ಪ್ರಶಸ್ತಿ ಪ್ರದಾನ ಇಂದು
ಧಾರವಾಡ: ಡಾ. ದ.ರಾ. ಬೇಂದ್ರೆ ರಾಷ್ಟ್ರೀಯ ಸ್ಮಾರಕ ಟ್ರಸ್ಟ್‌ನ ಪ್ರತಿಷ್ಠಿತ ಅಂಬಿಕಾತನಯದತ್ತ ರಾಷ್ಟ್ರೀಯ ಪ್ರಶಸ್ತಿ ಪ್ರದಾನ ಸಮಾರಂಭ ಜ. 31ರಂದು ಬೇಂದ್ರೆ ಭವನದಲ್ಲಿ ನಡೆಯಲಿದೆ. ಧಾರವಾಡದ ಡಾ. ಗುರುಲಿಂಗ ಕಾಪಸೆ ಹಾಗೂ ಬೆಂಗಳೂರಿನ ಡಾ. ಜಿ. ಕೃಷ್ಣಪ್ಪ ಅವರಿಗೆ ದ.ರಾ. ಬೇಂದ್ರೆ ಅವರ 119ನೇ ಜನ್ಮದಿನದ ಅಂಗವಾಗಿ ಪ್ರದಾನ ಮಾಡಲಾಗುತ್ತಿದೆ.
ಅಂದು ಬೆಳಗ್ಗೆ 10:30ಕ್ಕೆ ಡಾ. ಗುರುಲಿಂಗ ಕಾಪಸೆ ಅವರ ಸಾಹಿತ್ಯ-ಸಾಧನೆ ಕುರಿತು ಬೆಳಗಾವಿಯ ಡಾ. ಬಸವರಾಜ ಜಗಜಂಪಿ ವಿಮರ್ಶಿಸುವರು. ಡಾ. ಜಿ. ಕೃಷ್ಣಪ್ಪ ಅವರ ಸಾಹಿತ್ಯ ಸಾಧನೆ ಕುರಿತು ಬೆಂಗಳೂರಿನ ಡಾ. ಜಿ.ಬಿ. ಹರೀಶ ವಿಮರ್ಶಿಸುವರು. ಇದೇ ಸಂದರ್ಭದಲ್ಲಿ ಬೇಂದ್ರೆ ಟ್ರಸ್ಟ್ ಪ್ರಸಾರಂಗದ 13ನೇ ಪುಸ್ತಕ ಆನಂದ ಝುಂಜರವಾಡ ಅವರು ಸಂಪಾದಿಸಿದ ದೂರ್ವಾಂಕುರ ಕೃತಿಯನ್ನು ಪ್ರೊ. ದುಷ್ಯಂತ ನಾಡಗೌಡ ಬಿಡುಗಡೆಗೊಳಿಸುವರು.
ನಕಲಿ ಸಹಿ ಮಾಡಿ ಜಮೀನು ಮಾರಾಟ: ದೂರು
ಧಾರವಾಡ: ನಕಲಿ ಸಹಿ ಮಾಡಿಸಿ ಜಮೀನು ಮಾರಾಟ ಮಾಡಿದ ಪ್ರಕರಣ ಕುರಿತು ಇಲ್ಲಿನ ಉಪನಗರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ. ವಂಚನೆಗೊಳಗಾದ ವೀಣಾ ಬಸವರಾಜ ಕುಲ್ಲೊಳ್ಳಿ ದೂರು ನೀಡಿದ್ದು, ಧಾರವಾಡ ತಾಲೂಕಿನ ದುರ್ಗದಕೇರಿ ಗ್ರಾಮದ ಸ.ನಂ.22 ರಲ್ಲಿನ 18.5 ಎಕರೆ ಜಮೀನಿನ ವಾರಸುದಾರರು ವೀಣಾ. ಆದರೆ, ಅವರ ಬದಲು ಮತ್ತೋರ್ವ ಮಹಿಳೆಯ ಸಹಿ ಮಾಡಿಸಿ ಚೈತನ್ಯ ನಗರದ ನಿಂಗರಾಜ ರಾಮಪ್ಪ ಮಾಡೊಳ್ಳಿ ಉರ್ಫ್ ಸಿದ್ದಪ್ಪನವರ, ಪ್ರಕಾಶ ರಾಮಪ್ಪ ಮಾಡೊಳ್ಳಿ, ಜೋಕಮಾರ ಗೋಸ್ವಾಲಿ, ರವಿ ಯರಗಟ್ಟಿ, ಜಿಲಾನಿ ಬಿಸ್ತಿ ಮತ್ತು ಇತರರು ನನ್ನ ಹೆಸರಿನಲ್ಲಿರುವ ಜಮೀನನ್ನು ಮಾರಾಟ ಮಾಡಿದ್ದಾರೆ ಎಂದು ದೂರು ನೀಡಿದ್ದಾರೆ. ಪ್ರಕರಣ ದಾಖಲಿಸಿಕೊಂಡಿರುವ ಸಿಪಿಐ ರಾಮನಗೌಡ ಹಟ್ಟಿ ತನಿಖೆ ನಡೆಸುತ್ತಿದ್ದಾರೆ.
