ಯಂಗಿಸ್ತಾನ್ನಿಂದ ಉತ್ತಮ ಹಿಂದುಸ್ತಾನ್ ನಿರ್ಮಾಣ
ಹುಬ್ಬಳ್ಳಿ: ಮಾನವ ಸಂಪನ್ಮೂಲದಲ್ಲಿ ಭಾರತಕ್ಕೆ ವಿಶ್ವದಲ್ಲಿ ಎರಡನೇ ಸ್ಥಾನ. ಆದರೆ, ಮಾನವ ಸಂಪನ್ಮೂಲ ಬಳಸಿಕೊಂಡು ಅಭಿವೃದ್ಧಿಯ ವಿಷಯಕ್ಕೆ ಬಂದಾಗ 128ನೇ ಸ್ಥಾನ. ಮಾನವ ಸಂಪನ್ಮೂಲ ಹಾಗೂ ಯುವ ಶಕ್ತಿಯ ಸಮರ್ಪಕ ಸದುಪಯೋಗ ಪಡಿಸಿಕೊಳ್ಳದಿರುವುದೇ ಈ ಹಿನ್ನಡೆಗೆ ಕಾರಣ ಎಂದು ಬಿಜಾಪುರ ಮಹಿಳಾ ವಿಶ್ವ ವಿದ್ಯಾಲಯದ ಕುಲಪತಿ ಮೀನಾ ಚಂದಾವರಕರ ಕಳವಳ ವ್ಯಕ್ತಪಡಿಸಿದರು.
ಹುಬ್ಬಳ್ಳಿಯ ಬಿವಿಬಿ ಕಾಲೇಜ್ ಕ್ಯಾಂಪಸ್ನಲ್ಲಿ ಆಯೋಜಿಸಲಾಗಿರುವ ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್ 33ನೇ ರಾಜ್ಯ ಸಮ್ಮೇಳನಕ್ಕೆ ಶುಕ್ರವಾರ ಚಾಲನೆ ನೀಡಿ ಮಾತನಾಡಿದ ಅವರು, 'ನಮ್ಮ ಯುವಕ-ಯುವತಿಯರಲ್ಲಿ ಸಾಮರ್ಥ್ಯಕ್ಕೆ ಕೊರತೆಯಿಲ್ಲ. ಆದರೆ, ಆ ಸಾಮರ್ಥ್ಯ ಗುರುತಿಸಿ ಸದುಪಯೋಗ ಪಡಿಸಿಕೊಳ್ಳುವ ಕಾರ್ಯ ಪ್ರಾಮಾಣಿಕವಾಗಿ ಆಗಿಲ್ಲ' ಎಂದರು.
ದೇಶದ ಶಕ್ತಿ ಕೇವಲ ಗಿಡ-ಮರ, ನದಿ, ಪರ್ವತ ಅಷ್ಟೇ ಅಲ್ಲ, ಸೃಜನಶೀಲತೆ, ಸೇವಾ ಮನೋಭಾವ, ಸಾಮರ್ಥ್ಯ ಉಳ್ಳ ಮಾನವ ಸಂಪನ್ಮೂಲ ದೇಶದ ನಿಜವಾದ ಶಕ್ತಿ. ವಿಶ್ವದ ಒಟ್ಟಾರೆ 20ರಿಂದ 45 ವರ್ಷದೊಳಗಿನ ಯುವಕರನ್ನು ಪರಿಗಣನೆಗೆ ತೆಗೆದುಕೊಂಡಾಗ ಶೇ. 75ರಷ್ಟು ಯುವಕರು ಭಾರತದಲ್ಲಿಯೇ ಇದ್ದಾರೆ. ಈ ಕಾರಣಕ್ಕಾಗಿಯೇ ಭಾರತವನ್ನು 'ಯಂಗಿಸ್ತಾನ್' ಎಂದೂ ಕರೆಯಬಹುದು. ಈ 'ಯಂಗಿಸ್ತಾನ್' ಮನಸ್ಸು ಮಾಡಿದರೆ ಉತ್ತಮ ಹಿಂದುಸ್ತಾನ್ ಕಟ್ಟಲು ಸಾಧ್ಯ ಎಂದರು.
