ರೈತನಿಗೆ ರು. 1.3 ಕೋಟಿ ಕೊಡದ ಎಸಿ ಕಚೇರಿ ಜಪ್ತಿ
ಧಾರವಾಡ: ಭೂಸ್ವಾಧೀನ ಮಾಡಿಕೊಂಡ ಜಮೀನಿನ ರು. 1.3 ಕೋಟಿ ಮೊತ್ತ ನೀಡದ ಇಲ್ಲಿಯ ಉಪ ವಿಭಾಗಾಧಿಕಾರಿಗಳ ಕಚೇರಿಯನ್ನು ಶನಿವಾರ ಜಪ್ತ ಮಾಡಲು ಮುಂದಾದ ಘಟನೆ ನಡೆಯಿತು.
ರೇಲ್ವೆ ಇಲಾಖೆಯ ಅಭಿವೃದ್ಧಿ ಕಾಮಗಾರಿಗೆ ಜಮೀನು ಕಳೆದುಕೊಂಡ ರೈತನಿಗೆ ನೀಡಬೇಕಾದ ರು. 1.3 ಕೋಟಿಗೂ ಅಧಿಕ ಮೊತ್ತದ ಹಣ ನೀಡುವ ಜವಾಬ್ದಾರಿ ನಿಭಾಯಿಸದ ಹಿನ್ನೆಲೆಯಲ್ಲಿ ಇಲ್ಲಿನ ಉಪ ವಿಭಾಗಾಧಿಕಾರಿ ಕಚೇರಿ ಪೀಠೋಪಕರಣ ಜಪ್ತಿ ಮಾಡಲು ಆದೇಶವಾಗಿತ್ತು. ಆದರೆ ಜು. 9ರ ವರೆಗೆ ಕಾಲಾವಕಾಶ ನೀಡಲಾಯಿತು.
ನ್ಯಾಯಾಲಯ ಆದೇಶದಂತೆ ನ್ಯಾಯವಾದಿ ಪಿ.ಎಚ್. ನೀರಲಕೇರಿ ತಮ್ಮ ಕಕ್ಷಿದಾರ ಧಾರವಾಡ ತಾಲೂಕು ನಾಗಲಾವಿ ಇಮಾಮಸಾಬ್ ರಾಜೀಬಾರ ಅವರಿಗೆ ದೊರೆಯಬೇಕಾದ ಪರಿಹಾರ ಕೊಡಿಸುವ ನಿಟ್ಟಿನಲ್ಲಿ ಎಸಿ ಕಚೇರಿ ಪೀಠೋಪಕರಣ ಜಪ್ತಿಗೆ ಆಗಮಿಸಿದ್ದರು. ಆದರೆ ಉಪ ವಿಭಾಗಾಧಿಕಾರಿ ಮಹೇಶ ಕರ್ಜಗಿ ಕಚೇರಿಯಲ್ಲಿರದ ಕಾರಣ ಖಾಲಿ ಕೈಯಲ್ಲಿ ಹೋದರು.
ಧಾರವಾಡದಿಂದ ಸಾಗುವ ಜೋಡುಹಳಿ ರೇಲ್ವೆ ಕಾಮಗಾರಿಗಾಗಿ ತಾಲೂಕಿನ ವರವನಾಗಲಾವಿ ಗ್ರಾಮದ ರೈತನಿಂದ 2009-10ರಲ್ಲಿ 1.30 ಎಕರೆ ಜಮೀನು ವಶಪಡಿಸಿಕೊಂಡಿದ್ದ ಉಪ ವಿಭಾಗಾಧಿಕಾರಿ ರೇಲ್ವೆ ಇಲಾಖೆಗೆ ಹಸ್ತಾಂತರಿಸಿದ್ದರು. ಆಗ ರೈತ ಇಮಾಮಸಾಬನಿಗೆ ರು. 19 ಲಕ್ಷ ಪರಿಹಾರ ನೀಡಲಾಗಿತ್ತು. ಆದರೆ ಈ ಜಮೀನಿನಲ್ಲಿ ಬೆಲೆಬಾಳುವ 100 ತೆಂಗಿನಮರ, 100 ಸಾಗವಾನಿ ಮರಗಳು, 100 ಮಾವಿನ ಮರಗಳು, ಬೋರ್ವೆಲ್ ಹಾಗೂ 1 ಮನೆಯನ್ನೂ ಆ ಸಂದರ್ಭದಲ್ಲಿ ರೇಲ್ವೆ ಇಲಾಖೆ ವಶಪಡಿಸಿಕೊಂಡಿತ್ತು. ಇದಕ್ಕೆಲ್ಲ ಪರಿಹಾರವಾಗಿ ಬಂದ ಹಣ ಅಲ್ಪ ಮೊತ್ತದ್ದು, ನನಗೆ ಹೆಚ್ಚುವರಿ ಪರಿಹಾರ ನೀಡಬೇಕೆಂದು ಆಗ್ರಹಿಸಿ ರೈತ ಇಮಾಮಸಾಬ್ 2011ರಲ್ಲಿ ಕೋರ್ಟ್ ಮೆಟ್ಟಿಲು ಹತ್ತಿದ್ದರು.
ರೈತನ ವಾದ ಆಲಿಸಿದ ನ್ಯಾಯಾಧೀಶರು, 2014ರ ಜನವರಿ ಅಂತ್ಯದೊಳಗೆ ರೈತನಿಗೆ ಒಟ್ಟು ರು. 1.3 ಕೋಟಿ ನೀಡಬೇಕು. ಅನಂತರ ಹಣ ನೀಡುವುದಾದಲ್ಲಿ ದಂಡ ಸಹಿತ ಪಾವತಿಸಬೇಕು ಎಂದು ಆದೇಶಿಸಿ ತೀರ್ಪು ನೀಡಿದ್ದರು. ಆದರೆ ಉಪ ವಿಭಾಗಾಧಿಕಾರಿ ನ್ಯಾಯಾಲಯದ ಆದೇಶ ಪಾಲಿಸದ ಕಾರಣ ಅವರ ಕಚೇರಿ ಚರಾಸ್ತಿ ಮುಟ್ಟುಗೋಲು ಹಾಕಿಕೊಳ್ಳುವಂತೆ ಸೂಚಿಸಿದ್ದರು.
ಕಾರಣ ಕಕ್ಷಿದಾರನೊಂದಿಗೆ ಉಪ ವಿಭಾಗಾಧಿಕಾರಿ ಕಚೇರಿಗೆ ಬಂದಿದ್ದ ನ್ಯಾಯವಾದಿ ಪಿ.ಎಚ್. ನೀರಲಕೇರಿ ಕಚೇರಿ ಪೀಠೋಪಕರಣ ಜಪ್ತಿಗೆ ಮುಂದಾದರು. ಆದರೆ ಕಚೇರಿ ಮುಖ್ಯಸ್ಥರೇ ಇಲ್ಲದ ಕಾರಣ ಬರಿಗೈಯಲ್ಲಿ ಹೋಗಬೇಕಾಯಿತು.