ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಧಾರವಾಡ

ಹಾದಿ ತಪ್ಪಿದ ಸರ್ಕಾರಿ ಸೈಕಲ್‌ಗಳು

Vishwanath S
Updated On : 28 Jan 2014, 11:19 am

ಕನ್ನಡಪ್ರಭ ವಾರ್ತೆ, ಧಾರವಾಡ, ಜ. 27
ವಿದ್ಯಾರ್ಥಿಗಳು ಸಕಾಲಕ್ಕೆ ಶಾಲೆಗೆ ಬರುವುದಕ್ಕೆ ಅನುಕೂಲವಾಗಲಿ ಎಂದು ಸರ್ಕಾರ ಉಚಿತವಾಗಿ ನೀಡುತ್ತಿರುವ ಸೈಕಲ್‌ಗಳು ಶಾಲೆಯತ್ತ ಬಾರದೆ ಬೇರೆ ಹಾದಿ ಹಿಡಿಯುತ್ತಿವೆ.
ಸರಿಯಾದ ಸಮಯಕ್ಕೆ ಶಾಲೆಗೆ ಬರುವುದರ ಜೊತೆಗೆ ನಿತ್ಯ ಸೈಕ್ಲಿಂಗ್‌ನಿಂದ ಮಕ್ಕಳ ಆರೋಗ್ಯದಲ್ಲಿ ಸುಧಾರಣೆಯಾಗುತ್ತದೆ ಎಂಬ ಉದ್ದೇಶದಿಂದ ಜಾರಿಗೊಂಡ ಉಚಿತ ಸೈಕಲ್ ಯೋಜನೆ  ನಿರೀಕ್ಷಿತ ಗುರಿ ತಲುಪುತ್ತಿಲ್ಲ.
ಸೈಕಲ್ ಪಡೆಯುವ ಪ್ರೌಢಶಾಲಾ ವಿದ್ಯಾರ್ಥಿ ಕಡ್ಡಾಯವಾಗಿ ಸೈಕಲ್‌ನಲ್ಲಿ ಶಾಲೆಗೆ ಬರಬೇಕು. ಸೈಕಲ್ ಹೊಸತು ಇದ್ದ ಸಂದರ್ಭದಲ್ಲಿ ನಿತ್ಯ ಸೈಕಲ್ ಮೇಲೆ ಬರುವ ವಿದ್ಯಾರ್ಥಿಗಳು ನಂತರ ಸೈಕಲ್ ಸಹವಾಸ ಬಿಟ್ಟು ನಡೆದುಕೊಂಡು ಇಲ್ಲವೇ ಬಸ್‌ನಲ್ಲಿ ಹೈಸ್ಕೂಲ್‌ಗಳಿಗೆ ಬರುತ್ತಿದ್ದಾರೆ. ಗ್ರಾಮೀಣ ಪರಿಸರದಲ್ಲಿ ಸರ್ಕಾರಿ ಸೈಕಲ್‌ಗಳು ಮೇವು, ನೀರು ತರುವುದಕ್ಕೆ ಬಳಕೆಯಾಗುತ್ತಿವೆ. ಗಂಡು ಮಕ್ಕಳಂತೆ ಹೆಣ್ಣು ಮಕ್ಕಳಿಗೆ ಸೈಕಲ್ ಸವಾರಿ ಮಾಡಿಕೊಂಡು ಶಾಲೆಗೆ ಹೋಗಲು ಆಗುತ್ತಿರುವ ಮುಜುಗರ ಕೂಡ ವಿದ್ಯಾರ್ಥಿನಿಯರ ಸೈಕಲ್ ಬಳಕೆಗೆ ಕಡಿವಾಣ ಹಾಕಿದೆ.
ಸರ್ಕಾರದ ಈ ಸೈಕಲ್‌ಗಳನ್ನು ಕೇವಲ ಸವಾರಿಗೆ ಮಾತ್ರ ಉಪಯೋಗವಾಗುವಂತೆ ವಿನ್ಯಾಸಗೊಳಿಸಲಾಗಿದ್ದು, ಅನ್ಯ ಕೆಲಸಗಳಿಗೆ ಬಳಸಿದ ನಂತರ ರಿಪೇರಿಗೆ ಬರುತ್ತಿರುವ ಕಾರಣ ಮೂಲೆಗುಂಪು ಆಗುತ್ತಿವೆ. ಹೀಗೆ ಹಲವಾರು ಕಾರಣಗಳಿಂದಾಗಿ ಸರ್ಕಾರದ ಸೈಕಲ್‌ಗಳ ಉಪಯೋಗಕ್ಕಿಂತ ದುರುಪಯೋಗವೇ ಹೆಚ್ಚಾಗುತ್ತಿದೆ.
