ಬಗರ್‌ಹುಕುಂ ಸಾಗುವಳಿ ಸಕ್ರಮಕ್ಕೆ ಆಗ್ರಹ
ಹುಬ್ಬಳ್ಳಿ: ಬಗರ್‌ಹುಕುಂ ಸಾಗುವಳಿ ಸಕ್ರಮಕ್ಕೆ ಹಾಗೂ ವಸತಿಹೀನರಿಗೆ ಮನೆ ನಿರ್ಮಿಸುವಂತೆ ಒತ್ತಾಯಿಸಿ ಬಹುಜನ ಸಮಾಜ ಪಾರ್ಟಿ ಹುಬ್ಬಳ್ಳಿ-ಧಾರವಾಡ ಮಹಾನಗರ ಘಟಕದ ಕಾರ್ಯಕರ್ತರು ಮುಖ್ಯಮಂತ್ರಿಯವರಿಗೆ ತಹಸೀಲ್ದಾರ ಮುಖಾಂತರ ಗುರುವಾರ ಮನವಿ ಸಲ್ಲಿಸಿದರು.
ವಿ. ಬಾಲಸುಬ್ರಮಣಿಯವರ ಸಮಿತಿ ವರದಿಯನ್ನು ಸರ್ಕಾರ ತಕ್ಷಣ ಒಪ್ಪಿಕೊಳ್ಳಬೇಕು. ಈ ವರದಿಯಲ್ಲಿ ಪ.ಜಾತಿ-ಪಂಗಡ, ಹಿಂದುಳಿದ ಜಾತಿ, ಅರಣ್ಯವಾಸಿಗಳು ಮತ್ತು ಭೂರಹಿತರು ರಾಜ್ಯಾದ್ಯಂತ ಅಕ್ರಮವಾಗಿ ಸಾಗುವಳಿ ಮಾಡಿಕೊಂಡಿರುವುದನ್ನು ಪ್ರತ್ಯೇಕಗೊಳಿಸಲು ಈಗಾಗಲೇ ಅರ್ಜಿ ಸಲ್ಲಿಸಲಾಗಿದೆ. ಇವರ ಅಕ್ರಮ ಸಾಗುವಳಿಯನ್ನು ಸಕ್ರಮಗೊಳಿಸಿ ಸಾಗುವಳಿ ಪತ್ರ ನೀಡಬೇಕು ಎಂದು ಕಾರ್ಯಕರ್ತರು ಆಗ್ರಹಿಸಿದರು.
ಸರ್ಕಾರದ ಸೀಲಿಂಗ್ ಲಿಮಿಟ್‌ಗಿಂತ ಹೆಚ್ಚುವರಿ ಭೂಮಿ ಹೊಂದಿರುವ ಭೂ ಮಾಲೀಕರಿಂದ ಭೂಮಿಯನ್ನು ಸರ್ಕಾರ ವಶಪಡಿಸಿಕೊಂಡು ಭೂರಹಿತರಿಗೆ ಹಂಚಿಕೆ ಮಾಡಬೇಕು. 1991 ಮತ್ತು 1999ರ ಅವಧಿಯಲ್ಲಿ ನಿಗದಿತ ನಮೂನೆಯಲ್ಲಿ ಅರ್ಜಿ ಸಲ್ಲಿಸಲು ಸಾಧ್ಯವಾಗದ ಮತ್ತು ನಂತರದ ದಿನಗಳಲ್ಲಿ ಬಗರ್‌ಹುಕುಂ ಸಾಗುವಳಿ ಮಾಡುತ್ತಿರುವ ಭೂರಹಿತರು ಹಾಗೂ ಸಣ್ಣ ಹಿಡುವಳಿದಾರರಿಗೆ ಮತ್ತೊಮ್ಮೆ ಅರ್ಜಿ ಸಲ್ಲಿಸಲು ಅವಕಾಶ ನೀಡಬೇಕು ಎಂದು ಕೋರಿದರು. ರಾಜ್ಯದ ಎಲ್ಲ ವಸತಿಹೀನರನ್ನು ಗುರುತಿಸಿ ಅವರಿಗೆ ಮನೆ ನಿರ್ಮಿಸಿಕೊಡಲು ಬಜೆಟ್‌ನಲ್ಲಿ ಅನುದಾನ ಕಾಯ್ದಿರಿಸಬೇಕು ಹಾಗೂ ಮತ್ತಿತರ ಬೇಡಿಕೆಗಳ ಈಡೇರಿಕೆಗೆ ಕ್ರಮ ಕೈಗೊಳ್ಳುವಂತೆ ಆಗ್ರಹಿಸಿದರು. ಬಿಎಸ್ಪಿಯ ಪ್ರೇಮನಾಥ ಚಿಕ್ಕತುಂಬಳ, ರೇವಣಸಿದ್ದಪ್ಪ ಹೊಸಮನಿ, ರಾಜಕುಮಾರ ವಾಲ್ಮೀಕಿ, ನಿಂಗಪ್ಪ ಕೂಡಒಕ್ಕಲಿಗರ ಮತ್ತಿತರರು ಈ ಸಂದರ್ಭದಲ್ಲಿ ಹಾಜರಿದ್ದರು.
--
ಅಕ್ರಮ ಮದ್ಯ ಮಾರಾಟ: ಮಹಿಳೆ ಬಂಧನ
ಹುಬ್ಬಳ್ಳಿ: ಹುಬ್ಬಳ್ಳಿಯ ಸಿದ್ದೇಶ್ವರ ಕಾಲೊನಿಯಲ್ಲಿ ಅಕ್ರಮವಾಗಿ ಮದ್ಯ ಮಾರಾಟ ಮಾಡುತ್ತಿದ್ದ ಮಹಿಳೆಯೊಬ್ಬಳನ್ನು ವಿದ್ಯಾನಗರ ಪೊಲೀಸರು ಬಂಧಿಸಿದ್ದಾರೆ. ಬಂಧಿತ ಮಹಿಳೆಯನ್ನು ಹನುಮಂತನಗರದ ಸಿದ್ದೇಶ್ವರ ಕಾಲೋನಿಯ ಸರೋಜಾ ರಾಜು ಬದ್ದಿ ಎಂದು ಗುರುತಿಸಲಾಗಿದೆ. ಅಕ್ರಮ ಮದ್ಯ ಮಾರಾಟದ ಖಚಿತ ಮಾಹಿತಿಯನ್ನು ಆಧರಿಸಿ ದಾಳಿ ಮಾಡಿದ ಪೊಲೀಸರು ಮಹಿಳೆಯಲ್ಲಿ ಮನೆಯಲ್ಲಿ ಇರಿಸಿದ್ದ ರು. 2 ಸಾವಿರ ಮೌಲ್ಯದ ವಿವಿಧ ಕಂಪನಿಯ ಮದ್ಯ ವಶಪಡಿಸಿಕೊಳ್ಳಲಾಗಿದೆ ಎಂದು ಪ್ರಕಟಣೆ ತಿಳಿಸಿದೆ.