ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಧಾರವಾಡ

ಪಾಲಿಕೆ ಬೊಕ್ಕಸ ಸೇರಿತು ರು. 86 ಲಕ್ಷ ತೆರಿಗೆ

Lingaraj Badiger
Updated On : 31 Jan 2014, 10:54 am

ಕನ್ನಡಪ್ರಭ ವಾರ್ತೆ, ಹುಬ್ಬಳ್ಳಿ, ಜ. 30
ಪಾಲಿಕೆಗೆ ಸೇರಿದ ಮಳಿಗೆ ಬಾಡಿಗೆಗೆ ಪಡೆದುಕೊಂಡು ಬಾಡಿಗೆ ತುಂಬದೇ ಇರುವ ಮಾಲೀಕರ ವಿರುದ್ಧ ಸಮರ ಸಾರಿರುವ ಹುಬ್ಬಳ್ಳಿ-ಧಾರವಾಡ ಮಹಾನಗರ ಪಾಲಿಕೆ ಜಾಹೀರಾತು ತೆರಿಗೆ ತುಂಬದವರ ವಿರುದ್ಧವೂ ಕಠಿಣ ಕ್ರಮ ಕೈಗೊಂಡಿತ್ತು. ಪರಿಣಾಮ ರು. 86 ಲಕ್ಷ ಬಾಕಿ ತೆರಿಗೆ ಪಾಲಿಕೆ ಬೊಕ್ಕಸ ಸೇರಿದೆ.
ಕಳೆದ ಮೂರ್ನಾಲ್ಕು ವರ್ಷಗಳಿಂದ ಬಾಕಿ ಉಳಿದುಕೊಂಡಿರುವ ಜಾಹೀರಾತು ತೆರಿಗೆ ವಸೂಲಿಗೆ ಪಾಲಿಕೆ ಪ್ರಸಕ್ತ ವರ್ಷ ಕಟ್ಟು ನಿಟ್ಟಿನ ಕ್ರಮ ಕೈಗೊಂಡಿತ್ತಲ್ಲದೇ, ಪ್ರಸ್ತುತ ಆರ್ಥಿಕ ವರ್ಷದೊಳಗಾಗಿ ಎಲ್ಲ ಬಾಕಿ ವಸೂಲಿ ಮಾಡಲು ಪಣ ತೊಟ್ಟಿದೆ. ಈ ನಿಟ್ಟಿನಲ್ಲಿ ಪಾಲಿಕೆ ನಿರ್ದಾಕ್ಷಿಣ್ಯ ಕ್ರಮಕ್ಕೆ ಮುಂದಾಗಿದೆ.
ಜಾಹೀರಾತು ಫಲಕ: ವಿವಿಧ ಕಂಪನಿಗಳ ಉತ್ಪನ್ನ ಇತ್ಯಾದಿ ಸಂಗತಿಗಳ ಕುರಿತು ಜನರ ಗಮನ ಸೆಳೆಯಲು ಹುಬ್ಬಳ್ಳಿ ನಗರದ ಆಯಕಟ್ಟಿನ ಜಾಗದಲ್ಲಿ ಜಾಹೀರಾತು ಕಂಪನಿಗಳು ಜಾಹೀರಾತು ಫಲಕಗಳನ್ನು ಹಾಕಿವೆ. ಈ ಜಾಹೀರಾತು ಕಂಪನಿಗಳು ತಾತ್ಪೂರ್ತಿಕ ಜಾಹೀರಾತು, ಕಟ್ಟಡಗಳ ಮೇಲೆ ಹೋಲ್ಡಿಂಗ್ ಅಳವಡಿಸುವುದು ಹಾಗೂ ಬಸ್ ಶೆಲ್ಟರ್ ಸೇರಿದಂತೆ ಜನನಿಭೀಡ ಪ್ರದೇಶದಲ್ಲಿ ಜಾಹೀರಾತು ಫಲಕ ಅಳವಡಿಸಲು ಪಾಲಿಕೆಯಿಂದ ಟೆಂಡರ್ ಮುಖಾಂತರ ಹಾಗೂ ತೆರಿಗೆ ಮುಖಾಂತರ ಅನುಮತಿ ಪಡೆದುಕೊಂಡಿರುತ್ತವೆ. ಹೀಗೆ ಜಾಹೀರಾತು ಹಾಕಲು ಅನುಮತಿ ಪಡೆದುಕೊಂಡಿರುವ ಕಂಪನಿಗಳು ಪಾಲಿಕೆಗೆ ತುಂಬ ಬೇಕಾದ ತೆರಿಗೆ ಬಾಕಿ ಉಳಿಸಿಕೊಂಡಿವೆ.