ಸಾನ್ನಿಧ್ಯ ವಹಿಸಿದ್ದ ಮೂರುಸಾವಿರ ಮಠದ ಗುರುಸಿದ್ಧರಾಜಯೋಗೀಂದ್ರ ಸ್ವಾಮೀಜಿ ಆಶೀರ್ವಚನ ನೀಡಿ, ಎಲ್ಲಿಯವರೆಗೆ ಭಾರತೀಯ ಸಂಸ್ಕೃತಿ ಗಟ್ಟಿಯಾಗಿರುತ್ತದೆಯೋ ಅಲ್ಲಿಯವರೆಗೆ ಮತಾಂತರ ಸಾಧ್ಯವಿಲ್ಲ. ಮೆಕಾಲೆ ಭಾರತೀಯರನ್ನು ಮತಾಂತರ ಮಾಡಲು ಸಾಧ್ಯವಿಲ್ಲ ಎನ್ನುವ ಕಾರಣಕ್ಕಾಗಿ ಬ್ರಿಟಿಷ್ ಶಿಕ್ಷಣ ಪದ್ಧತಿ ಜಾರಿಗೆ ತಂದ. ಆದಾಗಿಯ್ಯೂ ಭಾರತೀಯ ಸಂಸ್ಕೃತಿ ಬಲವಾಗಿ ಬೇರೂರಿದ್ದರಿಂದ ಅಂದುಕೊಂಡಿದ್ದು ಆತನಿಂದ ಸಾಧಿಸಲಾಗಲಿಲ್ಲ. ನಾವು ಯಾವುದೇ ಕಾರಣಕ್ಕೂ ಭಾರತ ಮಾತೆಯನ್ನು ಹಾಗೂ ಜನ್ಮಕೊಟ್ಟ ತಾಯಿಯನ್ನು ಮರೆಯಬಾರದು ಎಂದರು. ಕುವೆಂಪು ವಿವಿಯ ವಿಶ್ರಾಂತ ಕುಲಪತಿ ಡಾ. ಕೆ. ಚಿದಾನಂದಗೌಡ, ಎಬಿವಿಪಿ ರಾಷ್ಟ್ರೀಯ ಕಾರ್ಯಕಾರಿಣಿ ಸಮಿತಿ ಸದಸ್ಯ ಡಾ. ರಘು ಅಕಮಂಚಿ ಮಾತನಾಡಿದರು.
ವಿಆರ್ಎಲ್ ಲಾಜಿಸ್ಟಿಕ್ನ ವ್ಯವಸ್ಥಾಪಕ ನಿರ್ದೇಶಕ ಆನಂದ ಸಂಕೇಶ್ವರ, ಸಮ್ಮೇಳನದ ಸ್ವಾಗತ ಸಮಿತಿ ಅಧ್ಯಕ್ಷ ಡಾ. ಅಶೋಕ ಶೆಟ್ಟರ್, ಎಬಿವಿಪಿ ಪ್ರಾಂತ ಅಧ್ಯಕ್ಷ ರಾಮಚಂದ್ರ ಶೆಟ್ಟಿ, ಉಪಾಧ್ಯಕ್ಷ ಟಿ. ಎಸ್. ಸುನೀಲಕುಮಾರ, ಕೌಸ್ತುಭ ಸಂಶಿಕರ ಇದ್ದರು. ಬಿಜೆಪಿ ರಾಜ್ಯಾಧ್ಯಕ್ಷ ಪ್ರಹ್ಲಾದ ಜೋಶಿ, ವಿಧಾನ ಪರಿಷತ್ ಸದಸ್ಯರಾದ ಸೋಮಣ್ಣ ಬೇವಿನಮರದ ಮರದ, ಮೋಹನ ಲಿಂಬಿಕಾಯಿ, ನಂದ ಕುಮಾರ ಸೇರಿದಂತೆ ರಾಜ್ಯದ ವಿವಿಧ ಭಾಗಗಳಿಂದ ಆಗಮಿಸಿದ ಸಾವಿರಾರು ಎಬಿವಿಪಿ ಕಾರ್ಯಕರ್ತರು ಹಾಗೂ ಆರ್ಎಸ್ಎಸ್ ಪ್ರಮುಖರು ಪಾಲ್ಗೊಂಡಿದ್ದರು.