ಧಾರವಾಡ-ಯಾದವಾಡ ರಸ್ತೆ ಕಾಮಗಾರಿಗೆ ಭೂಮಿಪೂಜೆ
ಧಾರವಾಡ: ಹದಗೆಟ್ಟಿದ್ದ ಧಾರವಾಡ-ಯಾದವಾಡ ರಸ್ತೆ ಅಭಿವೃದ್ಧಿಗೆ ಕಾಮಗಾರಿಗೆ ಜಿಲ್ಲಾ ಉಸ್ತುವಾರಿ ಸಚಿವ ದಿನೇಶ ಗುಂಡೂರಾವ್ ಭೂಮಿಪೂಜೆ ನೆರವೇರಿಸಿದರು.
21 ಕಿ.ಮೀ. ರಸ್ತೆಯ ಅಭಿವೃದ್ಧಿ ಕಾಮಗಾರಿಯನ್ನು ರು. 16 ಕೋಟಿ ವೆಚ್ಚದಲ್ಲಿ ಕೈಗೆತ್ತಿಕೊಳ್ಳಲಾಗಿದೆ. ಈ ಸಂದರ್ಭದಲ್ಲಿ ಮಾತನಾಡಿದ ಜಿಲ್ಲಾ ಉಸ್ತುವಾರಿ ಸಚಿವ ಗುಂಡೂರಾವ್, ಗ್ರಾಮೀಣ ರಸ್ತೆಗಳ ಸುಧಾರಣೆಗೆ ಸರ್ಕಾರ ಬದ್ಧವಾಗಿದೆ ಎಂದರು.
ಇದೇ ಸಂದರ್ಭದಲ್ಲಿ ಗ್ರಾಮದ ಹನುಮಂತ ದೇವರ ಸಮುದಾಯ ಭವನ ಮತ್ತು ಕಾಂಕ್ರೀಟ್ ರಸ್ತೆ ನಿರ್ಮಾಣ ಕಾಮಗಾರಿಗೆ ಭೂಮಿಪೂಜೆ ನೆರವೇರಿಸಿದರು.
ಅಧ್ಯಕ್ಷತೆ ವಹಿಸಿದ್ದ ಶಾಸಕ ವಿನಯ ಕುಲಕರ್ಣಿ, ಧಾರವಾಡ ವಿಧಾನಸಭಾ ಕ್ಷೇತ್ರದ ವ್ಯಾಪ್ತಿಯಲ್ಲಿನ ಶೇ. 80ರಷ್ಟು ರಸ್ತೆಗಳನ್ನು ಅಭಿವೃದ್ಧಿ ಪಡಿಸಲಾಗುವುದು ಎಂದರು.
ಹಳ್ಳಿಗಳಲ್ಲಿ ಕಾಂಕ್ರೀಟ್ ರಸ್ತೆ, ಹಾಗೂ ಗಟಾರ ನಿರ್ಮಿಸಲು ಯೋಜನೆ ರೂಪಿಸಿ ಕಾಮಗಾರಿ ಆರಂಭಿಸಲಾಗುವುದು. ಯಾದವಾಡ-ಮುಳಮುತ್ತಲ, ಮಂಗಳಗಟ್ಟಿ-ಮುಳಮುತ್ತಲ-ಶಿಬಾರಗಟ್ಟಿ ರಸ್ತೆಗಳನ್ನು ಅಭಿವೃದ್ಧಿ ಪಡಿಸಲಾಗುವುದು ಎಂದು ತಿಳಿಸಿದರು. ಧಾರವಾಡ-ಉಪ್ಪಿನ ಬೇಟಗೇರಿ ರಸ್ತೆ ಕಾಮಗಾರಿಗೆ ರು. 16.78 ಕೋಟಿ ಹಾಗೂ ಹನುಮಂತ ದೇವರ ಸಮುದಾಯ ಭವನಕ್ಕೆ ರು. 14 ಲಕ್ಷ ಹಣ ಮಂಜೂರಾಗಿದೆ ಎಂದು ಹೇಳಿದರು.
ಜಿಲ್ಲಾಧಿಕಾರಿ ಸಮೀರ್ ಶುಕ್ಲ, ಪಾಲಿಕೆ ಸದಸ್ಯ ದೀಪಕ ಚಿಂಚೋರೆ, ತಾಪಂ ಮಾಜಿ ಅಧ್ಯಕ್ಷ ಕಲ್ಲಪ್ಪ ಪುಡಕಲಕಟ್ಟಿ, ಗ್ರಾಪಂ ಅಧ್ಯಕ್ಷೆ ನಿವೇದಿತಾ ಕಣಜನವರ, ಸದಾನಂದ ಡಂಗನ್ನವರ, ಪ್ರಭು ಕೇಶಗೊಂಡ ಇದ್ದರು. ಗ್ರಾಪಂ ಮಾಜಿ ಅಧ್ಯಕ್ಷ ಮಡಿವಾಳೆಪ್ಪ ದಿಂಡಲಕೊಪ್ಪ ನಿರೂಪಿಸಿದರು.