ಕಸ ಬಿಸಾಡಿದರೆ ಪಾಲಿಕೆಯಿಂದ ದಂಡ
ಧಾರವಾಡ: ಬಸ್ ನಿಲ್ದಾಣ, ರೈಲು ನಿಲ್ದಾಣ, ಆಟದ ಮೈದಾನ, ಉದ್ಯಾನವನ ಹಾಗೂ ಇತರೆ ಸಾರ್ವಜನಿಕ ಪ್ರದೇಶಗಳಲ್ಲಿ ಕಸ ಹಾಕುವ, ಮೂತ್ರ ವಿಸರ್ಜಿಸುವಂತಹ ಕೆಲಸ ಮಾಡಿದರೆ ಹು-ಧಾ ಮಹಾನಗರ ಪಾಲಿಕೆ ದಂಡ ವಿಧಿಸಲಿದೆ. ಅವಳಿ ನಗರದಲ್ಲಿ ಸ್ವಚ್ಛತೆ ಕಾಪಾಡುವ ನಿಟ್ಟಿನಲ್ಲಿ ಪಾಲಿಕೆ ಕಟ್ಟುನಿಟ್ಟಾಗಿ ನಿಯಮಗಳನ್ನು ಜಾರಿಗೆ ತರುವುದಕ್ಕೆ ಮುಂದಾಗಿದ್ದು, ಪ್ರತಿ ಶುಕ್ರವಾರ ಅವಳಿ ನಗರದ ಎಲ್ಲ ವಾರ್ಡ್ಗಳಲ್ಲಿ ಸ್ವಚ್ಛತೆ ಕೆಲಸ ನಡೆಯಲಿದೆ.
ಪ್ರತಿಯೊಂದು ವಾರ್ಡ್ನಲ್ಲಿ ಸ್ವಚ್ಛತೆ ಗುತ್ತಿಗೆದಾರ, ಪೌರ ಕಾರ್ಮಿಕರ ಸಂಖ್ಯೆ, ಪಾಲಿಕೆ ಅಧಿಕಾರಿಗಳ ಕುರಿತು ಮಾಹಿತಿ ಇರುವ ಬೋರ್ಡ್ ಹಾಕಲಾಗುವುದು. ಈ ಮಾಹಿತಿಯನ್ನು ಆಧರಿಸಿ ಸಾರ್ವಜನಿಕರು ಸ್ವಚ್ಛತೆ ಬಗ್ಗೆ ಪಾಲಿಕೆಗೆ ನೇರವಾಗಿ ದೂರು ಸಲ್ಲಿಸಬಹುದು. ಈಗಾಗಲೇ ಈ ಪ್ರಯೋಗ ಧಾರವಾಡ ನಗರದ ಜನತಾ ಬಜಾರ್, ಕಾರವಾರ ರಸ್ತೆ, ಗಣೇಶ ವಿಲಾಸ, ಮಹಾವೀರ ಗಲ್ಲಿಗಳಲ್ಲಿ ಆರಂಭಿಸಲಾಗಿದೆ. ಕಾರ್ಮಿಕರ ಕಾರ್ಯವೈಖರಿಯನ್ನು ವಲಯ ಕಚೇರಿ ಸಹಾಯಕ ಅಯುಕ್ತರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಲಿದ್ದಾರೆ. ಸಾರ್ವಜನಿಕ ಸ್ಥಳಗಳಲ್ಲಿ ಕಸ ಹಾಕುವುದು, ಉಗಿಯುವುದು, ಮೂತ್ರ ವಿಸರ್ಜನೆ ಕಂಡುಬಂದಲ್ಲಿ ಆ ವ್ಯಕ್ತಿಯಿಂದ ರು. 100 ಹಾಗೂ 200ರ ವರೆಗೆ ದಂಡ ವಿಧಿಸಲಾಗುವುದು. ಮನೆಯಿಂದ ಹಸಿ ಕಸವನ್ನು ಹಾಗೂ ಒಣ ಕಸ ಬೇರ್ಪಡಿಸದೇ ಕಸದ ಸಂಗ್ರಹಕಾರರಿಗೆ ನೀಡಿದರೆ ಮನೆ ಮಾಲೀಕರಿಗೆ ಹಾಗೂ ವಾಣಿಜ್ಯ ಮಳಿಗೆಗಳಿಗೆ ರು. 100ರಿಂದ ಒಂದು ಸಾವಿರವರೆಗೆ ದಂಡ ಹಾಕಲಾಗುವುದು. ಉದ್ಯಾನ, ಆಸ್ಪತ್ರೆಗಳ ತ್ಯಾಜ್ಯಗಳನ್ನು ನಿಗದಿಪಡಿಸಿದ ಸ್ಥಳದಲ್ಲಿ ಹಾಕದಿದ್ದರೆ ರು. 1 ಸಾವಿರ ದಂಡ ವಿಧಿಸಲಾಗುವುದು. ಸತ್ತ ಪ್ರಾಣಿಗಳ ದೇಹದ ಅವಶೇಷಗಳನ್ನು ಎಲ್ಲೆಂದರಲ್ಲಿ ಬೀಸಾಡುವವರಿಗೆ ಮತ್ತು ಕಟ್ಟಡಗಳ ತ್ಯಾಜ್ಯಗಳನ್ನು ವ್ಯವಸ್ಥಿತವಾಗಿ ವಿಲೇವಾರಿ ಮಾಡದಿದ್ದರೆ ರು. 1ರಿಂದ 5 ಸಾವಿರದ ವರೆಗೆ ದಂಡ ಹಾಕಲಾಗುವುದು. ಜನರು ಅಥವಾ ಪೌರ ಕಾರ್ಮಿಕರು ನಿಯಮ ಉಲ್ಲಂಘಿಸಿದ್ದಲ್ಲಿ 0836-2213888 ಅಥವಾ 2213898 ಸಂಪರ್ಕಿಸಿ ದೂರು ಸಲ್ಲಿಸಬೇಕೆಂದು ಪಾಲಿಕೆ ವಿಶೇಷ ಅಧಿಕಾರಿ ಎಸ್.ಎಚ್. ನರೇಗಲ್ ತಿಳಿಸಿದ್ದಾರೆ.