ಕೆಇಸಿ ವಿರುದ್ಧ ಮುಂದುವರಿದ ನೌಕರರ ಹೋರಾಟ
ಹುಬ್ಬಳ್ಳಿ: ಹುಬ್ಬಳ್ಳಿ ಕಿರ್ಲೋಸ್ಕರ್ ವಿದ್ಯುತ್ ಕಾರ್ಖಾನೆ ಲಾಭದಲ್ಲಿದ್ದರೂ ಆಡಳಿತ ಮಂಡಳಿ ಸುಳ್ಳು ಹೇಳಿ ಕಾರ್ಮಿಕರಿಗೆ ನ್ಯಾಯವಾದ ವೇತನ ನೀಡದೇ ಸತಾಯಿಸುತ್ತಿದೆ. ನಮ್ಮ ಸೂಕ್ತ ಬೇಡಿಕೆಗಳು ಈಡೇರುವವರೆಗೆ ಹೋರಾಟ ಮುಂದುವರಿಯಲಿದೆ ಎಂದು ಕಿರ್ಲೋಸ್ಕರ್ ಇಲೆಕ್ಟ್ರಿಕ್ ಕಂಪನಿ ನೌಕರರ ಸಂಘದ ಅಧ್ಯಕ್ಷ ಕೆ.ಎನ್. ಸುಬ್ರಮಣಿ ಹೇಳಿದರು. ನಗರದಲ್ಲಿ ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಹುಬ್ಬಳ್ಳಿಯ ಕಿರ್ಲೋಸ್ಕರ್ ಘಟಕ 400 ಕಾರ್ಮಿಕರನ್ನು ಹೊಂದಿ ರು. 5 ಕೋಟಿ ಉತ್ಪಾದಕತೆಯನ್ನು ಹೊಂದಿತ್ತು. ಆದರೀಗ 245 ಕಾರ್ಮಿಕರನ್ನೊಳಗೊಂಡು ತಿಂಗಳಿಗೆ ಸರಿಸರಿ ರು. 8 ಕೋಟಿ ಉತ್ಪಾದಕತೆಯ ವಹಿವಾಟು ಹೊಂದಿದೆ. ಎಲ್ಲ ಕಾರ್ಮಿಕರಿಗೆ ರು. 25 ಲಕ್ಷ ವೇತನ ನೀಡಲಾಗುತ್ತಿದೆ. ಲಾಭದಲ್ಲಿದ್ದರೂ ಕಂಪನಿ ರು. 1250 ವೇತನ ಪರಿಷ್ಕರಣೆ ಮಾಡಲು ಹೊರಟಿರುವುದು ಅನ್ಯಾಯ. ಸೂಕ್ತ ವೇತನ ಪರಿಷ್ಕರಣೆಯಾಗುವವರೆಗೂ ಹೋರಾಟ ಮುಂದುವರಿಯಲಿದೆ ಎಂದರು. ನಿಯಮಾವಳಿ ಪ್ರಕಾರ 4 ವರ್ಷಗಳಿಗೊಮ್ಮೆ ವೇತನ ಪರಿಷ್ಕರಣೆಯಾಗಬೇಕಿತ್ತು. ಆದರೀಗ 30 ತಿಂಗಳು ತಡವಾಗಿದೆ. ಬೆಂಗಳೂರಿನ ಘಟಕದವರಿಗೆ ರು. 2,650 ವೇತನ ಪರಿಷ್ಕರಣೆ ಮಾಡಿ ಹುಬ್ಬಳ್ಳಿಯ ಕಾರ್ಮಿಕರಿಗೆ ರು. 1,250 ವೇತನ ಪಡೆಯುವಂತೆ ತಿಳಿಸಿದ್ದಾರೆ. ಬೆಂಗಳೂರಿನಷ್ಟೇ ವೇತನ ನೀಡದಿದ್ದರೂ ಹುಬ್ಬಳ್ಳಿ ಕಾರ್ಮಿಕರಿಗೆ ಇನ್ನೊಂದಿಷ್ಟು ಹೆಚ್ಚಿಗೆ ವೇತನ ನೀಡಬೇಕೆಂದು ತಮ್ಮ ಬೇಡಿಕೆ ಎಂದರು. ವೇತನ ಪರಿಷ್ಕರಣೆಯಲ್ಲಿ ಅನ್ಯಾಯ ಎಸಗಿರುವ ಕಂಪನಿಯ ಆಡಳಿತ ಮಂಡಳಿ ಕಾರ್ಮಿಕರಿಗೆ ಸಿಗಬೇಕಾದ ಸೌಲಭ್ಯ ನೀಡುವಲ್ಲಿಯೂ ತಾರತಮ್ಯ ನೀತಿ ಅನುಸರಿಸುತ್ತಿದೆ. 8-9 ತಿಂಗಳಿಗೊಮ್ಮೆ ವೇತನ ನೀಡುತ್ತಿದೆ. ಇಂಥ ನೀತಿಯನ್ನು ಕೈಬಿಟ್ಟು ಕಾರ್ಮಿಕರಿಗೆ ಅನುಕೂಲವಾಗಿ ಕಂಪನಿ ನಡೆದುಕೊಳ್ಳಲಿ. ನೌಕರರ ಸಂಘದ ಸಭೆ ನಡೆಯಲಿದ್ದು, ಸಭೆಯಲ್ಲಿ ಒಮ್ಮತದ ಅಭಿಪ್ರಾಯ ವ್ಯಕ್ತವಾಗದೇ ಹೋದಲ್ಲಿ ಹೋರಾಟ ಮುಂದುವರಿಯಲಿದೆ ಎಂದು ಸುಬ್ರಮಣಿ ಹೇಳಿದರು. ಸಿ.ಎಸ್. ಪೌಲ್, ರಾಮಣ್ಣ ಬಡಿಗೇರ ಗೋಷ್ಠಿಯಲ್ಲಿದ್ದರು.