ಬಗರ್ ಹುಕುಂ ಜಮೀನು ಮಾಲೀಕತ್ವಕ್ಕೆ ಆಗ್ರಹ
ಧಾರವಾಡ: ಬಗರ್ ಹುಕುಂ ಸಾಗುವಳಿ ಸಕ್ರಮಗೊಳಿಸಿ ಮಾಲೀಕತ್ವ ನೀಡಲು ಒತ್ತಾಯಿಸಿ ಬಹುಜನ ಸಮಾಜ ಪಕ್ಷದ ತಾಲೂಕು ಘಟಕದ ವತಿಯಿಂದ ತಹಸೀಲ್ದಾರ್ ಕಚೇರಿ ಗುರುವಾರ ಧರಣಿ ನಡೆಸಲಾಯಿತು. ಅಕ್ರಮ ಸಾಗುವಳಿಯನ್ನು ಸಕ್ರಮಗೊಳಿಸಿ ಜಮೀನಿನ ಮಾಲೀಕತ್ವ ನೀಡಬೇಕೆಂದು ಅನೇಕ ಬಾರಿ ಹೋರಾಟ ಮಾಡಿದ್ದರೂ ಆಡಳಿತ ಪಕ್ಷಗಳು ಗಮನಕೊಡದೆ ನಿರ್ಲಕ್ಷಿಸುತ್ತಿವೆ ಎಂದು ಪ್ರತಿಭಟನಾಕಾರರು ಆರೋಪಿಸಿದರು. ರಾಜ್ಯ ಕಾರ್ಯದರ್ಶಿ ಲಕ್ಷ್ಮಣ ಬಕ್ಕಾಯಿ ನೇತೃತ್ವದಲ್ಲಿ ನಡೆದ ಧರಣಿಯಲ್ಲಿ ಲಕ್ಷ್ಮಣ ದೊಡ್ಡಮನಿ, ಎಸ್.ಬಿ. ಚಿಕ್ಕೊಪ್ಪ, ಹನುಮಂತಪ್ಪ ಮಾದರ, ಬಿ.ಎಸ್. ಗೌಡರ ಇದ್ದರು.
ಧಾರವಾಡ: ಸ್ಲಂ ಮೋರ್ಚಾ ಪದಾಧಿಕಾರಿಗಳ ಆಯ್ಕೆ
ಧಾರವಾಡ: ಧಾರವಾಡ ವಿಧಾನಸಭಾ ಕ್ಷೇತ್ರದ ಸ್ಲಂ ಮೋರ್ಚಾ ಅಧ್ಯಕ್ಷರಾಗಿ ಮಂಜುನಾಥ ನಡಟ್ಟಿ, ಪ್ರಧಾನ ಕಾರ್ಯದರ್ಶಿಯಾಗಿ ಗುರುಸ್ವಾಮಿ ಹಿರೇಮಠ ಆಯ್ಕೆಗೊಂಡರು. ರಾಜ್ಯ ಸ್ಲಂ ಮೋರ್ಚಾ ಪ್ರ. ಕಾರ್ಯದರ್ಶಿ ವೀರೇಶ ಅಂಚಟಗೇರಿ ಮಾತನಾಡಿ, ದೇಶದಲ್ಲಿ ಸ್ಲಂಗಳು ಕಾಂಗ್ರೆಸ್‌ನ ಪಾಪದ ಕೂಸುಗಳಾಗಿವೆ. ಇವುಗಳಿಂದ ಮತ ಪಡೆದ ಕಾಂಗ್ರೆಸ್ ಕೊಳಚೆ ಪ್ರದೇಶಗಳನ್ನು ನಿರ್ಲಕ್ಷಿಸಿದ್ದು, ನರೇಂದ್ರ ಮೋದಿ ಪ್ರಧಾನ ಮಂತ್ರಿಯನ್ನಾಗಿ ಮಾಡುವ ಮೂಲಕ ಸ್ಲಂ ಮುಕ್ತ ದೇಶ ನಿರ್ಮಾಣಕ್ಕೆ ಯತ್ನಿಸೋಣ ಎಂದು ಹೇಳಿದರು. ಪ್ರಕಾಶ ಗೋಡಬೋಲೆ, ವಿಜಯಾನಂದಶೆಟ್ಟಿ, ಮೋಹನ ರಾಮದುರ್ಗ, ಸೂರಕೆ ಈರಣ್ಣ ಹಪ್ಪಳಿ, ಸುನೀಲ ಮೋರೆ, ಮಂಜು ಚೋಳಪ್ಪವರ, ಬಸವರಾಜ ಬೆಣ್ಣಿ, ಬಸವರಾಜ ರುದ್ರಾಪುರ, ಸಿದ್ದು ಕಲ್ಯಾಣಶೆಟ್ಟಿ, ರವಿ ಹೊರಗಿನಮಠ ಇದ್ದರು.