ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಧಾರವಾಡ

ಧಾರವಾಡ ಕೃಷಿ ವಿವಿಗೆ ಚೀನಾ ವಿಜ್ಞಾನಿಗಳ ಭೇಟಿ

Mainashree
Updated On : 3 Jul 2014, 9:19 am

ಧಾರವಾಡ: ಚೀನಾದ ಇನ್ನರ್ ಮಂಗೋಲಿಯಾ ಹಾಗೂ ಹೀಲಾಂಗ್ ಜಿಯಾಂಗ್ ಬಾಯಿ ಕೃಷಿ ವಿಶ್ವವಿದ್ಯಾಲಯಗಳ ಐವರು ಸದಸ್ಯರ ಕೃಷಿ ವಿಜ್ಞಾನಿಗಳ ತಂಡ ಇಲ್ಲಿಯ ಕೃಷಿ ವಿಶ್ವವಿದ್ಯಾಲಯಕ್ಕೆ ಇತ್ತೀಚೆಗೆ ಭೇಟಿ ನೀಡಿ ಚರ್ಚೆ ನಡೆಸಿತು.
ಚೀನಾ ಹತ್ತಿ ಬೆಳೆಯಲ್ಲಿ ಸಾಕಷ್ಟು ಸಾಧನೆಗೈದಿದ್ದು, ಬಿಟಿ ಹತ್ತಿ ಮತ್ತು ದ್ವಿದಳ ಧಾನ್ಯ ಬೆಳೆಗಳಲ್ಲಿ ಜಂಟಿ ಸಹಯೋಗತ್ವದಲ್ಲಿ ಅಂತಾರಾಷ್ಟ್ರೀಯ ಕಾರ್ಯಾಗಾರಗಳನ್ನು ಏರ್ಪಡಿಸುವುದು, ಕೃಷಿ ವಿಶ್ವವಿದ್ಯಾಲಯದ ತೃಣ ಧಾನ್ಯಗಳ ಸಂಸ್ಕರಣಾ ತಂತ್ರಜ್ಞಾನದ ಬಗ್ಗೆ ಚೀನಾ ತಂಡ ಮೆಚ್ಚುಗೆ ವ್ಯಕ್ತಪಡಿಸಿದ್ದು, ಅವುಗಳ ದೃಢೀಕರಣ ಮತ್ತು ವಿನಿಮಯದ ಬಗ್ಗೆ ನಿರ್ಧರಿಸಲಾಯಿತು. ಬೇಳೆ ಕಾಳುಗಳ ಅಭಿವೃದ್ಧಿಗೆ ಸಂಬಂಧಿಸಿದಂತೆ, ಸಮಗ್ರ ಪೀಡೆ ನಿರ್ವಹಣೆ, ಜೈವಿಕ ಗೊಬ್ಬರಗಳು, ಜೈವಿಕ ಪೀಡೆ ನಿಯಂತ್ರಕಗಳ ಬಗ್ಗೆ ಸಹಯೋಗ ಹಾಗೂ ಸೂರ್ಯಕಾಂತಿ ಮತ್ತು ಜೈವಿಕ ಇಂಧನ ಬೆಳೆಗಳಲ್ಲಿ ಸಂಶೋಧನಾ ಕಾರ್ಯಕ್ರಮ ಹಾಗೂ ವಿಜ್ಞಾನಿಗಳ ಪರಸ್ಪರ ವಿನಿಮಯ ಕುರಿತು ಇನ್ನರ್ ಮಂಗೋಲಿಯಾ ಕೃಷಿ ವಿಶ್ವವಿದ್ಯಾಲಯದೊಂದಿಗೆ ಒಡಂಬಡಿಕೆ ಏರ್ಪಡಿಸುವುದರ ಕುರಿತು ಮಾತುಕತೆ ನಡೆಸಲಾಯಿತು.
ಇದಕ್ಕೂ ಮುಂಚೆ, ವಿಶ್ವವಿದ್ಯಾಲಯದ ವಿವಿಧ ಸಂಶೋಧನಾ ಮತ್ತು ಶಿಕ್ಷಣ ಘಟಕಗಳಾದ ಕೃಷಿ ಜೈವಿಕ ತಂತ್ರಜ್ಞಾನ ಸಂಸ್ಥೆ, ಸಾವಯವ ಕೃಷಿ ಸಂಸ್ಥೆ, ಬೀಜ ಘಟಕ, ಶಿಕ್ಷಣ ವಿಭಾಗಗಳಾದ ಬೇಸಾಯಶಾಸ್ತ್ರ, ಕೃಷಿ ಕೀಟಶಾಸ್ತ್ರ, ಸಸ್ಯರೋಗ ಶಾಸ್ತ್ರ, ಸೂಕ್ಷ್ಮಾಣು ಜೀವಿಶಾಸ್ತ್ರ ಹಾಗೂ ಗ್ರಾಮೀಣ ಗೃಹ ವಿಜ್ಞಾನ ಮಹಾವಿದ್ಯಾಲಯದ ಆಹಾರ ಮತ್ತು ಪೋಷಣೆ ವಿಭಾಗ, ಉಡುಪು ವಿನ್ಯಾಸ ವಿಭಾಗ, ಮಾನವ ವಿಕಾಸ ವಿಭಾಗಳಿಗೆ ಭೇಟಿ ನೀಡಿದರು. ಇಲಾಖಾ ಮುಖ್ಯಸ್ಥರ ಜತೆ ಸಂಶೋಧನೆ ಮತ್ತು ಶಿಕ್ಷಣ ವಿನಿಮಯ ಸಾಧ್ಯತೆಗಳ ಬಗ್ಗೆ ಚರ್ಚಿಸಲಾಯಿತು.
ತಂಡ ನಂತರ ಬಿಜಾಪುರದ ಕೃಷಿ ಕಾಲೇಜಿಗೆ ಭೇಟಿ ನೀಡಿ ಒಣ ಬೇಸಾಯ ತಾಂತ್ರಿಕತೆ ಮತ್ತು ತೃಣ ಧಾನ್ಯಗಳ ಬೆಳೆ ಸುಧಾರಣೆ ಕುರಿತು ವಿಚಾರ ವಿನಿಮಯ ನಡೆಸಿತು. ಮುಂದಿನ ದಿನಗಳಲ್ಲಿ ಚೀನಾದ ವಿಶ್ವವಿದ್ಯಾಲಯಗಳು ಮತ್ತು ಕೃಷಿ ವಿಶ್ವವಿದ್ಯಾಲಯದ ಸಹಯೋಗದಲ್ಲಿ ಕೈಗೊಳ್ಳಬಹುದಾದ ಸಂಶೋಧನೆ, ಶೈಕ್ಷಣಿಕ ಸಹಯೋಗ ಕುರಿತು ಕುಲಪತಿಗ ಡಾ. ಡಿ.ಪಿ. ಬಿರಾದಾರ ನೇತೃತ್ವದಲ್ಲಿ ಕೆಲ ಅಂಶಗಳ ಬಗ್ಗೆ ನಿರ್ಧಾರ ಕೈಕೊಳ್ಳಲಾಯಿತು. ಆರ್.ಎಸ್. ಪೋತ್‌ದಾರ ಇದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement