರೆ. ಸಹಾಯವಾಣಿ ಸಹ ಜನರು ತನ್ನ ಮೇಲೆ ಇಟ್ಟಿರುವ ವಿಶ್ವಾಸ ಉಳಿಸಿಕೊಳ್ಳುವಲ್ಲಿ ಸಫಲವಾಗಿದೆ.
33 ಸಿಬ್ಬಂದಿ: ಪಾಲಿಕೆ ಸಹಾಯವಾಣಿಯಲ್ಲಿ ಒಟ್ಟು 33 ಜನ ಕಾರ್ಯನಿರ್ವಹಿಸುತ್ತಿದ್ದಾರೆ. ಅವರಲ್ಲಿ 20 ಜನ ಕಂಟ್ರೋಲ್ ರೂಮ್ನಲ್ಲಿ ಕಾರ್ಯನಿರ್ವಹಿಸುತ್ತಿದ್ದಾರೆ. ಸಾರ್ವಜನಿಕರ ದೂರುಗಳನ್ನು ಸ್ವೀಕರಿಸುವುದು, ದೂರುಗಳ ನೋಂದಣಿ ಸಂಖ್ಯೆ ನೀಡುವುದು, ದೂರುಗಳನ್ನು ಸಂಬಂಧಿಸಿದ ವಲಯ ಕಚೇರಿ ಅಥವಾ ಇಲಾಖೆಗೆ ಹಸ್ತಾಂತರಿಸುವ ಜೊತೆಗೆ ನಿಗದಿತ ಅವಧಿಯಲ್ಲಿ ಸಮಸ್ಯೆ ನಿವಾರಣೆಯಾಗಿರುವ ಬಗ್ಗೆಯೂ ನಿಗಾ ವಹಿಸುತ್ತಾರೆ. ತುರ್ತು ಕೆಲಸಕ್ಕಾಗಿ 6 ಕಾರ್ಮಿಕರು ಹಾಗೂ 7 ಚಾಲಕರಿದ್ದಾರೆ. ಚಾಲಕರನ್ನು ಹೊರತುಪಡಿಸಿ ಇನ್ನುಳಿದವರೆಲ್ಲರ ಕಾರ್ಯ ಗುತ್ತಿಗೆ ಆಧಾರದ್ದು. ಹುಬ್ಬಳ್ಳಿಯ ಇನ್ಪೋಟೆಕ್ ಕಂಪ್ಯೂಟರ್ ಎಜ್ಯುಕೇಶನ್ ಪಾಲಿಕೆ ಸಹಾಯವಾಣಿಗಾಗಿ ಗುತ್ತಿಗೆ ಕಾರ್ಮಿಕರನ್ನು ಒದಗಿಸುತ್ತಿದೆ.
ಮೂರು ವಿಭಾಗ: ಸಹಾಯವಾಣಿಗೆ ಬರುವ ದೂರುಗಳನ್ನು ಮೂರು ವಿಭಾಗಗಳಲ್ಲಿ ವಿಂಗಡಿಸಲಾಗುತ್ತದೆ. ವಿದ್ಯುತ್, ಆರೋಗ್ಯ, ನೀರುಗಳಂಥ ಸಮಸ್ಯೆಗಳನ್ನು ದೂರು ದಾಖಲಾದ 24 ತಾಸಿನೊಳಗೆ ನಿವಾರಿಸಬೇಕಾಗುತ್ತದೆ. ಪೈಪ್ಲೈನ್ ಸೋರಿಕೆ, ಬಸ್ ನಿಲ್ದಾಣ ರಿಪೇರಿ, ರಸ್ತೆ ರಿಪೇರಿ, ಬೀದಿ ದೀಪ, ಬೀದಿ ನಾಯಿ, ಹಂದಿ, ದನ ಮತ್ತಿತರ ಸಮಸ್ಯೆಗಳನ್ನು ದೂರು ದಾಖಲಾದ 7 ದಿನದೊಳಗೆ ನಿವಾರಿಸಲಾಗುವುದು. ಲೋಕೋಪಯೋಗಿ ಇಲಾಖೆಗೆ ಸಂಬಂಧಿಸಿದ ಸಮಸ್ಯೆಗಳನ್ನು ದೂರು ದಾಖಲಾದ 30 ದಿನದೊಳಗೆ ನಿವಾರಿಸಲಾಗುತ್ತದೆ.
ಮಾರುಕಟ್ಟೆ, ಆರೋಗ್ಯದಂಥ ಸಮಸ್ಯೆಗಳ ದೂರನ್ನು ವಾಕಿಟಾಕಿ ಮೂಲಕ ಪಾಲಿಕೆ ಆರೋಗ್ಯ ನಿರೀಕ್ಷಕರ ಗಮನಕ್ಕೆ ತರಲಾಗುತ್ತದೆ. ಲೋಕೋಪಯೋಗಿ ಸಮಸ್ಯೆಗಳು ಕಿರಿಯ ಅಭಿಯಂತರ ಗಮನಕ್ಕೆ ತರುವ ಕೆಲಸವನ್ನು ಸಹಾಯವಾಣಿ ಸಿಬ್ಬಂದಿ ಮಾಡುತ್ತಾರೆ. ಒಟ್ಟಿನಲ್ಲಿ ನಾಗರಿಕರ ಸಹಾಯಕನಂತೆ ಕಾರ್ಯನಿರ್ವಹಿಸುತ್ತಿರುವ ಈ ಸಹಾಯವಾಣಿಯಿಂದಾಗಿ ಅವಳಿ ನಗರದ ನಾಗರಿಕರು ಹಲವಾರು ಸಮಸ್ಯೆಗಳಿಗೆ ಪಾಲಿಕೆಗೆ ಅಲೆಯುವುದು ತಪ್ಪಿದೆ. ಪಾಲಿಕೆಗೂ ಸಹ ನಾಗರಿಕರ ವಿಶ್ವಾಸ ಗಳಿಸಿಕೊಳ್ಳುವ ಮೂಲಕ ಅವರಿಗೆ ಹತ್ತಿರವಾಗಲು ಈ ಸಹಾಯವಾಣಿ ಸಾಕಷ್ಟು ಅನುಕೂಲವಾಗಿದೆ.
ಸಹಾಯವಾಣಿಗೆ ಬರುವ ದೂರುಗಳನ್ನು ನಿಗದಿತ ಸಮಯದಲ್ಲಿ ಪರಿಹರಿಸಲಾಗುತ್ತದೆ. ಕಂಟ್ರೋಲ್ ರೂಮ್ಗೂ ಪ್ರತ್ಯೇಕ ವಾಹನ ಇದ್ದಿದ್ದರಿಂದ ಕಾರ್ಮಿಕರನ್ನು ತುರ್ತಾಗಿ ಸಮಸ್ಯೆ ಇರುವ ಸ್ಥಳದಲ್ಲಿ ಕರೆದುಕೊಂಡು ಹೋಗಲು ಅನುಕೂಲವಾಗಿದೆ. ಈ ಸಹಾಯವಾಣಿಗೆ ಸಾರ್ವಜನಿಕರ ಸ್ಪಂದನೆ ಉತ್ತಮವಾಗಿದೆ.
-ಚಂದ್ರಶೇಖರ ಬಂಡಿ,ಸಹಾಯಕ ಕಾರ್ಯನಿರ್ವಾಹಕ ಅಭಿಯಂತ, ಸಹಾಯವಾಣಿ, ಹುಬ್ಬಳ್ಳಿ-ಧಾರವಾಡ ಮಹಾನಗರ ಪಾಲಿಕೆ
-ವಿಶೇಷ ವರದಿ