ಇಂದು ಎಬಿವಿಪಿ 33ನೇ ರಾಜ್ಯ ಸಮ್ಮೇಳನ
ಕನ್ನಡಪ್ರಭ ವಾರ್ತೆ, ಹುಬ್ಬಳ್ಳಿ, ಜ. 30
ಇಲ್ಲಿಯ ಬಿವಿಬಿ ಎಂಜಿನಿಯರಿಂಗ್ ಕಾಲೇಜಿನ ಆವರಣದಲ್ಲಿ ಜ. 31ರಿಂದ ಮೂರು ದಿನಗಳವರೆಗೆ ನಡೆಯಲಿರುವ ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್ನ 33ನೇ ರಾಜ್ಯ ಸಮ್ಮೇಳನದ ಸಿದ್ಧತೆ ಪೂರ್ಣಗೊಂಡಿದೆ.
ರಾಜ್ಯದ ವಿವಿಧ ಭಾಗಗಳಿಂದ ಸುಮಾರು 2 ಸಾವಿರ ವಿದ್ಯಾರ್ಥಿಗಳು ಹಾಗೂ ಅಧ್ಯಾಪಕ ಪ್ರತಿನಿಧಿಗಳು ಈ ಸಮ್ಮೇಳನದಲ್ಲಿ ಭಾಗವಹಿಸಲಿದ್ದಾರೆ. 22 ವರ್ಷಗಳ ಅನಂತರ ಹುಬ್ಬಳ್ಳಿಯಲ್ಲಿ ಎಬಿವಿಪಿ ರಾಜ್ಯ ಸಮ್ಮೇಳನ ನಡೆಯಲಿದೆ. 'ಪರಿವರ್ತನೆಗಾಗಿ ಯುವಶಕ್ತಿ' ಘೋಷವಾಕ್ಯದೊಂದಿಗೆ ನಡೆಯಲಿರುವ ಈ ಸಮ್ಮೇಳನದಲ್ಲಿ ಭಾರತದ ವರ್ತಮಾನ ಪರಿಸ್ಥಿತಿ ಹಾಗೂ ವಿವೇಕಾನಂದರ ಕನಸಿನ ಭಾರತ ಕುರಿತಂತೆ ಭಾಷಣಗಳು, ಮೌಲ್ಯಗಳ ಅನುಷ್ಠಾನ-ಯುವಜನರ ಪಾತ್ರ, ಶಿಕ್ಷಣ-ಮಹಿಳೆ-ನೇತೃತ್ವ ವಿಷಯಗಳ ಕುರಿತು ತಜ್ಞರ ಸಂವಾದ ನಡೆಯಲಿದೆ.
ಸಮ್ಮೇಳನಕ್ಕಾಗಿ ಬಿವಿಬಿ ಎಂಜಿನಿಯರಿಂಗ್ ಕಾಲೇಜಿನಲ್ಲಿ ಪ್ರತ್ಯೇಕ ವೇದಿಕೆ ನಿರ್ಮಿಸುವ ಕಾರ್ಯಪೂರ್ಣಗೊಂಡಿದ್ದು, 2 ಸಾವಿರ ಆಸನಗಳ ವ್ಯವಸ್ಥೆ ಮಾಡಲಾಗಿದೆ. ಸಮ್ಮೇಳನಕ್ಕೆ ಆಗಮಿಸುವ ವಿದ್ಯಾರ್ಥಿಗಳು ಹಾಗೂ ಅಧ್ಯಾಪಕ ಪ್ರತಿನಿಧಿಗಳಿಗಾಗಿ ಕೆಎಲ್ಇ ಸಂಸ್ಥೆಯ ಅಕ್ಕಪಕ್ಕದ ಶಾಲಾ-ಕಾಲೇಜುಗಳಲ್ಲಿ ಹಾಗೂ ಸುಮಾರು 200 ವಿದ್ಯಾರ್ಥಿನಿಯರಿಗೆ ಕೇಶ್ವಾಪುರದ ಸೇವಾಭಾರತಿ ಟ್ರಸ್ಟ್ನ ಕಟ್ಟಡದಲ್ಲಿ ವಸತಿ ವ್ಯವಸ್ಥೆ ಮಾಡಲಾಗಿದೆ.
ಸಮ್ಮೇಳನದ ಅಂಗವಾಗಿ ಆಕರ್ಷಕ ಶೋಭಾಯಾತ್ರೆ, ಸಾರ್ವಜನಿಕ ಸಭೆ, ವಿದ್ಯಾರ್ಥಿ ಪರಿಷತ್ನ ಬಹು ಆಯಾಮಿ ಚಟುವಟಿಕೆಗಳನ್ನು ಬಿಂಬಿಸುವ ಚಿತ್ರ ಪ್ರದರ್ಶನ, ಪ್ರಮುಖ ಚಿಂತಕರು, ಶಿಕ್ಷಣ ತಜ್ಞರು ಪಾಲ್ಗೊಳ್ಳುವ ವಿಚಾರಗೋಷ್ಠಿ ಸೇರಿದಂತೆ ವಿವಿಧ ಕಾರ್ಯಕ್ರಮಗಳನ್ನು ಆಯೋಜಿಸಲಾಗಿದೆ. ಅಖಿಲ ಭಾರತ ವಿದ್ಯಾರ್ಥಿ ಪರಿಷತ್ನ 32ನೇ ರಾಜ್ಯ ಸಮ್ಮೇಳನ ಬೆಳಗಾವಿಯಲ್ಲಿ ಕಳೆದ ಫೆ. 8,9 ಮತ್ತು 10ರಂದು ಜರುಗಿತ್ತು. ಆ ಸಮ್ಮೇಳನದಲ್ಲಿಯೂ 2 ಸಾವಿರಕ್ಕೂ ಹೆಚ್ಚು ವಿದ್ಯಾರ್ಥಿಗಳು ಹಾಗೂ ಅಧ್ಯಾಪಕ ಪ್ರತಿನಿಧಿಗಳು ಪಾಲ್ಗೊಂಡಿದ್ದನ್ನು ಸ್ಮರಿಸಬಹುದು.
ಎಬಿವಿಪಿ ಸಮ್ಮೇಳನದ ವಿವರ
ಎಬಿವಿಪಿ 33ನೇ ರಾಜ್ಯ ಸಮ್ಮೇಳನಕ್ಕೆ ಜ. 31ರಂದು ಸಂಜೆ 4ಕ್ಕೆ ಸುಪ್ರೀಂ ಕೋರ್ಟ್ ನಿವೃತ್ತ ನ್ಯಾಯಮೂರ್ತಿ ಶಿವರಾಜ್ ಪಾಟೀಲ್ ಚಾಲನೆ ನೀಡುವರು. ಮೂರುಸಾವಿರ ಮಠದ ಶ್ರೀ ಗುರುಸಿದ್ದರಾಜಯೋಗೀಂದ್ರ ಸ್ವಾಮೀಜಿ ಸಮ್ಮೇಳನದ ಪ್ರದರ್ಶಿಸಿ ಉದ್ಘಾಟಿಸುವರು. ಇದಕ್ಕೂ ಮೊದಲು ಮಧ್ಯಾಹ್ನ 3.20ಕ್ಕೆ ಸಮ್ಮೇಳನದ ಧ್ವಜಾರೋಹಣವನ್ನು ಸ್ವಾಗತ ಸಮಿತಿ ಅಧ್ಯಕ್ಷ ಅಶೋಕ ಶೆಟ್ಟರ್, ಎಬಿವಿಪಿ ರಾಜ್ಯಾಧ್ಯಕ್ಷ ಬಿ.ವಿ. ವಸಂತಕುಮಾರ ನೆರವೇರಿಸುವರು.
ಫೆ. 1ರಂದು ಬೆಳಗ್ಗೆ 11ಕ್ಕೆ 'ಸ್ವಾಮಿ ವಿವೇಕಾನಂದರ ಕನಸಿನ ಭಾರತ' ಕುರಿತು ಮೈಸೂರು ಮಹಾರಾಣಿ ಕಾಲೇಜಿನ ಪ್ರಾಧ್ಯಾಪಕರಾದ ಡಾ. ಬಿ.ವಿ. ವಸಂತಕುಮಾರ್ ಮಾತನಾಡುವರು. ಮಧ್ಯಾಹ್ನ 2ಕ್ಕೆ ನಡೆಯುವ 'ಮೌಲ್ಯಗಳ ಅನುಷ್ಠಾನ-ಯುವಜನರ ಪಾತ್ರ' ಕುರಿತ ವಿಚಾರಗೋಷ್ಠಿಯಲ್ಲಿ ಧಾರವಾಡದ ಮನೋರೋಗ ತಜ್ಞ ಡಾ. ಆನಂದ ಪಾಂಡುರಂಗಿ, ಮೈಸೂರಿನ ನ್ಯಾಯವಾದಿ ಎಂ.ಎನ್. ಸುಮನ್, ಬಾಗಲಕೋಟೆ ಬಸವೇಶ್ವರ ಎಂಜಿನಿಯರಿಂಗ್ ಕಾಲೇಜಿನ ಪ್ರಾಧ್ಯಾಪಕ ಡಾ. ಶ್ರೀನಿವಾಸ ಬಳ್ಳಿ ಪಾಲ್ಗೊಳ್ಳುವರು. ಅದೇ ದಿನ ಸಂಜೆ 5ಕ್ಕೆ ವಿದ್ಯಾರ್ಥಿಗಳಿಂದ ನಗರದ ಪ್ರಮುಖ ಬೀದಿಗಳಲ್ಲಿ ಆಕರ್ಷಕ ಶೋಭಾಯಾತ್ರೆ ನಡೆಯುವುದು. ಸಂಜೆ 6.30ಕ್ಕೆ ಮೂರುಸಾವಿರ ಮಠದ ಮೈದಾನದಲ್ಲಿ ನಡೆಯಲಿರುವ ಸಾರ್ವಜನಿಕ ಸಭೆಯಲ್ಲಿ ರಾಜ್ಯದ ಪ್ರಮುಖ ವಿದ್ಯಾರ್ಥಿ ನಾಯಕರಿಂದ ಭಾಷಣ ನಡೆಯಲಿದ್ದು, ಎಬಿವಿಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಶ್ರೀಹರಿ ಬೋರಿಕರ್ ಅತಿಥಿಯಾಗಿ ಪಾಲ್ಗೊಳ್ಳುವರು.
ಸಮ್ಮೇಳನದಲ್ಲಿ ಅನುಮೋದನೆಗೊಂಡ ನಿರ್ಣಯಗಳನ್ನು ಫೆ. 2ರಂದು ಬೆಳಗ್ಗೆ 9ಕ್ಕೆ ಅಂಗೀಕರಿಸಲಾಗುವುದು. ಬೆಳಗ್ಗೆ 11ಕ್ಕೆ ರಾಷ್ಟ್ರದ ವರ್ತಮಾನ ಸ್ಥಿತಿ ಕುರಿತು ಎಬಿವಿಪಿ ರಾಷ್ಟ್ರೀಯ ಸಹಸಂಘಟನಾ ಕಾರ್ಯದರ್ಶಿ ಕೆ.ಎನ್. ರಘುನಂದನ್ ಮಾತನಾಡಲಿದ್ದಾರೆ. ಕೆಎಲ್ಇ ಸಂಸ್ಥೆಯ ಕಾರ್ಯಾಧ್ಯಕ್ಷ ಪ್ರಭಾಕರ ಕೋರೆ ಹಾಜರಿರುವರು. ನೂತನ ಕಾರ್ಯಕಾರಿಣಿ ಘೋಷಣೆ ಸಮ್ಮೇಳನದಲ್ಲಿ ಎಬಿವಿಪಿ ನೂತನ ರಾಜ್ಯ ಅಧ್ಯಕ್ಷ, ಕಾರ್ಯದರ್ಶಿಗಳ ಆಯ್ಕೆ ಪ್ರಕ್ರಿಯೆ ನಡೆಯಲಿದೆ. ಜ.31ರಂದು ಅಧ್ಯಕ್ಷ, ಕಾರ್ಯದರ್ಶಿಗಳ ಹೆಸರು ಘೋಷಿಸಿ ಫೆ. 2ರಂದು ರಾಜ್ಯ ಕಾರ್ಯಕಾರಿಣಿ ಪಟ್ಟಿ ಪ್ರಕಟಣೆಗೊಳ್ಳಲಿದೆ.