ಬೈಕ್ ಕಳ್ಳತನ
ಧಾರವಾಡ: ಧಾರವಾಡ ನಗರದ ಕೋರ್ಟ್ ಎದುರಿನ ಬಸಪ್ಪ ಖಾನಾವಳಿ ಬಳಿ ನಿಲ್ಲಿಸಿದ್ದ ಬೈಕ್ ಕಳ್ಳತನವಾಗಿರುವ ಕುರಿತು ಉಪನಗರ ಠಾಣೆಯಲ್ಲಿ ದೂರು ದಾಖಲಾಗಿದೆ. ಗುಲಗಂಜಿಕೊಪ್ಪ ನಿವಾಸಿ ಸುರೇಶ ಶಿರಸಂಗಿ ಅವರ ಹೀರೊ ಹೋಂಡಾ ಬೈಕ್ ಕಳ್ಳತನ ಮಾಡಲಾಗಿದೆ.
ವ್ಯಕ್ತಿ ಅನುಮಾನಾಸ್ಪದ ಸಾವು
ಹುಬ್ಬಳ್ಳಿ: ವರೂರ ಸರ್ವೀಸ್ ರಸ್ತೆಯಲ್ಲಿ ವ್ಯಕ್ತಿಯೊಬ್ಬ ಅನುಮಾನಾಸ್ಪದವಾಗಿ ಸಾವನ್ನಪ್ಪಿರುವ ಘಟನೆ ಬುಧವಾರ ರಾತ್ರಿ ನಡೆದಿದೆ. ಮೃತ ವ್ಯಕ್ತಿಯನ್ನು ಸವಣೂರಿನ ಮಾಲತೇಶ ಕಬ್ಬೂರ (25) ಎಂದು ಗುರುತಿಸಲಾಗಿದೆ. ಈತನ ತಲೆಯ ಭಾಗಕ್ಕೆ ಶಸ್ತ್ರದಿಂದ ಬಲವಾಗಿ ಹೊಡೆದಿದ್ದಾಗಿ ತಿಳಿದು ಬಂದಿದೆ. ಹುಬ್ಬಳ್ಳಿ ಗ್ರಾಮೀಣ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಬಸವರಾಜ ಕೊಪ್ಪರ ನಿಧನ
ಹುಬ್ಬಳ್ಳಿ: ಹುಬ್ಬಳ್ಳಿ ನಿವಾಸಿ ಬಸವರಾಜ ಶಿವಪ್ಪ ಕೊಪ್ಪರ (58) ಗುರುವಾರ ನಿಧನ ಹೊಂದಿದರು. ಮೃತರು ಪತ್ನಿ, ಇಬ್ಬರು ಪುತ್ರರು ಹಾಗೂ ಅಪಾರ ಬಂಧುಬಳಗವನ್ನು ಅಗಲಿದ್ದಾರೆ.