ಹುಬ್ಬಳ್ಳಿ: ಇಂದು ಸಿರಿಧಾನ್ಯ ಅಡುಗೆ ಸ್ಪರ್ಧೆ
ಹುಬ್ಬಳ್ಳಿ: ಸಹಜ ಸಮೃದ್ಧಿ ಮತ್ತು ದೇಶಪಾಂಡೆ ಪ್ರತಿಷ್ಠಾನದ ಸಹಯೋಗದಲ್ಲಿ ಫೆ. 1ರಿಂದ 4ರವರೆಗೆ ಹುಬ್ಬಳ್ಳಿಯ ಜೆಸಿ ನಗರದಲ್ಲಿನ ಲಕ್ಷ್ಮಿ ಸದನದಲ್ಲಿ ಸಿರಿಧಾನ್ಯ ಮೇಳ ಆಯೋಜಿಸಲಾಗಿದೆ ಎಂದು ಸಾವಯವ ಕೃಷಿಕರ ಬಳಗದ ಸಿದ್ದುಗೌಡರ ಹೇಳಿದರು.
ಗುರುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಬರ ಪರಿಸ್ಥಿತಿಯಲ್ಲೂ ಬೆಳೆಯುವ ಸಿರಿಧಾನ್ಯಗಳು ಭವಿಷ್ಯದ ಆಹಾರವಾಗಿದ್ದು, ಬರ ಪರಿಸ್ಥಿತಿಯಲ್ಲೂ ರೈತರ ಕೈಹಿಡಿಯುವ ತೃಣ ಧಾನ್ಯಗಳನ್ನು ಜನಪ್ರಿಯಗೊಳಿಸಬೇಕಾದ ಆಗತ್ಯವಿದೆ. ನಿತ್ಯ ಇಂದು ನಾವು ಸೇವಿಸುತ್ತಿರುವ ಅಕ್ಕಿ ಮತ್ತು ಗೋದಿಗಿಂತ ಐದು ಪಟ್ಟು ಹೆಚ್ಚು ಪ್ರೋಟಿನ್, ವಿಟಮಿನ್ ಮತ್ತು ಖನಿಜಾಂಶಗಳನ್ನು ಹೊಂದಿವೆ ಎಂದು ಆಹಾರ ತಜ್ಞರು ತಮ್ಮ ಸಂಶೋಧನೆ ಮುಖಾಂತರ ಸಾಬೀತುಪಡಿಸಿದ್ದಾರೆ.
ಹವಾಮಾನ್ಯದ ವೈಪರಿತ್ಯದ ಮಧ್ಯೆಯೂ ಸಿರಿಧಾನ್ಯಗಳು ಹುಲುಸಾಗಿ ಬೆಳೆಯುವ ಮೂಲಕ ರೈತರಿಗೆ ಭವಿಷ್ಯದ ಕುರಿತು ಭದ್ರತೆ ಒದಗಿಸಬಲ್ಲವು. ಉತ್ತಮ ಆರೋಗ್ಯಕ್ಕಾಗಿ ಜನರು ಕೂಡ ಸಿರಿಧಾನ್ಯಗಳನ್ನು ಬಳಸುವುದಕ್ಕೆ ಆದ್ಯತೆ ನೀಡಬೇಕು ಎನ್ನುವ ಉದ್ದೇಶದಿಂದ ಹುಬ್ಬಳ್ಳಿಯಲ್ಲಿ ಸಿರಿಧಾನ್ಯ ಮೇಳ ಆಯೋಜಿಸಲಾಗಿದೆ ಎಂದು ತಿಳಿಸಿದರು.
ಒರಟು ಧಾನ್ಯಗಳನ್ನು ಎಂದು ಕಡೆಗಣಿಸಲ್ಪಟ್ಟಿದ್ದರೂ ಅಪಾರ ಪೌಷ್ಟಿಕಾಂಶವುಳ್ಳ ಸಿರಿ ಧಾನ್ಯಗಳ ಕುರಿತು ಜನರಲ್ಲಿ ತಿಳಿವಳಿಕೆ ಮೂಡಿಸುವ ನಿಟ್ಟಿನಲ್ಲಿ ಸಿರಿಧಾನ್ಯ ಅಡುಗೆ ಸ್ಪರ್ಧೆ ಆಯೋಜಿಸಲಾಗಿದೆ.
ಸಿರಿಧಾನ್ಯಗಳಾದ ಸಾವಿ, ರಾಗಿ, ನವಣೆ, ಸಜ್ಜೆ, ಬರುಗು ಮುಂತಾದ ಧಾನ್ಯಗಳಿಂದ ತಯಾರಿಸುವ ಸಾಂಪ್ರದಾಯಿಕ ಅಡುಗೆ ಮತ್ತು ಹೊಸ ಅಡುಗೆಗಳನ್ನು ಪ್ರೋತ್ಸಾಹಿಸಲಿ ಎಂದು ಮೇಳ ಹಮ್ಮಿಕೊಳ್ಳಲಾಗಿದೆ.
ಫೆ. 1ರಂದು ಸಿರಿಧಾನ್ಯಗಳಿಂದ ಸಿದ್ಧಪಡಿಸಿದ ಆಹಾರ ಅಥವಾ ಅಡುಗೆಯನ್ನು ಮೇಳದಲ್ಲಿ ಪ್ರದರ್ಶಿಸಬಹುದು. ಸಾಂಪ್ರದಾಯಿಕ ಆಡುಗೆಗಳಿಗೆ ವಿಶೇಷ ಆದ್ಯತೆ ನೀಡಲಾಗುತ್ತಿದ್ದು, ಸಿರಿಧಾನ್ಯದ ಉತ್ತಮ ಅಡುಗೆ ಪದ್ಧತಿಯನ್ನು ಪುಸ್ತಕ ರೂಪದಲ್ಲಿ ಪ್ರಕಟಿಸಲಾಗುವುದು ಎಂದು ಮಾಹಿತಿ ನೀಡಿದರು.
ಆಹಾರ ಮೇಳದಲ್ಲಿ ಸಿರಿಧಾನ್ಯದ ಬಿಸ್ಕತ್ತು, ಚಕ್ಕುಲಿ, ನಿಪ್ಪಟ್ಟು, ಕೋಡುಬಳೆ, ಲಡ್ಡುಗಳನ್ನು ಮಾರಾಟ ಮಾಡಲಾಗುವುದು. ಇದರ ಜತೆಗೆ ಕೈತೋಟದಲ್ಲಿ ತರಕಾರಿ ಬೆಳೆಯುವುದಕ್ಕೆ ವಿವಿಧ ತರಕಾರಿ ಜವಾರಿ ಬೀಜಗಳು ಲಭ್ಯ ಇವೆ ಎಂದು ತಿಳಿಸಿದರು.
ಪತ್ರಿಕಾಗೋಷ್ಠಿಯಲ್ಲಿ ಸಹಜ ಸಮೃದ್ಧಿಯ ಡಿ.ಎಂ. ಶೇಖರ್, ಚನ್ನಬಸಪ್ಪ, ವೀರನಗೌಡ ಪಾಟೀಲ ಇನ್ನಿತರರು ಇದ್ದರು.