ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಧಾರವಾಡ

ಕರ್ನಾಟಕ ರತ್ನಗಳು ಬರೀ ಮೈಸೂರಲ್ಲಿಲ್ಲ

Lingaraj Badiger
Updated On : 30 Jan 2014, 12:41 pm

ಧಾರವಾಡ: ರಾಜ್ಯದ ಎಲ್ಲ ಭಾಗಗಳ ಕಲಾವಿದರ ಪರಿಚಯ ಇದ್ದರೇನೇ ಕರ್ನಾಟಕ ರತ್ನಗಳು ಎಂಬ ಆಕಾಶವಾಣಿಯ ಕಾರ್ಯಕ್ರಮ ಅರ್ಥಪೂರ್ಣ ಎನಿಸುತ್ತದೆ ಎಂದು ಹಿರಿಯ ಪತ್ರಕರ್ತ ನಾಡೋಜ ಡಾ. ಪಾಟೀಲ ಪುಟ್ಟಪ್ಪ ಅಭಿಪ್ರಾಯಿಸಿದ್ದಾರೆ.
ಈ ಕುರಿತು ಮುಖ್ಯಮಂತ್ರಿಗೆ ಪತ್ರ ಬರೆದಿರುವ ಅವರು, ಕನ್ನಡ ಮತ್ತು ಸಂಸ್ಕೃತಿ ಇಲಾಖೆಯು ಆಕಾಶವಾಣಿಯಲ್ಲಿ ಪ್ರತಿ ವಾರ ಕರ್ನಾಟಕ ರತ್ನಗಳು ಎಂಬ ಶೀರ್ಷಿಕೆಯಡಿ ಕಲಾವಿದರನ್ನು, ಸಂಗೀತಗಾರರನ್ನು ಪರಿಚಯ ಮಾಡಿಕೊಡುತ್ತದೆ. ಪ್ರತಿ ವಾರವೂ ಅದರಲ್ಲಿ ಒಬ್ಬರ ಪರಿಚಯವಾಗುತ್ತದೆ. ಇಲ್ಲಿವರೆಗೆ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯವರಿಗೆ ಮೈಸೂರು ಪ್ರದೇಶದ ಕಲಾವಿದರು ಮಾತ್ರ ಕಂಡಿದ್ದಾರೆ ಎಂದು ದೂರಿದ್ದಾರೆ. ಕರ್ನಾಟಕವೆಂದರೆ ಮೈಸೂರು ಪ್ರದೇಶವಲ್ಲ, ಹೈದರಾಬಾದ್ ಕರ್ನಾಟಕವಲ್ಲ, ಉತ್ತರ ಕರ್ನಾಟಕವಲ್ಲ, ಕರಾವಳಿ ಕರ್ನಾಟಕವಲ್ಲ. ಕರ್ನಾಟಕವೆಂಬುವುದಕ್ಕೆ ಸಮಗ್ರತೆ ಬರಬೇಕೆಂದರೆ ಕರ್ನಾಟಕದ ಎಲ್ಲ ಪ್ರದೇಶಗಳಿಗೂ ಪ್ರಾಧಾನ್ಯ ಇರಬೇಕೆಂದು ಪಾಪು ಸಲಹೆ ನೀಡಿದ್ದಾರೆ. ಕಲಾವಿದರು, ಸಂಗೀತ ತಜ್ಞರು ಮೈಸೂರು ಕರ್ನಾಟಕದಲ್ಲಿ ಮಾತ್ರ ಇಲ್ಲ. ಅವರು ಕರ್ನಾಟಕದ ಎಲ್ಲ ಪ್ರದೇಶಗಳಲ್ಲಿದ್ದಾರೆ. ಕರ್ನಾಟಕ ರತ್ನಗಳು ಎಂಬ ಪದಕ್ಕೆ ಅರ್ಥ ಬರಬೇಕಾದರೆ, ಕೇವಲ ಒಂದು ಪ್ರದೇಶದ ಕಲಾವಿದರ ಬಗ್ಗೆ ಹೇಳಿದರೆ ಈ ರತ್ನಗಳ ವರ್ಣನೆ ಪೂರ್ಣವೆನಿಸಲಾರದು. ಕರ್ನಾಟಕದ ಪ್ರತಿಯೊಂದು ಪ್ರದೇಶದ ಕಲಾವಿದರ ಬಗ್ಗೆ ಈ ಕರ್ನಾಟಕ ರತ್ನಗಳು ಎಂಬ ಕಾರ್ಯಕ್ರಮ ಒಳಗೊಳ್ಳಬೇಕು. ನೂತನ ಕನ್ನಡ ರಾಜ್ಯ ನಿರ್ಮಾಣವಾಗಿ ಇಂದಿಗೆ 58 ವರ್ಷಗಳಾಗಿವೆ. ಇಷ್ಟೊಂದು ಕಾಲಾವಧಿಯ ನಂತರವೂ ಕರ್ನಾಟಕ ಎನ್ನುವ ಪದಕ್ಕೆ ಸಮಗ್ರತೆ ಬರುವಂತೆ ಆಗಿಲ್ಲ. ಎಲ್ಲ ಪ್ರದೇಶದ ಕಲಾವಿದರು, ಸಂಗೀತಗಾರರ ಬಗ್ಗೆ ಆ ಕಾರ್ಯಕ್ರಮದಲ್ಲಿ ಬರುವಂತೆ ನೋಡಿಕೊಳ್ಳುವುದು ಅಗತ್ಯ. ಕರ್ನಾಟಕವೆಂದರೆ ಮೈಸೂರು ಕರ್ನಾಟಕ ಎಂಬ ಭಾವನೆ ಬರುವಂತೆ ಸರ್ಕಾರ ನಡೆದುಕೊಳ್ಳಬಾರದು. ಎಲ್ಲ ಭಾಗಗಳನ್ನು ಸಮಗ್ರವಾಗಿ ಪ್ರತಿನಿಧಿಸುವಂಥ ಕಾರ್ಯಕ್ರಮಗಳು ಕನ್ನಡ, ಸಂಸ್ಕೃತಿ ಇಲಾಖೆಯಿಂದ ಬರಬೇಕು. ಇಲ್ಲದಿದ್ದರೆ ವಿಭಜನೆ ಭಾವನೆಗಳು ಬೆಳೆದುಕೊಂಡು ಕರ್ನಾಟಕ ಅಭದ್ರವಾಗುತ್ತದೆ. ನೀವು, ಸುಭದ್ರವಾಗಿ ಉಳಿಯುವಂತೆ ಎಲ್ಲ ಪ್ರದೇಶಗಳನ್ನು ಸಮಗ್ರ ದೃಷ್ಟಿಯಿಂದ ಕಾಣಬೇಕೆಂದು ಮುಖ್ಯಮಂತ್ರಿಗೆ ಒತ್ತಾಯಿಸಿದ್ದಾರೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement