ಶಿಕ್ಷಣ ಸಂಸ್ಥೆ ಸಿಬ್ಬಂದಿಗೆ ಕಾಲ್ಪನಿಕ ವೇತನಕ್ಕೆ ಆಗ್ರಹ
ಕನ್ನಡಪ್ರಭ ವಾರ್ತೆ, ಧಾರವಾಡ, ಜ. 28
ರಾಜ್ಯದಲ್ಲಿನ ಅನುದಾನಿತ ಶಿಕ್ಷಣ ಸಂಸ್ಥೆಗಳ ಎಲ್ಲ ನೌಕರರಿಗೆ ಕಾಲ್ಪನಿಕ ವೇತನ ಸೌಲಭ್ಯ ಒದಗಿಸಬೇಕೆಂದು ರಾಜ್ಯ ಪದವಿಪೂರ್ವ ಮಹಾವಿದ್ಯಾಲಯಗಳ ನೌಕರರ ಸಂಘದ ಗೌರವಾಧ್ಯಕ್ಷ ಪ್ರೊ. ಎಸ್.ವಿ. ಸಂಕನೂರ ಆಗ್ರಹಿಸಿದ್ದಾರೆ.
ಸೋಮವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಸರ್ವೋಚ್ಚ ನ್ಯಾಯಾಲಯದ ತೀರ್ಪಿಗೆ ಬದ್ಧರಾಗುವ ಜತೆಗೆ 20 ಸಾವಿರ ನೌಕರರ ಹಿತಕಾಯಬೇಕು. ರಾಜ್ಯದ ಅನುದಾನಿತ ಶಿಕ್ಷಣ ಸಂಸ್ಥೆಗಳಲ್ಲಿ ಆಗಸ್ಟ್ 1999ಕ್ಕಿಂತ ಪೂರ್ವದಲ್ಲಿ ನೇಮಕವಾಗಿರುವ ಎಲ್ಲ ಸಿಬ್ಬಂದಿಗೆ ಅನುದಾನರಹಿತ ಅವಧಿಯನ್ನು ಪರಿಗಣಿಸಿ ಸೌಲಭ್ಯ ನೀಡಲಾಗಿದೆ.
ಆದರೆ ನಂತರದ ಸಿಬ್ಬಂದಿ ಈ ಸೌಲಭ್ಯದಿಂದ ವಂಚಿತರಾಗಿದ್ದಾರೆ. ಈ ಸಂಬಂಧ ಹೈಕೋರ್ಟ್ ಮತ್ತು ಸುಪ್ರೀಂ ಕೋರ್ಟ್, ಸಿಬ್ಬಂದಿ ಪರವಾಗಿ ತೀರ್ಪು ನೀಡಿದೆ ಎಂದರು.
ಈ ಮಧ್ಯೆ ಸರ್ಕಾರ ನ್ಯಾಯಾಲಯದ ಆದೇಶ ಪಾಲಿಸದೇ ನೌಕರರನ್ನು ವಂಚಿಸಲು ಹೊರಟಿರುವುದು ಸರಿಯಲ್ಲ.
ಇಂತಹ ಗಂಭೀರ ಸಮಸ್ಯೆ ಬಗ್ಗೆ ನೌಕರರ ಸಂಘದ ಪ್ರತಿನಿಧಿಗಳು ಅಥವಾ ಶಿಕ್ಷಕರ ಕ್ಷೇತ್ರದ ಚುನಾಯಿತ ಪ್ರತಿನಿಧಿಗಳೊಂದಿಗೆ ಚರ್ಚಿಸಲು ಸರ್ಕಾರ ಆಸಕ್ತಿ ತೋರಿಸುತ್ತಿಲ್ಲ ಎಂದು ಆರೋಪಿಸಿದರು.
ಸಮಸ್ಯೆ ಕುರಿತು ಶಿಕ್ಷಕರ ಕ್ಷೇತ್ರದ ಚುನಾಯಿತ ಪ್ರತಿನಿಧಿಗಳ ಗಮನಸೆಳೆಯಲಾಗಿದೆ. ಜೊತೆಗೆ ಶಿಕ್ಷಣ ಸಚಿವರು ಮತ್ತು ವಿರೋಧ ಪಕ್ಷದ ನಾಯಕರೊಂದಿಗೆ ಚರ್ಚಿಸಿ ಸಮಸ್ಯೆ ಪರಿಹರಿಸಲು ಕೇಳಿಕೊಳ್ಳಲಾಗಿದೆ. ಸರ್ಕಾರ ಕೂಡ ನೌಕರರ ಮಧ್ಯೆ ತಾರತಮ್ಯ ಮಾಡುವುದು ಸರಿಯಲ್ಲ. ಸುದ್ದಿಗೋಷ್ಠಿಯಲ್ಲಿ ರಾಜ್ಯ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಅಧ್ಯಕ್ಷ ಬಸವರಾಜ ಗುರಿಕಾರ, ಮೋಹನ ಸಿದ್ಧಾಂತಿ ಇದ್ದರು.