ನಿರಂತರ ನೀರು ಅನುದಾನ: ಕಾಂಗ್ರೆಸ್ ಬಿಜೆಪಿ ಸದಸ್ಯರ ಮಧ್ಯೆ ಕೆಸರೆರಚಾಟ
ಕನ್ನಡಪ್ರಭ ವಾರ್ತೆ, ಹುಬ್ಬಳ್ಳಿ, ಜು. 3
ನಿರಂತರ ಕುಡಿಯುವ ನೀರು ಯೋಜನೆ ವಿಸ್ತರಣೆಗೆ ಸರ್ಕಾರದಿಂದ ಅನುದಾನ ತರುವುದಕ್ಕೆ ಸಂಬಂಧಿಸಿದಂತೆ ಗುರುವಾರ ನಡೆದ ಮಹಾನಗರ ಪಾಲಿಕೆ ವಿಶೇಷ ಸಭೆಯಲ್ಲಿ ಆಡಳಿತಾರೂಢ ಬಿಜೆಪಿ, ಪ್ರತಿಪಕ್ಷ ಕಾಂಗ್ರೆಸ್ ಸದಸ್ಯರ ಮಧ್ಯೆ ಮಾತಿನ ಚಕಮಕಿ ನಡೆಯಿತು.
ರು. 1,146 ಕೋಟಿ ವೆಚ್ಚದಲ್ಲಿ ನಿರಂತರ ಕುಡಿಯುವ ನೀರು ಯೋಜನೆಯನ್ನು ಇತರ 41 ವಾರ್ಡ್ಗಳಿಗೆ ವಿಸ್ತರಿಸಲಾಗುತ್ತಿದೆ. ಮೊದಲ ಹಂತದ ಯೋಜನೆಯಲ್ಲಿ ಮಹಾನಗರ ಪಾಲಿಕೆ ರು. 214 ಕೋಟಿ ಹಾಗೂ ಎರಡನೇ ಹಂತದ ಯೋಜನೆಗೆ ರು. 383 ಕೋಟಿಯ ತನ್ನ ಪಾಲನ್ನು ನೀಡಬೇಕು. ಅಂದಾಗ ಮಾತ್ರ ಯೋಜನೆ ಮುಂದುವರಿಯುತ್ತದೆ ಎಂದು ಕೆಯುಐಡಿಎಫ್ಸಿ ಅಧಿಕಾರಿ ಸಾಮಾನ್ಯ ಸಭೆಗೆ ತಿಳಿಸಿದರು.
ಈ ಹಿಂದೆ ರಾಜ್ಯದಲ್ಲಿ ಬಿಜೆಪಿ ಸರ್ಕಾರ ಅಧಿಕಾರದಲ್ಲಿದ್ದಾಗ ರು. 250 ಕೋಟಿಯನ್ನು ಪಾಲಿಕೆಗೆ ತರಲಾಗಿದ್ದು, ಈ ಬಾರಿ ಕಾಂಗ್ರೆಸ್ ಸದಸ್ಯರು ಸರ್ಕಾರದಿಂದ ರು. 200ರಿಂದ 300 ಕೋಟಿ ವಿಶೇಷ ಅನುದಾನ ತರಬೇಕೆಂದು ಬಿಜೆಪಿಯ ವೀರಣ್ಣ ಸವಡಿ ಕಾಂಗ್ರೆಸ್ ಸದಸ್ಯರನ್ನು ಒತ್ತಾಯಿಸಿದರು.
ಸವಡಿ ಮಾತಿನಿಂದ ಆಕ್ರೋಶಕ್ಕೊಳಗಾದ ಕಾಂಗ್ರೆಸ್ ಸದಸ್ಯರು, ಅಭಿವೃದ್ಧಿ ಕಾರ್ಯದಲ್ಲಿ ಸವಡಿ ರಾಜಕೀಯ ಮಾಡುತ್ತಿದ್ದಾರೆಂದು ಆರೋಪಿಸಿದರು. ಪಕ್ಷಭೇದ ಮರೆತು ನಿಯೋಗದೊಂದಿಗೆ ತೆರಳಿ ವಿಶೇಷ ಅನುದಾನಕ್ಕೆ ಮನವಿ ಸಲ್ಲಿಸುವಂತೆ ಪ್ರತಿಪಕ್ಷ ನಾಯಕ ಯಾಸೀನ್ ಹಾವೇರಿಪೇಟ, ಕಾಂಗ್ರೆಸ್ನ ಗಣೇಶ ಟಗರಗುಂಟಿ, ದಶರಥ ವಾಲಿ, ಸುಧಾ ಮಣಿಕುಂಟ್ಲ ಮತ್ತಿತರ ಸದಸ್ಯರು ಒತ್ತಾಯಿಸಿದರು.
ವಿಶೇಷ ಅನುದಾನಕ್ಕಾಗಿ ಕಾಂಗ್ರೆಸ್ ಸದಸ್ಯರೊಂದಿಗೆ ಆಡಳಿತ ಪಕ್ಷದ ಸದಸ್ಯರೂ ನಿಯೋಗದಲ್ಲಿ ತೆರಳುವುದಾಗಿ ಮೇಯರ್ ಶಿವು ಹಿರೇಮಠ ಹೇಳಿಕೆಯಿಂದ ಆಕ್ರೋಶಗೊಂಡ ಕಾಂಗ್ರೆಸ್ ಸದಸ್ಯರು, ಮೇಯರ್ ಸಹ ರಾಜಕೀಯ ಮಾಡುತ್ತಿದ್ದಾರೆಂದು ದೂರಿದರು.
ಮುಖ್ಯಮಂತ್ರಿಯವರ ನಗರೋತ್ಥಾನ ಯೋಜನೆ ಮತ್ತು ಎಸ್ಎಫ್ಸಿ ಅನುದಾನವನ್ನು ನಿರಂತರ ಕುಡಿಯುವ ನೀರು ಯೋಜನೆ ವಿಸ್ತರಣೆಗೆ ಬಳಸಿಕೊಳ್ಳಬಹುದೆಂದು ಸಲಹೆ ನೀಡಿದ ಆಯುಕ್ತ ರಮಣದೀಪ ಚೌಧರಿ, ಯೋಜನೆ ಮುಂದುವರಿಕೆಗೆ ಪಾಲಿಕೆಯ ಸಮ್ಮತಿ ಅಗತ್ಯ ಎಂದು ಹೇಳಿದರು.
ಬೃಹತ್ ಒಳಚರಂಡಿ ಯೋಜನೆ ಕುರಿತು ಸಂಪೂರ್ಣ ಮಾಹಿತಿ ನೀಡದ ಕೆಯುಐಡಿಎಫ್ಸಿ ಸಹಾಯಕ ಅಭಿ ಯಂತರನ್ನು ಸದಸ್ಯರು ತರಾಟೆಗೆ ತೆಗೆದುಕೊಂಡರು. ಮುಂದಿನ ಸಭೆಯಲ್ಲಿ ಸಂಪೂರ್ಣ ಮಾಹಿತಿಯೊಂದಿಗೆ ಹಾಜ ರಾಗುವಂತೆ ಮೇಯರ್ ಸೂಚಿಸಿದರು. ಅವಳಿ ನಗರದ ಮಧ್ಯೆ ನಡೆದಿರುವ ಬಿಆರ್ಟಿಎಸ್ ಯೋಜನೆ ಬಗ್ಗೆಯೂ ಸದಸ್ಯರಿಗೆ ಮಾಹಿತಿ ನೀಡಲಾಯಿತು.
ಟ ಅವಳಿ ನಗರದ 41 ವಾರ್ಡ್ಗಳಿಗೆ ನಿರಂತರ ಕುಡಿಯುವ ನೀರು ವಿಸ್ತರಣೆಯ ಯೋಜನೆ ವೆಚ್ಚ ರು. 1,146 ಕೋಟಿ. ಮೊದಲ ಹಂತದ ಯೋಜನೆ 2,026ಕ್ಕೆ ಮುಗಿಯಲಿದ್ದು, ರು. 763 ಕೋಟಿ ವೆಚ್ಚ ತಗುಲಲಿದೆ. 2ನೇ ಹಂತದ ಯೋಜನೆ 2,041ಕ್ಕೆ ಪೂರ್ಣಗೊಳ್ಳಲಿದ್ದು, ಇದಕ್ಕೆ ತಗುಲುವ ಅಂದಾಜು ವೆಚ್ಚ ರು. 383 ಕೋಟಿ.
ಟ ಈಗಾಗಲೇ ಅವಳಿ ನಗರದ 8 ವಾರ್ಡ್ಗಳು ನಿರಂತರ ನೀರು ಯೋಜನೆಗೆ ಒಳಪಟ್ಟಿವೆ. ಇದರಿಂದ ಒಟ್ಟು 14,208 ಮನೆಗಳಿಗೆ ಸಂಪರ್ಕ ನೀಡಲಾಗಿದ್ದು, 93 ಸಾವಿರ ಜನರು ಪ್ರಯೋಜನ ಪಡೆದುಕೊಳ್ಳುತ್ತಿದ್ದಾರೆ.
ಟ ಸದ್ಯ ಅಭಿವೃದ್ಧಿಯಲ್ಲಿರುವ ರು. 45.50 ಕೋಟಿ ವೆಚ್ಚದಲ್ಲಿ ಪ್ರಾರಂಭಗೊಂಡಿರುವ ಯೋಜನೆ ಹುಬ್ಬಳ್ಳಿಯ 4 ವಾರ್ಡ್ಗಳಿಗೆ ಪೂರ್ಣ ಪ್ರಮಾಣದಲ್ಲಿ ಮತ್ತು 9 ವಾರ್ಡ್ಗಳಿಗೆ ಭಾಗಶಃ, ಧಾರವಾಡದ 10 ವಾರ್ಡ್ಗಳಿಗೆ ವಿಸ್ತಾರಗೊಳ್ಳಲಿದೆ. ಈ ಯೋಜನೆಯಡಿ 1.15 ಲಕ್ಷ ಜನರು ಪ್ರಯೋಜನ ಪಡೆದುಕೊಳ್ಳುತ್ತಿದ್ದು, 23 ಸಾವಿರ ಮನೆಗಳಿಗೆ ನಳದ ಸಂಪರ್ಕ ಕಲ್ಪಿಸಲಾಗುತ್ತದೆ. 2015 ಸೆಪ್ಟೆಂಬರ್ಗೆ ಕಾಮಗಾರಿ ಮುಗಿಯಲಿದೆ.
ಟ ರು. 75 ಕೋಟಿ ಯೋಜನೆಗೆ ಹುಬ್ಬಳ್ಳಿ 3 ವಾರ್ಡ್ಗಳು ಪೂರ್ಣ ಪ್ರಮಾಣ, 4 ವಾರ್ಡ್ಗಳು ಭಾಗಶಃ, ಧಾರವಾಡದ 2 ವಾರ್ಡ್ಗಳು ಪೂರ್ಣ ಮತ್ತು 8 ವಾರ್ಡ್ಗಳು ಭಾಗಶಃ ಒಳಪಡಲಿವೆ. 1.35 ಲಕ್ಷ ಜನರು ಇದರ ಪ್ರಯೋಜನ ಪಡೆಯಲಿದ್ದು, 27 ಸಾವಿರ ಮನೆಗಳಿಗೆ ನಳದ ಸಂಪರ್ಕ ಲಭಿಸಲಿದೆ. ಈ ಯೋಜನೆ ಕಾಮಗಾರಿ 2015ರ ಜೂನ್ಗೆ ಮುಕ್ತಾಯಗೊಳ್ಳಲಿದೆ.