ಬಂಧನ ಖಂಡಿಸಿ ಕಸಗುಡಿಸಿದ ಅತಿಥಿ ಉಪನ್ಯಾಸಕರು
ಕನ್ನಡಪ್ರಭ ವಾರ್ತೆ, ಧಾರವಾಡ, ಜ. 28
ಸೇವಾ ಭದ್ರತೆ ಒದಗಿಸುವಂತೆ ಒತ್ತಾಯಿಸಿ ಹಾಗೂ ಬೆಂಗಳೂರಿನಲ್ಲಿ ಮುಷ್ಕರ ನಿರತ ಅತಿಥಿ ಉಪನ್ಯಾಸಕರ ಬಂಧನ ಖಂಡಿಸಿ ಕಳೆದ ಏಳು ದಿನಗಳಿಂದ ಜಿಲ್ಲಾಧಿಕಾರಿ ಕಚೇರಿ ಎದುರು ಪ್ರತಿಭಟಿಸುತ್ತಿರುವ ಅತಿಥಿ ಉಪನ್ಯಾಸಕರು ಮಂಗಳವಾರ ರಸ್ತೆ ಕಸಗುಡಿಸಿದರು.
ಸರ್ಕಾರಿ ಪ್ರಥಮ ದರ್ಜೆ ಕಾಲೇಜುಗಳ ಅತಿಥಿ ಉನ್ಯಾಸಕರು ಸರದಿ ಉಪವಾಸ ಸತ್ಯಾಗ್ರಹ ಕೈಗೊಂಡಿದ್ದು, ಉನ್ನತ ಶಿಕ್ಷಣ ಇಲಾಖೆ ಸಚಿವರು, ಅಧಿಕಾರಿಗಳು ಹಾಗೂ ಜನಪ್ರತಿನಿಧಿಗಳ ನಿರ್ಲಕ್ಷ್ಯಕ್ಕೆ ಬೇಸತ್ತ ಮಹಿಳಾ ಉಪನ್ಯಾಸಕರು ಕಸಗುಡಿಸಿದರೆ, ಪುರುಷ ಉಪನ್ಯಾಸಕರು ರಸ್ತೆಯಲ್ಲಿ ಹೋಗಿ ಬರುವ ವಾಹನಗಳನ್ನು ಸ್ವಚ್ಛಗೊಳಿಸಿ ಸರ್ಕಾರದ ಗಮನ ಸೆಳೆದರು. ಜ. 29ರಂದು ತಮಟೆ ಬಾರಿಸುವ ಮೂಲಕ ಪ್ರತಿಭಟನೆ ನಡೆಸಲಾಗುವುದು ಎಂದು ಅತಿಥಿ ಉಪನ್ಯಾಸಕರ ಸಂಘದ ಒಕ್ಕೂಟ ಹೇಳಿದೆ.
ಅತಿಥಿ ಉಪನ್ಯಾಸಕರ ಪ್ರತಿಭಟನೆಗೆ ಜಿಪಂ ಸದಸ್ಯ ವೈ.ಬಿ. ದಾಸನಕೊಪ್ಪ, ಎಸ್‌ಎಫ್‌ಐ ರಾಜ್ಯ ಸಂಚಾಲಕ ಸಮಿತಿ ಸದಸ್ಯ ಸಂದೀಪ, ವಿಶಾಲ ಜೈನ್, ಮಂಜುನಾಥ ಮಕರವಳ್ಳಿ, ಈರಪ್ಪ ನಾಯಕ, ಗೂಂಡೂರಾವ್ ನಾಯಕ, ಕಮ್ಯುನಿಸ್ಟ್ ಪಕ್ಷದ ಮುಖಂಡ ಬಿ.ಎಸ್. ಸೊಪ್ಪಿನ, ಬಿಎಸ್‌ಪಿ ಮುಖಂಡ ಲಕ್ಷ್ಮಣ ಬಕಾಯಿ ಬೆಂಬಲಿಸಿದ್ದಾರೆ. ಮಂಗಳವಾರ ಸರದಿ ಉಪವಾಸದಲ್ಲಿ ವೆಂಕಟೇಶ ಗಂಜಿಗಟ್ಟೆ, ಸಿ.ಸಿ. ಚಿಣಗಿ, ಉಮೇಶ ಬಾಂಡಗೆ, ಮಾರುತಿ ನಂದನ, ಕೆ.ಎನ್. ಭಜಂತ್ರಿ ಭಾಗವಹಿಸಿದ್ದರು.