ಮಾನವ ಸಂಪನ್ಮೂಲ ಸಂಪೂರ್ಣವಾಗಿ ಬಳಕೆಆಗದಿರುವುದೇ ಭಾರತ ಹಿಂದುಳಿಯಲು ಕಾರಣ
ಹುಬ್ಬಳ್ಳಿ: ಮಾನವ ಸಂಪನ್ಮೂಲದಲ್ಲಿ ಭಾರತಕ್ಕೆ ವಿಶ್ವದಲ್ಲಿ ಎರಡನೇ ಸ್ಥಾನ. ಆದರೆ, ಮಾನವ ಸಂಪನ್ಮೂಲ ಬಳಸಿಕೊಂಡು ಅಭಿವೃದ್ಧಿಯ ವಿಷಯಕ್ಕೆ ಬಂದಾಗ 128ನೇ ಸ್ಥಾನ. ಮಾನವ ಸಂಪನ್ಮೂಲ ಹಾಗೂ ಯುವ ಶಕ್ತಿಯ ಸಮರ್ಪಕ ಸದುಪಯೋಗ ಪಡಿಸಿಕೊಳ್ಳದಿರುವುದೇ ಈ ಹಿನ್ನಡೆಗೆ ಕಾರಣ ಎಂದು ಬಿಜಾಪುರ ಮಹಿಳಾ ವಿಶ್ವ ವಿದ್ಯಾಲಯದ ಕುಲಪತಿ ಮೀನಾ ಚಂದಾವರಕರ ಕಳವಳ ವ್ಯಕ್ತಪಡಿಸಿದರು.
ಹುಬ್ಬಳ್ಳಿಯ ಬಿವಿಬಿ ಕಾಲೇಜ್ ಕ್ಯಾಂಪಸ್ನಲ್ಲಿ ಆಯೋಜಿಸಲಾಗಿರುವ ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್ 33ನೇ ರಾಜ್ಯ ಸಮ್ಮೇಳನಕ್ಕೆ ಶುಕ್ರವಾರ ಚಾಲನೆ ನೀಡಿದ ಅವರು ಮಾತನಾಡಿ, ನಮ್ಮ ಯುವಕ-ಯುವತಿಯರಲ್ಲಿ ಸಾಮರ್ಥ್ಯಕ್ಕೆ ಕೊರತೆಯಿಲ್ಲ. ಆದರೆ, ಆ ಸಾಮರ್ಥ್ಯ ಗುರುತಿಸಿ ಸದುಪಯೋಗ ಪಡಿಸಿಕೊಳ್ಳುವ ಕಾರ್ಯ ಪ್ರಾಮಾಣಿಕವಾಗಿ ಆಗಿಲ್ಲ ಎಂದರು.
ದೇಶದ ಶಕ್ತಿ ಕೇವಲ ಗಿಡ-ಮರ, ನದಿ, ಪರ್ವತ ಅಷ್ಟೇ ಅಲ್ಲ, ಸೃಜನಶೀಲತೆ, ಸೇವಾ ಮನೋಭಾವ, ಸಾಮರ್ಥ್ಯ ಉಳ್ಳ ಮಾನವ ಸಂಪನ್ಮೂಲ ದೇಶದ ನಿಜವಾದ ಶಕ್ತಿ. ವಿಶ್ವದ ಒಟ್ಟಾರೆ 20ರಿಂದ 45 ವರ್ಷದೊಳಗಿನ ಯುವಕರನ್ನು ಪರಿಗಣನೆಗೆ ತೆಗೆದುಕೊಂಡಾಗ ಶೇ. 75ರಷ್ಟು ಯುವಕರು ಭಾರತದಲ್ಲಿಯೇ ಇದ್ದಾರೆ. ಈ ಕಾರಣಕ್ಕಾಗಿಯೇ ಭಾರತವನ್ನು 'ಯಂಗಿಸ್ತಾನ್' ಎಂದೂ ಕರೆಯಬಹುದು. ಈ 'ಯಂಗಿಸ್ತಾನ್' ಮನಸ್ಸು ಮಾಡಿದರೆ ಉತ್ತಮ ಹಿಂದುಸ್ತಾನ್ ಕಟ್ಟಲು ಸಾಧ್ಯ ಎಂದರು. ಇಂದಿನ ಯುವಕರು ಸೇವಾ ಮನೋಭಾವ, ದೇಶಾಭಿಮಾನ, ಪ್ರೀತಿಯ ಜತೆಗೆ ಸಕಾರಾತ್ಮಕ ಗುಣ ಬೆಳೆಸಿಕೊಳ್ಳಬೇಕು. ಸಾತ್ವಿಕ, ಸದ್ವಿಚಾರ, ಸತ್ಸಂಗ ಜೀವನದಲ್ಲಿ ಆಚರಣೆಗೆ ತಂದುಕೊಳ್ಳಬೇಕು. ಪ್ರಗತಿಯ ದಿಕ್ಕಿನಲ್ಲಿ ಕನಿಷ್ಠ-ಗರಿಷ್ಠ ಎಂಬುದನ್ನು ಲೆಕ್ಕಿಸದೇ ಮುನ್ನುಗ್ಗುವ ಛಾತಿ ಬೆಳೆಸಿಕೊಳ್ಳಬೇಕು. ಹಿಂಜರಿಕೆ ಸ್ವಭಾವದಿಂದ ಏನನ್ನೂ ಸಾಧಿಸಲಾಗದು ಎಂದರು.
ಸಂಘಟನಾ ಶಕ್ತಿಗಿರುವ ಬೆಲೆ ಇನ್ನಾವುದಕ್ಕೂ ಇಲ್ಲ. ಭಿನ್ನಾಭಿಪ್ರಾಯ ತೊರೆದು ಸಂಘಟನಾತ್ಮಕವಾಗಿ ಮಾಡುವ ಕಾರ್ಯದಲ್ಲಿ ಯಶಸ್ಸು ಕಟ್ಟಿಟ್ಟ ಬುತ್ತಿ. ಸಂಘಟನೆ ಸೃಜನಶೀಲತೆಯ ಜತೆಗೆ ವಿಭಿನ್ನ ದೃಷ್ಟಿಕೋನವನ್ನಿಟ್ಟುಕೊಂಡು ಮಾಡುವ ಕಾರ್ಯದಿಂದ ಸಮಾಜಕ್ಕೆ ಪ್ರೀತಿ ಪಾತ್ರವಾಗುತ್ತದೆ. ಎಬಿವಿಪಿ ತನ್ನೀ ವಿಶೇಷತೆಯಿಂದ ವಿದ್ಯಾರ್ಥಿಗಳ ಮನಸ್ಸಿನಲ್ಲಿ ಮನೆ ಮಾಡಿದೆ ಎಂದು ಅವರು ಹೇಳಿದರು.
ಸಾನ್ನಿಧ್ಯ ವಹಿಸಿದ್ದ ಮೂರುಸಾವಿರ ಮಠದ ಗುರುಸಿದ್ಧರಾಜಯೋಗೀಂದ್ರ ಸ್ವಾಮೀಜಿ ಆಶೀರ್ವಚನ ನೀಡಿ, ಎಲ್ಲಿಯವರೆಗೆ ಭಾರತೀಯ ಸಂಸ್ಕೃತಿ ಗಟ್ಟಿಯಾಗಿರುತ್ತದೆಯೋ ಅಲ್ಲಿಯವರೆಗೆ ಮತಾಂತರ ಸಾಧ್ಯವಿಲ್ಲ. ಮೆಕಾಲೆ ಭಾರತೀಯರನ್ನು ಮತಾಂತರ ಮಾಡಲು ಸಾಧ್ಯವಿಲ್ಲ ಎನ್ನುವ ಕಾರಣಕ್ಕಾಗಿ ಬ್ರಿಟಿಷ್ ಶಿಕ್ಷಣ ಪದ್ಧತಿ ಜಾರಿಗೆ ತಂದ. ಆದಾಗಿಯ್ಯೂ ಭಾರತೀಯ ಸಂಸ್ಕೃತಿ ಬಲವಾಗಿ ಬೇರೂರಿದ್ದರಿಂದ ಅಂದುಕೊಂಡಿದ್ದು ಆತನಿಂದ ಸಾಧಿಸಲಾಗಲಿಲ್ಲ. ನಾವು ಯಾವುದೇ ಕಾರಣಕ್ಕೂ ಭಾರತ ಮಾತೆಯನ್ನು ಹಾಗೂ ಜನ್ಮಕೊಟ್ಟ ತಾಯಿಯನ್ನು ಮರೆಯಬಾರದು ಎಂದರು.
ಹಿಂದೂ ಧರ್ಮ ಶ್ರೇಷ್ಠವಾದದ್ದು. ಸ್ವಾಮಿ ವಿವೇಕಾನಂದರು ಮೊದಲು ನಾಸ್ತಿಕರಾಗಿದ್ದರು, ಬಳಿಕ ರಾಮಕೃಷ್ಣ ಪರಮಹಂಸರ ಶರಣದಿಂದಾಗಿ ಆಸ್ತಿಕರಾದರು. ಹಿಂದೂ ಧರ್ಮದ ಶ್ರೇಷ್ಠ ಸಂತರಾಗಿ ಬೆಳೆದು ನಿಂತರು. ಧರ್ಮ ಹಾಗೂ ಸೇವೆ ತತ್ವರತೆಯಿಂದ ಮಾತ್ರ ವ್ಯಕ್ತಿ ಸಮಾಜದಲ್ಲಿ ಗುರುತಿಸಿಕೊಳ್ಳಲು ಸಾಧ್ಯ.
ಕುವೆಂಪು ವಿವಿಯ ವಿಶ್ರಾಂತ ಕುಲಪತಿ ಡಾ. ಕೆ. ಚಿದಾನಂದ ಗೌಡ ಮಾತನಾಡಿ, ಸ್ವಾಮಿ ವಿವೇಕಾನಂದರು ಸದೃಢ ದೇಹ, ಮಾನಸಿಕತೆ, ಬುದ್ಧಿ, ಆತ್ಮ, ವಾಕ್ ಚಾತುರ್ಯ ಹೊಂದಿದ್ದರು. ಈ ಕಾರಣಕ್ಕೇ ಅವರನ್ನು ಮಾನವ ಶಕ್ತಿಗಳ ಸಮನ್ವಯದ ಪ್ರತೀಕ ಎನ್ನಲಾಗುತ್ತದೆ. ಯುವಕರು ಇಂಥ ಗುಣ ಅಳವಡಿಸಿಕೊಳ್ಳುವ ಮೂಲಕ ವಿವೇಕಾನಂದರ ಕನಸು ನನಸು ಮಾಡಬೇಕೆಂದರು.
ಎಬಿವಿಪಿ ರಾಷ್ಟ್ರೀಯ ಕಾರ್ಯಕಾರಿಣಿ ಸಮಿತಿ ಸದಸ್ಯ ಡಾ. ರಘು ಅಕಮಂಚಿ, ರಾಷ್ಟ್ರೀಯತೆಯಿಂದ ಮಾತ್ರ ಭಾರತ ನಿರ್ಮಾಣ ಸಾಧ್ಯ. ಈ ನಿಟ್ಟಿನಲ್ಲಿ ಎಬಿವಿಪಿ ಕಳೆದ 64 ವರ್ಷಗಳಿಂದ ರಚನಾತ್ಮಕವಾಗಿ ಕೆಲಸ ಮಾಡುತ್ತಿದೆ. ಯುವಕರಲ್ಲಿರುವ ಸೂಪ್ತ ಪ್ರತಿಭೆ ಅನಾವರಣಗೊಳಿಸುವ ಕಾರ್ಯವನ್ನೂ ಎಬಿವಿಪಿ ಮಾಡುತ್ತಿದೆ. ತನ್ಮೂಲಕ ವಿದ್ಯಾರ್ಥಿ ಸಮುದಾಯದಲ್ಲಿ ಎಬಿವಿಪಿ ಮನೆ ಮಾಡಿದೆ. ಈ ಕಾರಣದಿಂದಾಗಿಯೇ ರಾಜ್ಯದಲ್ಲಿ ಐದು ಲಕ್ಷ ಕಾರ್ಯಕರ್ತರ ಬೃಹತ್ ಸಂಘಟನೆಯನ್ನು ಪರಿಷತ್ ಹೊಂದಿದೆ ಎಂದರು.
ವಿಆರ್ಎಲ್ ಲಾಜಿಸ್ಟಿಕ್ನ ವ್ಯವಸ್ಥಾಪಕ ನಿರ್ದೇಶಕ ಆನಂದ ಸಂಕೇಶ್ವರ, ಸಮ್ಮೇಳನದ ಸ್ವಾಗತ ಸಮಿತಿ ಅಧ್ಯಕ್ಷ ಡಾ. ಅಶೋಕ ಶೆಟ್ಟರ್, ಎಬಿವಿಪಿ ಪ್ರಾಂತ ಅಧ್ಯಕ್ಷ ರಾಮಚಂದ್ರ ಶೆಟ್ಟಿ, ಉಪಾಧ್ಯಕ್ಷ ಟಿ. ಎಸ್. ಸುನೀಲಕುಮಾರ, ಕೌಸ್ತುಭ ಸಂಶಿಕರ ಇದ್ದರು.
ಬಿಜೆಪಿ ರಾಜ್ಯಾಧ್ಯಕ್ಷ ಪ್ರಹ್ಲಾದ ಜೋಶಿ, ವಿಧಾನ ಪರಿಷತ್ ಸದಸ್ಯರಾದ ಸೋಮಣ್ಣ ಬೇವಿನಮರದ ಮರದ, ವಿಧಾನ ಪರಿಷತ್ ಮಾಜಿ ಸದಸ್ಯ ಮೋಹನ ಲಿಂಬಿಕಾಯಿ, ನಂದ ಕುಮಾರ ಸೇರಿದಂತೆ ರಾಜ್ಯದ ವಿವಿಧ ಭಾಗಗಳಿಂದ ಆಗಮಿಸಿದ್ದ ಸಾವಿರಾರು ಎಬಿವಿಪಿ ಕಾರ್ಯಕರ್ತರು, ಆರ್ಎಸ್ಎಸ್ ಪ್ರಮುಖರು ಪಾಲ್ಗೊಂಡಿದ್ದರು.
ವಿಶ್ವದ ಒಟ್ಟಾರೆ 20ರಿಂದ 45 ವರ್ಷದೊಳಗಿನ ಯುವಕರನ್ನು ಪರಿಗಣನೆಗೆ ತೆಗೆದುಕೊಂಡಾಗ ಶೇ. 75ರಷ್ಟು ಯುವಕರು ಭಾರತದಲ್ಲಿಯೇ ಇದ್ದಾರೆ. ಈ ಕಾರಣಕ್ಕಾಗಿಯೇ ಭಾರತವನ್ನು 'ಯಂಗಿಸ್ತಾನ್' ಎಂದೂ ಕರೆಯಬಹುದು. ಈ 'ಯಂಗಿಸ್ತಾನ್' ಮನಸ್ಸು ಮಾಡಿದರೆ ಉತ್ತಮ ಹಿಂದುಸ್ತಾನ್ ಕಟ್ಟಲು ಸಾಧ್ಯ.
- ಮೀನಾ ಚಂದಾವರಕರ