ಡಬ್ಬಿಂಗ್ ವಿರೋಧಿ ಹೋರಾಟಕ್ಕೆ ಬೆಂಬಲ
ಕನ್ನಡಪ್ರಭ ವಾರ್ತೆ, ಧಾರವಾಡ, ಜ. 30
ಡಬ್ಬಿಂಗ್ ವಿರೋಧಿಸಿ ಕನ್ನಡ ಚಿತ್ರದ ಕಲಾವಿದರು ಹಾಗೂ ನಿರ್ಮಾಪಕರು ನಡೆಸುತ್ತಿರುವ ಹೋರಾಟವನ್ನು ಅಖಿಲ ಕರ್ನಾಟಕ ಕೇಂದ್ರ ಕನ್ನಡ ಕ್ರಿಯಾ ಸಮಿತಿ ಬೆಂಬಲಿಸಿದೆ ಎಂದು ಕನ್ನಡ ಕ್ರಿಯಾ ಸಮಿತಿ ಅಧ್ಯಕ್ಷ ಚಂದ್ರಕಾಂತ ಬೆಲ್ಲದ ಹೇಳಿದ್ದಾರೆ. ಗುರುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ನಿರ್ಮಾಪಕರು, ಕಲಾವಿದರು ಹಾಗೂ ತಂತ್ರಜ್ಞರು ನಡೆಸುತ್ತಿರುವ ಹೋರಾಟ ನ್ಯಾಯಯುತವಾಗಿದೆ. ಪರಭಾಷಾ ಚಿತ್ರಗಳ ಡಬ್ಬಿಂಗ್ ನಿಷೇಧಿಸುವುದರಿಂದ ಇಲ್ಲಿಯ ಕಲಾವಿದರಿಗೆ ಮತ್ತು ಚಿತ್ರರಂಗದ ಕಾರ್ಮಿಕರಿಗೆ ನ್ಯಾಯ ಒದಗಿಸಿದಂತಾಗುತ್ತದೆ ಎಂದು ಹೇಳಿದರು. ಸಮಿತಿ ಗೌರವಾಧ್ಯಕ್ಷ ನಾಡೋಜ ಚೆನ್ನವೀರ ಕಣವಿ ಮಾತನಾಡಿ, ಡಬ್ಬಿಂಗ್ ಕನ್ನಡ ಚಲನಚಿತ್ರದ ಅಸ್ತಿತ್ವಕ್ಕೆ ಧಕ್ಕೆ ತರಲಿದೆ. ಸದ್ಯ ನಡೆಯುತ್ತಿರುವ ಡಬ್ಬಿಂಗ್ ವಿರುದ್ಧದ ಹೋರಾಟಕ್ಕೆ ಚಲನಚಿತ್ರ ಮಂಡಳಿ ಏಕೆ ಬೆಂಬಲ ನೀಡುತ್ತಿಲ್ಲ ಎನ್ನುವುದು ತಿಳಿಯುತ್ತಿಲ್ಲ. ಸರ್ಕಾರ ಜಾರಿಗೊಳಿಸುತ್ತಿರುವ ಸಾಂಸ್ಕೃತಿಕ ನೀತಿಯಲ್ಲಿ ಡಬ್ಬಿಂಗ್ ಚಿತ್ರಗಳಿಗೆ ಅವಕಾಶ ಮಾಡಿಕೊಡಬಾರದು ಎಂದರು. ಸುದ್ದಿಗೋಷ್ಠಿಯಲ್ಲಿ ಹಿರಿಯ ವಿಮರ್ಶಕ ಡಾ. ಗಿರಡ್ಡಿ ಗೋವಿಂದರಾಜ, ಪ್ರೊ. ಬಿ. ಸುಕನ್ಯಾ, ನಿಂಗಣ್ಣ ಕುಂಟಿ, ಹನುಮಾಕ್ಷಿ ಗೋಗಿ, ಡಾ. ಗುರುಲಿಂಗ ಕಾಪಸೆ ಇದ್ದರು.