ಇಲ್ಲದ ಸರ್ವಿಸಿಂಗ್ ಕ್ಯಾಂಪ್: ಸೈಕಲ್ ವಿತರಿಸಿದ ಆರು ತಿಂಗಳ ಒಳಗೆ ಕ್ಲಸ್ಟರ್ ಮಟ್ಟದಲ್ಲಿ ಉಚಿತ ಸೈಕಲ್ ಸರ್ವಿಸಿಂಗ್ ಕ್ಯಾಂಪ್  ಆಯೋಜಿಸಬೇಕು. ಆದರೆ ಸೈಕಲ್ ವಿತರಿಸಿದ ನಂತರ ಸರ್ವಿಸಿಂಗ್ ಕ್ಯಾಂಪ್ ಆಯೋಜಿಸಿದ ಉದಾಹರಣೆಗಳು ಇಲ್ಲ. ಇದರ ಜೊತೆಗೆ ಸೈಕಲ್‌ಗಳ ಸಣ್ಣಪುಟ್ಟ ರಿಪೇರಿಗಾಗಿ ಪ್ರತಿಯೊಂದು ಶಾಲೆಗೂ ಟೂಲ್‌ಕಿಟ್ ಪೂರೈಸಲಾಗುತ್ತದೆ. ಆದರೆ ಪೂರೈಕೆಯಾದ ಕಿಟ್‌ಗಳ ಬಳಕೆಯೂ ಆಗುತ್ತಿಲ್ಲ. ಸೈಕಲ್ ಪಡೆದ ವಿದ್ಯಾರ್ಥಿಗಳು ನಿಯಮಿತವಾಗಿ ಸೈಕಲ್‌ನಲ್ಲಿ ವಿದ್ಯಾರ್ಥಿಗಳು ಬರುವುದನ್ನು ಖಾತ್ರಿಪಡಿಸಲು ವಾರಕ್ಕೆ ಎರಡು ಬಾರಿ ಸೈಕಲ್‌ಗಳ ಹಾಜರಿಯನ್ನು ದೈಹಿಕ ಶಿಕ್ಷಕರು ತೆಗೆದುಕೊಳ್ಳಬೇಕು ಎಂಬ ಸೂಚನೆ ಇದ್ದರೂ ಅದರ ಪಾಲನೆಯಾಗುತ್ತಿಲ್ಲ ಎನ್ನುವುದು ತಡಕೋಡ ಗ್ರಾಪಂ ಸದಸ್ಯ ಭೀಮಪ್ಪ ಕಸಾಯಿ ಅವರ ಆರೋಪ.
2013-14ನೇ ಶೈಕ್ಷಣಿಕ ವರ್ಷಕ್ಕಾಗಿ ಧಾರವಾಡ ಜಿಲ್ಲೆಯಲ್ಲಿ ಒಟ್ಟು 12,996 ಸೈಕಲ್‌ಗಳನ್ನು ವಿದ್ಯಾರ್ಥಿ, ವಿದ್ಯಾರ್ಥಿನಿಯರಿಗೆ ವಿತರಿಸಲಾಗಿದೆ. ಸೈಕಲ್ ಪಡೆದ ವಿದ್ಯಾರ್ಥಿಗಳು ಕಡ್ಡಾಯವಾಗಿ ಶಾಲೆಗೆ ಸೈಕಲ್ ತರಬೇಕು ಎಂಬ ನಿಯಮ ಇದ್ದರೂ ಅದರ ಪಾಲನೆಯಾಗುತ್ತಿಲ್ಲ. ಈ ಕುರಿತು ಶಾಲೆಯ ದೈಹಿಕ ಶಿಕ್ಷಣ ಶಿಕ್ಷಕರು ನಿಗಾವಹಿಸಬೇಕು. ಕೆಲವೆಡೆ ಮಕ್ಕಳಿಗೆ ನೀಡಿದ ಸೈಕಲ್‌ಗಳನ್ನು ಅವರ ಪಾಲಕರು ಬಳಸುತ್ತಿದ್ದಾರೆ. ಹೀಗಾಗಿ ಸೈಕಲ್ ದುರ್ಬಳಕೆಯಾಗುತ್ತಿರುವ ಹಿನ್ನೆಲೆಯಲ್ಲಿ ವಿದ್ಯಾರ್ಥಿಗಳು ಉಪಯೋಗಿಸದ ಸೈಕಲ್‌ಗಳನ್ನು ಮರಳಿ ಪಡೆಯುವಂತೆ ದೈಹಿಕ ಶಿಕ್ಷಕರು ಮತ್ತು ಕ್ಷೇತ್ರ ಶಿಕ್ಷಣಾಧಿಕಾರಿಗಳಿಗೆ ಸೂಚಿಸಲಾಗಿದೆ ಎಂದು ಸಾರ್ವಜನಿಕ ಶಿಕ್ಷಣ ಇಲಾಖೆ ಉಪನಿರ್ದೇಶಕ ಬಿ.ಕೆ.ಎಸ್. ವರ್ಧನ್ ಹೇಳಿದ್ದಾರೆ.
ಸರ್ಕಾರಿ ಶಾಲೆಗಳಿಗೆ ಮಕ್ಕಳನ್ನು ಆಕರ್ಷಿಸುವುದು ಸೇರಿದಂತೆ ಮಕ್ಕಳ ಒಳಿತಿಗೆ ಸರ್ಕಾರ ಸೈಕಲ್ ವಿತರಿಸುತ್ತಿದ್ದು, ಕನಿಷ್ಠ 10ನೇ ತರಗತಿವರೆಗೆ ವಿದ್ಯಾರ್ಥಿಗಳು ಸೈಕಲ್ ಬಳಸಿದರೆ ಸರ್ಕಾರದ ಉದ್ದೇಶ ಈಡೇರುತ್ತದೆ. ಈ ನಿಟ್ಟಿನಲ್ಲಿ ಸರ್ಕಾರಿ ಸೈಕಲ್‌ಗಳು ಶಾಲೆ ಹಾದಿ ಬಿಟ್ಟು ಬೇರೆ ಹಾದಿಗೆ ಹೋಗದಂತೆ ತಡೆಯಬೇಕಾದ ಕೆಲಸ ಶಿಕ್ಷಣ ಇಲಾಖೆಯಿಂದ ಆಗಬೇಕಿದೆ.


-ಬಸವರಾಜ ಹಿರೇಮಠ

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement