ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಧಾರವಾಡ

ದುರ್ಬಲರ ರಕ್ಷಣೆ ಸಂವಿಧಾನದ ಉದ್ದೇಶ

Vishwanath S
Updated On : 27 Jan 2014, 12:25 pm

ಕನ್ನಡಪ್ರಭ ವಾರ್ತೆ, ಧಾರವಾಡ, ಜ. 26
ಸ್ವಾತಂತ್ರ್ಯದ ಹೆಸರಿನಲ್ಲಿ ಸಬಲರು ಮಾತ್ರ ಬದುಕುವಂತಾದರೆ ಸಂವಿಧಾನದ ಉದ್ದೇಶ ವಿಫಲವಾಗುತ್ತದೆ. ದುರ್ಬಲರ ರಕ್ಷಣೆ ಸಂವಿಧಾನದ ಮೂಲ ಉದ್ದೇಶ ಎಂದು ಜಿಲ್ಲಾ ಉಸ್ತುವಾರಿ ಸಚಿವ ದಿನೇಶ ಗುಂಡೂರಾವ್ ಹೇಳಿದರು.
ಭಾನುವಾರ ಆರ್.ಎನ್. ಶೆಟ್ಟಿ ಕ್ರೀಡಾಂಗಣದಲ್ಲಿ ಜಿಲ್ಲಾಡಳಿತ ಆಯೋಜಿಸಿದ್ದ 65ನೇ ಗಣರಾಜ್ಯೋತ್ಸವ ಸಮಾರಂಭದಲ್ಲಿ ಧ್ವಜಾರೋಹಣ ನೆರವೇರಿಸಿ ಅವರು ಮಾತನಾಡಿದರು.
ನಿರಂತರವಾಗಿ ಎದುರಾಗುವ ಅಪಾಯದಿಂದ ದೇಶವನ್ನು ಪಾರು ಮಾಡಬೇಕಾದುದು ಸರ್ಕಾರ ಮತ್ತು ಸಮಾಜದ ಮುಖಂಡರ ಕರ್ತವ್ಯ. ಮತದಾನದ ಹಕ್ಕನ್ನು ವಿವೇಚನೆಯಿಂದ ಬಳಸಿದರೆ ಮಾತ್ರ ರಾಜಕೀಯ, ಸಾಮಾಜಿಕ ಹಾಗೂ ಆರ್ಥಿಕ ಕ್ಷೇತ್ರಗಳಲ್ಲಿ ಬೆಳವಣಿಗೆ ಕಾಣಲು ಸಾಧ್ಯ ಎಂದರು.
ದೇಶ ಇಂದು ಎದುರಿಸುತ್ತಿರುವ ಭ್ರಷ್ಟಾಚಾರ, ಮಹಿಳಾ ದೌರ್ಜನ್ಯ, ಶೋಷಣೆಯಂತಹ ಸಾಮಾಜಿಕ ಅನಿಷ್ಟಗಳ ನಿವಾರಣೆಗೆ ಯುವಜನರು ಒತ್ತಾಸೆಯಾಗಿ ನಿಲ್ಲಬೇಕು. ದೇಶ ನಿರ್ಮಾಣದಲ್ಲಿ ಯುವಕರು ಮಹತ್ವದ ಪಾತ್ರ ವಹಿಸಿದರೆ ಮಾತ್ರ ಜಗತ್ತಿನಲ್ಲಿ ಭಾರತ ಪ್ರಬುದ್ಧ ಪ್ರಜಾಸತ್ತೆಯಾಗಿ ಹೊರಹೊಮ್ಮಲು ಸಾಧ್ಯ ಎಂದು ಹೇಳಿದರು.
ಜಗತ್ತಿನಲ್ಲಿಯೇ ವಿಶಿಷ್ಟವಾದ ಸಂವಿಧಾನ ಪ್ರಾಪ್ತವಾಗಿ 64 ವರ್ಷಗಳು ಸಂದಿದ್ದು ಒಂದು ಸ್ಮರಣಾರ್ಹ. ಜನಕಲ್ಯಾಣಕ್ಕೆ ಸರ್ಕಾರ ಕೈಗೊಂಡಿರುವ ನಾನಾ ಅಭಿವೃದ್ಧಿ ಕಾರ್ಯಗಳಿಗೆ ಸಾರ್ವಜನಿಕರು ಒತ್ತಾಸೆಯಾಗಿ ನಿಂತು ಅವುಗಳ ಲಾಭ ಬಡವರಿಗೆ, ಅರ್ಹರಿಗೆ ತಲುಪುವಂತೆ ಮಾಡುವಲ್ಲಿ ಸರ್ಕಾರದೊಂದಿಗೆ ಕೈಜೋಡಿಸಬೇಕು ಎಂದು ಸಚಿವ ಗುಂಡೂರಾವ್ ಹೇಳಿದರು.
ಶಾಸಕ ವಿನಯ ಕುಲಕರ್ಣಿ, ಜಿಪಂ ಅಧ್ಯಕ್ಷ ಶಂಕ್ರಪ್ಪ ಅಗಡಿ, ಜಿಲ್ಲಾಧಿಕಾರಿ ಸಮೀರ ಶುಕ್ಲಾ, ಜಿಪಂ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಪಿ.ಎ. ಮೇಘಣ್ಣವರ, ಪೊಲೀಸ್ ಆಯುಕ್ತ ರವೀಂದ್ರ ಪ್ರಸಾದ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಬಿ.ಎಸ್. ಲೋಕೇಶಕುಮಾರ ಇದ್ದರು.
ಇದೇ ಸಂದರ್ಭದಲ್ಲಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಉಪ ನಿರ್ದೇಶಕ ಬಿ.ಡಿ. ಹಿರೇಗೌಡರ, ತರಬೇತಿ ಅಧಿಕಾರಿ ನಿಂಬಣ್ಣ ನಿಂಬಣ್ಣವರ ಹಾಗೂ ಆರೋಗ್ಯ ಇಲಾಖೆ ಪಿ.ಎಪ್. ಗೊರವನಕೊಳ್ಳ ಅವರಿಗೆ ಜಿಲ್ಲಾ ಮಟ್ಟದ ಸರ್ವೋತ್ತಮ ಸೇವಾ ಪ್ರಶಸ್ತಿ ಪ್ರದಾನ ಮಾಡಲಾಯಿತು.
ಪರೇಡ್ ಕಮಾಂಡರ್ ಎಸ್.ಐ. ಬುಯ್ಯಾರ ನೇತೃತ್ವದಲ್ಲಿ ಜಿಲ್ಲಾ ಗೃಹರಕ್ಷಕ ದಳ, ಅಬಕಾರಿ ದಳ ಹಾಗೂ ವಿವಿಧ ಶಾಲಾ-ಕಾಲೇಜುಗಳ ಎನ್‌ಸಿಸಿ, ಎನ್‌ಎಸ್‌ಎಸ್ ತಂಡಗಳು ಸಚಿವರಿಗೆ ಗೌರವ ರಕ್ಷೆ ಸಲ್ಲಿಸಿದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement