ಬಾಕಿ ಹಣ ಪಾವತಿಗೆ ಜು. 15 ಗಡುವು: ಶಾಂತಕುಮಾರ್
ಕಲಘಟಗಿ: ರಾಜ್ಯ ಸರ್ಕಾರ ನಿಗದಿ ಮಾಡಿರುವಂತೆ ಪ್ರತಿ ಟನ್ ಕಬ್ಬಿಗೆ ರು. 2500ರಂತೆ ಬಾಕಿ ಹಣವನ್ನು ಕಾರ್ಖಾನೆಗಳು ಜು. 15ರೊಳಗೆ ನೀಡದಿದ್ದರೆ, ರಾಜ್ಯಾದ್ಯಂತ ಕಬ್ಬು ಬೆಳೆಗಾರರು ಜೈಲ್ ಭರೋ ಚಳವಳಿ ನಡೆಸಲಿದ್ದಾರೆ ಎಂದು ರಾಜ್ಯಾಧ್ಯಕ್ಷ ಕುರಬೂರು ಶಾಂತಕುಮಾರ ಹೇಳಿದರು.
ಪಟ್ಟಣದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ತಾಲೂಕು-ಜಿಲ್ಲಾ ಮಟ್ಟದಿಂದ ರಾಜಧಾನಿವರೆಗೂ ಕಬ್ಬು ಬೆಳೆಗಾರರು ತಮ್ಮ ಬೇಡಿಕೆಗಳ ಈಡೇರಿಕೆಗಾಗಿ ಹೋರಾಟ ಮಾಡಿದರೂ ಕಾರ್ಖಾನೆ ಮಾಲೀಕರು ಸ್ಪಂದಿಸುತ್ತಿಲ್ಲ. ಸರ್ಕಾರವೇ ನಿಗದಿಪಡಿಸಿದ ಕಬ್ಬಿನ ಬೆಂಬಲ ಬೆಲೆಯನ್ನು ನೀಡದ ಕಾರಣ ಜೈಲ್ ಭರೋ ಚಳವಳಿಗೆ ನಿರ್ಧರಿಸಿರುವುದಾಗಿ ತಿಳಿಸಿದರು. ಆಗಸ್ಟ್ ತಿಂಗಳಲ್ಲಿ ಧಾರವಾಡದಲ್ಲಿ ರಾಜ್ಯಮಟ್ಟದ ಕಬ್ಬು ಬೆಳೆಗಾರರ ಕಾರ್ಯಾಗಾರವನ್ನು ಏರ್ಪಡಿಸಲು ನಿರ್ಧರಿಸಿದ್ದು, ರೈತರೊಂದಿಗೆ ಚರ್ಚಿಸಿ ಅದರ ರೂಪರೇಷೆಗಳನ್ನು ಸಿದ್ಧಪಡಿಸಲಾಗುವುದು. ಸರ್ಕಾರ ನೀಡುತ್ತಿರುವ ಬೆಳೆಹಾನಿ ಪರಿಹಾರ ಹಾಗೂ ಬೆಳೆವಿಮೆಗೆ ಯಾವುದೇ ಮಾನದಂಡ ಇಲ್ಲದಂತಾಗಿದೆ. ರೈತರಿಗೆ ಸಹಾಯವಾಗುವಂತೆ ಪ್ರತ್ಯೇಕ ಕಾನೂನು ರೂಪಿಸಬೇಕೆಂದು ಸರ್ಕಾರಕ್ಕೆ ಪತ್ರ ಬರೆಯಲಾಗಿದೆ ಎಂದರು. ಜಿಲ್ಲಾ ಕಬ್ಬು ಬೆಳೆಗಾರರ ಸಂಘದ ಅಧ್ಯಕ್ಷ ಎಸ್.ಎನ್. ಬನವಣ್ಣವರ್, ಚನ್ನಯ್ಯ ಹಿರೇಮಠ, ಉಳವಪ್ಪ ಬಳಿಗೇರ, ಮೋಹನ ಪಂಡಿತ, ಗುರು ಹುಲ್ಲಂಬಿ, ಶಿವಪ್ಪ ನೂಲ್ವಿ, ರುದ್ರಪ್ಪ ಟೊಂಗಳೆ, ವಸಂತ ಡಾಕಪ್ಪನವರ ಇದ್ದರು.