ಮೂರ್ನಾಲ್ಕು ವರ್ಷದ ಬಾಕಿ: ಜಾಹೀರಾತು ಕಂಪನಿಗಳು ಅವಳವಡಿಸುವ ಜಾಹೀರಾತಿಗೆ ಕಾಲಕ್ಕೆ ಸರಿಯಾಗಿ ತೆರಿಗೆ ತುಂಬಬೇಕೆಂಬ ಸೂಚನೆಯಿದ್ದಾಗಲೂ ನಿರ್ಲಕ್ಷಿಸುತ್ತಿವೆ. ಜಾಹೀರಾತು ಅವಳವಡಿಸುವ ಮೂಲಕ ಲಕ್ಷಾಂತರ ರುಪಾಯಿ ಲಾಭ ಗಿಟ್ಟಿಸಿಕೊಳ್ಳುವ ಜಾಹೀರಾತು ಕಂಪನಿಗಳು ಪಾಲಿಕೆಗೆ ತೆರಿಗೆ ತುಂಬುವ ಕಾಲ ಬಂದಾಗ ಸಬೂಬು ಹೇಳುತ್ತವೆ. ಹೀಗೆ ಸಬೂಬು ಹೇಳುತ್ತಾ ಬಂದ ಪರಿಣಾಮ ಕಳೆದ ಮೂರ್ನಾಲ್ಕು ವರ್ಷಗಳಿಂದ ಕೋಟ್ಯಂತರ ರುಪಾಯಿ ಬಾಕಿ ಉಳಿದು ಬಿಟ್ಟಿತ್ತು.
ರು. 1.16 ಕೋಟಿ ಬಾಕಿ ಇತ್ತು: ಕಳೆದ ಆರ್ಥಿಕ ವರ್ಷ (2013 ಮಾರ್ಚ್) ಮುಗಿಯುವ ಕಾಲಕ್ಕೆ ಜಾಹೀರಾತುದಾರರು ಮೂರ್ನಾಲ್ಕು ವರ್ಷಗಳಿಂದ ಪಾಲಿಕೆಗೆ ಪಾವತಿಸಬೇಕಾದ ತೆರಿಗೆ ಮೊತ್ತ ರು. 1.16 ಕೋಟಿ ಬಾಕಿ ಉಳಿದಿತ್ತು. ಈ ಕುರಿತು ಕಟ್ಟು ನಿಟ್ಟಿನ ಕ್ರಮಕ್ಕೆ ಮುಂದಾದ ಪರಿಣಾಮ ಪಾಲಿಕೆ ಇದೀಗ ರು. 86.28 ಲಕ್ಷ ತೆರಿಗೆ ಬಾಕಿ ವಸೂಲಿ ಮಾಡುವಲ್ಲಿ ಯಶಸ್ವಿಯಾಗಿದೆ. ಆರ್ಥಿಕ ವರ್ಷ ಮುಗಿಯಲು ಇನ್ನೂ ಎರಡು ತಿಂಗಳ ಬಾಕಿ ಇದ್ದು, ಕಳೆದ ವರ್ಷ ಏಪ್ರಿಲ್‌ನಿಂದ ಡಿಸೆಂಬರ್‌ವರೆಗೆ ಪಾಲಿಕೆ ರು. 86.28 ಲಕ್ಷ ತೆರಿಗೆ ವಸೂಲಿ ಮಾಡಿದೆ. ಇದೀಗ ಬಾಕಿ ಉಳಿದಿರುವ ರು. 36 ಲಕ್ಷ ತೆರಿಗೆ ವಸೂಲಿಗೂ ಪಾಲಿಕೆ ಸಮರೋಪಾದಿಯಲ್ಲಿ ಕಾರ್ಯಾಚರಣೆ ಕೈಗೊಳ್ಳಲಿದೆ. ಈಗಾಗಲೇ ಹಣ ಪಾವತಿಸಲು ನೊಟೀಸ್ ಜಾರಿ ಮಾಡಿರುವ ಪಾಲಿಕೆ ಆದಷ್ಟು ಬೇಗನೆ ಬಾಕಿ ಹಣ ಪಾವತಿಸದಿದ್ದರೆ ಕಾನೂನು ಕ್ರಮಕ್ಕೆ ಮುಂದಾಗುವುದಾಗಿ ಎಚ್ಚರಿಸಿದೆ. ಒಟ್ಟಾರೆ ಮೂರ್ನಾಲ್ಕು ವರ್ಷಗಳಿಂದ ಬಾಕಿ ಉಳಿದಿದ್ದ ಜಾಹೀರಾತು ತೆರಿಗೆ ಹಣ ವಸೂಲಿ ಮಾಡಿರುವ ಪಾಲಿಕೆಯ ಮಾರುಕಟ್ಟೆ ವಿಭಾಗದ ಸಿಬ್ಬಂದಿ ವರ್ಗ ಆರ್ಥಿಕ ವರ್ಷಾಂತ್ಯಕ್ಕೆ ಪೂರ್ತಿ ಹಣ ವಸೂಲಿ ಮಾಡಿಯೇ ತೀರುವುದಾಗಿ ನಿರ್ಧರಿಸಿದೆ.
-ಪ್ರಕಾಶ ಎಸ್. ಶೇಟ್

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement