ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಧಾರವಾಡ

ಪ್ರದರ್ಶಿನಿಯಲ್ಲಿ ಎಬಿವಿಪಿ ಹೋರಾಟ ಝಲಕ್

Vishwanath S
Updated On : 1 Feb 2014, 10:55 am

ಹುಬ್ಬಳ್ಳಿ: ಪರೀಕ್ಷಾ ಶುಲ್ಕ ಏರಿಕೆ ವಿರುದ್ಧ ಹೋರಾಟ... 2006ರ ಸಿಇಟಿ ಕಾಯ್ದೆ ವಿರುದ್ಧ ಪ್ರತಿಭಟನೆ... ಪಾಕ್ ಕೃತ್ಯ ಖಂಡಿಸಿ ಮಾನವ ಸರಪಳಿ... ಸ್ವಾಮಿ ವಿವೇಕಾನಂದರ ವಾಣಿ...
ಇಂಥ ಹಲವಾರು ಹೋರಾಟ, ಪ್ರತಿಭಟನೆಗಳ ನೆನಪುಗಳು ಮರುಕಳಿಸಿದ್ದು ಹುಬ್ಬಳ್ಳಿಯ ಬಿವಿಬಿ ಎಂಜಿನಿಯರಿಂಗ್ ಕಾಲೇಜಿನಲ್ಲಿ ಶುಕ್ರವಾರದಿಂದ ಪ್ರಾರಂಭಗೊಂಡಿರುವ ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್‌ನ 33ನೇ ರಾಜ್ಯ ಸಮ್ಮೇಳನದಲ್ಲಿ.
ಸಮ್ಮೇಳನದ ಅಂಗವಾಗಿ ಏರ್ಪಡಿಸಿದ್ದ ಪ್ರದರ್ಶಿನಿಯಲ್ಲಿ ಎಬಿವಿಪಿ ಚಟುವಟಿಕೆ ಇಂಥ ಹಲವಾರು ಛಾಯಾಚಿತ್ರಗಳು ಕಂಡುಬಂದವು. ಮಡಿಕೇರಿ, ಚಿತ್ರದುರ್ಗ, ಬಿಜಾಪುರ, ಧಾರವಾಡ, ತುಮಕೂರು, ಮಂಗಳೂರು, ಬೆಂಗಳೂರು, ಮೈಸೂರು ಸೇರಿದಂತೆ ರಾಜ್ಯದ ವಿವಿಧೆಡೆ ನಡೆದ ಎಬಿವಿಪಿ ಹೋರಾಟಗಳ ಛಾಯಾಚಿತ್ರ, ಪತ್ರಿಕೆಗಳಲ್ಲಿ ಪ್ರಕಟಗೊಂಡ ಹೋರಾಟದ ವರದಿಗಳ ಪತ್ರಿಕಾ ತುಣುಕುಗಳು, ವಿವಿಧ ಜಿಲ್ಲೆಗಳಲ್ಲಿನ ಪ್ರಮುಖ ಸ್ಥಾನಗಳು, ಧಾರವಾಡ ಜಿಲ್ಲೆಯ ಮುರುಘಾಮಠ, ಮೂರುಸಾವಿರ ಮಠ, ಸಿದ್ಧಾರೂಢ ಮಠ, ಕರ್ನಾಟಕ ವಿವಿಯ ಛಾಯಾಚಿತ್ರಗಳು ಪ್ರದರ್ಶಿನಿಯ ಮುಖ್ಯ ಆಕರ್ಷಣೆಗಳಾಗಿವೆ.
ಧಾರವಾಡ ಸಾಹಿತಿಗಳ ಪರಿಚಯ ವಿಭಾಗದಲ್ಲಿ ದ.ರಾ. ಬೇಂದ್ರೆ, ನಾಡೋಜ ಚನ್ನವೀರ ಕಣವಿ, ಜಿ.ಎಸ್. ಆಮೂರ, ವಿ.ಕೃ. ಗೋಕಾಕ ಮತ್ತಿತರ ಛಾಯಾಚಿತ್ರ ಪ್ರದರ್ಶಿಸಲಾಗಿದ್ದು, ಬೇರೆ ಜಿಲ್ಲೆಗಳಿಂದ ಆಗಮಿಸಿರುವ ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್ ಸಾಹಿತ್ಯಾಸಕ್ತ ಕಾರ್ಯಕರ್ತರ ಕೇಂದ್ರಬಿಂದುವಾಗಿದೆ.
ಸ್ವಾಮಿ ವಿವೇಕಾನಂದರ 150ನೇ ಜನ್ಮ ಜಯಂತ್ಯುತ್ಸವ ಸಂದರ್ಭ 'ಪರಿವರ್ತನೆಗಾಗಿ ಯುವಶಕ್ತಿ' ಘೋಷಣೆಯೊಂದಿಗೆ ಆಯೋಜಿಸಿರುವ ಈ ಬಾರಿಯ ರಾಜ್ಯ ಸಮ್ಮೇಳನದ ಪ್ರದರ್ಶಿನಿಯಲ್ಲಿ ಸ್ವಾಮಿ ವಿವೇಕಾನಂದರ ತತ್ವಾದರ್ಶನಗಳನ್ನು ಲಗತ್ತಿಸಿರುವುದು ಮತ್ತೊಂದು ವಿಶೇಷ. ಕನ್ನಡ ಮತ್ತು ಇಂಗ್ಲಿಷ್ ಭಾಷೆಗಳಲ್ಲಿರುವ ವಿವೇಕ ವಾಣಿಯಲ್ಲಿ ಜೀವನ ಮೌಲ್ಯ ಬಿಂಬಿಸುವ ಹಾಗೂ ವ್ಯಕ್ತಿಯ ವ್ಯಕ್ತಿತ್ವ ವಿಕಸನ ಪ್ರೋತ್ಸಾಹಿಸುವ ವಿವೇಕಾನಂದರ ಹಲವಾರು ವಾಣಿಗಳು ಸಮ್ಮೇಳನದಲ್ಲಿ ಪಾಲ್ಗೊಂಡಿರುವ ಯುವಕರ ಮತ್ತೊಂದು ಆಕರ್ಷಣೆ. ಪ್ರದರ್ಶಿನಿಯ ಹೊರಗಡೆ ಗ್ರಾಮೀಣ ಜೀವನ ಶೈಲಿ ಬಿಂಬಿಸುವ ಚಕ್ಕಡಿ, ಕಬ್ಬುಗಳು, ಕೃಷಿ ಚಟುವಟಿಕೆ ಸಾಮಗ್ರಿಗಳನ್ನಿಡಲಾಗಿದ್ದು, ಸರಸ್ವತಿ ಹಾಗೂ ಸ್ವಾಮಿ ವಿವೇಕಾನಂದರ ಭಾವಚಿತ್ರಗಳನ್ನಿಡಲಾಗಿದೆ.
ಮೂರುಸಾವಿರ ಮಠದ ಶ್ರೀ ಗುರುಸಿದ್ಧ ರಾಜಯೋಗೀಂದ್ರ ಸ್ವಾಮೀಜಿ ಡೋಲು ಬಾರಿಸುವ ಮೂಲಕ ಪ್ರದರ್ಶಿನಿ ಉದ್ಘಾಟಿಸಿದರು. ಇದಕ್ಕೂ ಮೊದಲು ಎಬಿವಿಪಿಯ ಧ್ವಜಾರೋಹಣ ನೆರವೇರಿತು. ಎಬಿವಿಪಿ ರಾಜ್ಯಾಧ್ಯಕ್ಷ ಬಿ.ವಿ. ವಸಂತಕುಮಾರ, ಸಮ್ಮೇಳನದ ಸ್ವಾಗತ ಸಮಿತಿ ಅಧ್ಯಕ್ಷ ಅಶೋಕ ಶೆಟ್ಟರ, ಪ್ರಧಾನ ಕಾರ್ಯದರ್ಶಿ ಆನಂದ ಸಂಕೇಶ್ವರ, ಸಂಚಾಲಕರಾದ ಹನುಮಂತ ಶಿಗ್ಗಾಂವ, ಕೌಸ್ತುಭ ಸಂಶೀಕರ, ಎಬಿವಿಪಿ ರಾಷ್ಟ್ರೀಯ ಕಾರ್ಯಕಾರಿ ಸಮಿತಿ ಸದಸ್ಯ ಡಾ. ರಘು ಅಕ್ಕಮಂಚಿ ಮತ್ತಿತರರು ಹಾಜರಿದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement