ಇನ್ನೂ 4 ಎಚ್ಡಿ-ಒನ್ ಕೇಂದ್ರ
ಕನ್ನಡಪ್ರಭ ವಾರ್ತೆ, ಹುಬ್ಬಳ್ಳಿ, ಜ. 28
ನಾಗರಿಕರಿಗೆ ಒಂದೇ ಸೂರಿನಡಿ ಹಲವಾರು ಸೌಲಭ್ಯ ಒದಗಿಸುವ ಎಚ್ಡಿ-ಒನ್ನ (ಹುಬ್ಬಳ್ಳಿ-ಧಾರವಾಡ ಒನ್) ಇನ್ನೂ ನಾಲ್ಕು ಕೇಂದ್ರಗಳು ಅವಳಿ ನಗರದಲ್ಲಿ ಶೀಘ್ರ ಪ್ರಾರಂಭಗೊಳ್ಳಲಿವೆ.
ಈಗಾಗಲೇ ಅವಳಿ ನಗರದಲ್ಲಿ ಎಚ್ಡಿ-ಒನ್ನ 9 ಕೇಂದ್ರಗಳಿದ್ದು, ಧಾರವಾಡದಲ್ಲಿ ಎರಡು ಹಾಗೂ ಹುಬ್ಬಳ್ಳಿಯಲ್ಲಿ ಏಳು ಕೇಂದ್ರಗಳು ಕಾರ್ಯನಿರ್ವಹಿಸುತ್ತಿವೆ. ಇದರೊಂದಿಗೆ ಹುಬ್ಬಳ್ಳಿಯ ಹೆಗ್ಗೇರಿ, ಆನಂದನಗರ, ಆದರ್ಶನಗರ ಮತ್ತು ಧಾರವಾಡದ ಜಿಲ್ಲಾಧಿಕಾರಿ ಕಚೇರಿಯಲ್ಲಿ ನೂತನ ಕೇಂದ್ರ ಸ್ಥಾಪನೆಗೊಳ್ಳಲಿವೆ. ನೂತನ ಕೇಂದ್ರಗಳಲ್ಲಿ ಸೌಲಭ್ಯಕ್ಕಾಗಿ ಪ್ರತಿ ಕೇಂದ್ರಕ್ಕೆ ರು. 20 ಲಕ್ಷ ಮೀಸಲಿರಿಸಲಾಗಿದೆ.
ಈಗಾಗಲೇ ಇರುವ ಎಚ್ಡಿ-ಒನ್ನ 9 ಕೇಂದ್ರಗಳಿಂದ 2012-13ನೇ ಸಾಲಿನಲ್ಲಿ 18.27 ಲಕ್ಷ ಸಂಖ್ಯೆಯ ಬಿಲ್ಗಳನ್ನು ಪಾವತಿಗಾಗಿ ಸ್ವೀಕರಿಸಿದ್ದು, ರು. 135 ಕೋಟಿ ಹಣ ಸಂದಾಯವಾಗಿದೆ. 2013-14ರ ಆರ್ಥಿಕ ವರ್ಷದ ಡಿಸೆಂಬರ್ 31ರ ವರೆಗೆ 16.28 ಲಕ್ಷ ಸಂಖ್ಯೆಯ ಬಿಲ್ಗಳನ್ನು ಪಾವತಿಗಾಗಿ ಸ್ವೀಕರಿಸಿದ್ದು, ರು. 120 ಕೋಟಿ ಹಣ ಸಂದಾಯವಾಗಿದೆ.
ಜನವಸತಿ ಪ್ರದೇಶದಲ್ಲಿ ಸ್ಥಾಪಿತಗೊಳ್ಳಲಿರುವ ನೂತನ ಎಚ್ಡಿ-ಒನ್ ಕೇಂದ್ರಗಳಿಂದ ನಾಗರಿಕರಿಗೆ ಇನ್ನೂ ಹೆಚ್ಚಿನ ಅನುಕೂಲ ಒದಗುವ ಜೊತೆಗೆ ಈ ಕೇಂದ್ರಗಳಿಂದಲೂ ಪ್ರತಿ ವರ್ಷ ಕೋಟ್ಯಂತರ ರುಪಾಯಿ ಸಂದಾಯವಾಗುವ ಸಾಧ್ಯತೆ ಇದೆ. ಇದೊಂದು ಸಾರ್ವಜನಿಕ ಹಾಗೂ ಖಾಸಗಿ ಸಹಭಾಗಿತ್ವದಡಿಯ ಸೇವೆ.
ಅವಳಿ ನಗರದಲ್ಲಿ ಎಚ್ಡಿ-ಒನ್ ಕೇಂದ್ರಗಳು ಪ್ರಾರಂಭಗೊಂಡಾಗಿನಿಂದ ನಾಗರಿಕರು ನೀರಿನ ಕರ ಪಾವತಿ, ವಿದ್ಯುತ್ ಬಿಲ್ ಸೇರಿದಂತೆ ಮತ್ತಿತರ ಸೌಲಭ್ಯಕ್ಕಾಗಿ ವಿವಿಧ ಇಲಾಖೆಗಳಿಗೆ ಅಲೆದಾಡುವುದು ತಪ್ಪಿದ್ದರಿಂದ ಈ ಕೇಂದ್ರಗಳಿಗೆ ಬೇಡಿಕೆ ಹೆಚ್ಚಾಗಿದೆ.
ಜನನ ಮತ್ತು ಮರಣ ಪ್ರಮಾಣ ಪತ್ರ, ನೀರಿನ ಬಿಲ್, ವಿದ್ಯುತ್ ಬಿಲ್, ಟೆಲಿಫೋನ್, ತೆರಿಗೆ ಪಾವತಿಯಂಥ ಪಾಲಿಕೆಯ ಕೆಲಸಗಳ ಜೊತೆಗೆ ಪಾಸ್ಪೋರ್ಟ್, ಬಸ್ ಟಿಕೆಟ್ ಬುಕ್ಕಿಂಗ್, ಖಾಸಗಿ ಕ್ಷೇತ್ರದ ಮೋಬೈಲ್ ಫೋನ್ ಬಿಲ್ಗಳಂಥ ಹಲವಾರು ಕಾರ್ಯಗಳನ್ನು ನಾಗರಿಕರು ಎಚ್ಡಿ-ಒನ್ ಕೇಂದ್ರದಲ್ಲಿ ಪೂರೈಸಿಕೊಳ್ಳಬಹುದು.
ಹುಬ್ಬಳ್ಳಿ-ಧಾರವಾಡ ಮಹಾನಗರ ಪಾಲಿಕೆ, ಜಲಮಂಡಳಿ, ಹೆಸ್ಕಾಂ, ಬಿಎಸ್ಎನ್ಎಲ್ ದೂರವಾಣಿ ಬಿಲ್ಗಳಿಂದಲೇ ಶೇ. 70ರಷ್ಟು ವ್ಯವಹಾರ ಎಚ್ಡಿ ಒನ್ ಕೇಂದ್ರಗಳಲ್ಲಿ ನಡೆಯುತ್ತಿದೆ. ಆದಾಯ ತೆರಿಗೆ, ಬಸ್ಪಾಸ್ ಸೇರಿದಂತೆ ಇತರ 15 ಸೇವೆಗಳನ್ನು ಈ ಕೇಂದ್ರಗಳಿಗೆ ನೀಡಲಾಗುತ್ತಿದೆ.
ನೆಮ್ಮದಿ ಕೇಂದ್ರದಲ್ಲಿ ದೊರಕುವ ಜಾತಿ ಪ್ರಮಾಣ ಪತ್ರ, ವರಮಾನ ಪ್ರಮಾಣ ಪತ್ರ ಮತ್ತಿತರ ಸೌಲಭ್ಯಗಳನ್ನು ಒದಗಿಸುವ ಬಗ್ಗೆ ಮತ್ತು ರೇಲ್ವೆ ಸೌಲಭ್ಯಗಳನ್ನು ಸಹ ಎಚ್ಡಿ-ಒನ್ ಕೇಂದ್ರದಿಂದ ಪೂರೈಸುವ ಬಗ್ಗೆ ಸಂಬಂಧಿಸಿದ ಇಲಾಖೆ ಅಧಿಕಾರಿಗಳೊಂದಿಗೆ ಚರ್ಚೆ ನಡೆಯುತ್ತಿದೆ.
ಎಚ್ಡಿ-ಒನ್ ಕೇಂದ್ರಗಳು ವಾರದ ಏಳೂ ದಿನ ಬೆಳಗ್ಗೆ 8ರಿಂದ ರಾತ್ರಿ 8ರ ವರೆಗೆ ಕಾರ್ಯನಿರ್ವಹಿಸುತ್ತಿವೆ. ಸುಮಾರು 12 ಲಕ್ಷ ಜನಸಂಖ್ಯೆ ಹೊಂದಿರುವ ಹುಬ್ಬಳ್ಳಿ-ಧಾರವಾಡದ ಜನತೆಗೆ ಈ ಎಚ್ಡಿ-ಒನ್ ಕೇಂದ್ರಗಳಿಂದಾಗಿ ಸಾಕಷ್ಟು ಸಮಯ ಉಳಿತಾಯವಾಗುತ್ತಿದೆ.
ಬೆಂಗಳೂರು ಅನಂತರ ರಾಜ್ಯದಲ್ಲಿ ಒಟ್ಟಾರೆ ಹೆಚ್ಚಿನ ಕೇಂದ್ರ ಇರುವುದು ಅವಳಿ ನಗರದಲ್ಲಿ.
ಕರ್ನಾಟಕ ಒನ್ ಯೋಜನೆಯಡಿ ನೂತನ ಕೇಂದ್ರಗಳ ಸ್ಥಾಪನೆಗೆ ಮೂಲ ಸೌಕರ್ಯವನ್ನು ಜಿಲ್ಲಾಡಳಿತ ನೀಡುತ್ತಿದೆ. ಕೇಂದ್ರಗಳಲ್ಲಿ ಅವಶ್ಯಕ ಸಾಫ್ಟ್ವೇರ್, ಹಾರ್ಡ್ವೇರ್ ಮತ್ತಿತರ ಗಣಕೀಕೃತ ಸೌಲಭ್ಯ ಹಾಗೂ ಸಿಬ್ಬಂದಿ ನೇಮಕದ ಜವಾಬ್ದಾರಿಯನ್ನ್ನು ಯೋಜನೆಯ ಸಹಭಾಗಿಯಾದ ಸಿಎಂಸಿ ಕಂಪನಿ ವಹಿಸಿಕೊಂಡಿದೆ.
ಅವಳಿ ನಗರದ ನಾಗರಿಕರಿಗೆ ಇನ್ನೂ ಹೆಚ್ಚಿನ ಸೌಲಭ್ಯ ಒದಗಿಸುವುದು ಇ-ಆಡಳಿತದ ಸಹಯೋಗ ಹೊಂದಿರುವ ಎಚ್ಡಿ-ಒನ್ ಕೇಂದ್ರಗಳನ್ನು ಮತ್ತಷ್ಟು ಹೆಚ್ಚು ಪ್ರಾರಂಭಿಸುವುದರ ಹಿಂದಿನ ಉದ್ದೇಶ. ಈಗಾಗಲೇ ಅವಳಿ ನಗರದಲ್ಲಿರುವ ಈ ಕೇಂದ್ರಗಳಿಗೆ ಸಾರ್ವಜನಿಕರು ಸಾಕಷ್ಟು ಪ್ರಯೋಜನ ಪಡೆದುಕೊಳ್ಳುತ್ತಿದ್ದಾರೆ. ನೆಮ್ಮದಿ ಕೇಂದ್ರ ಹಾಗೂ ರೇಲ್ವೆ ಇಲಾಖೆಗಳ ಸೌಲಭ್ಯಗಳನ್ನೂ ಎಚ್ಡಿ-ಒನ್ ಕೇಂದ್ರಗಳಿಂದ ಒದಗಿಸುವ ಬಗ್ಗೆ ಚಿಂತನೆ ನಡೆದಿದೆ.
- ಶಶಿಧರ ಸಾರಂಗಮಠ, ಯೋಜನಾ ವ್ಯವಸ್ಥಾಪಕ, ಕರ್ನಾಟಕ ಒನ್
-ಆನಂದ ಅಂಗಡಿ