ಬಗೆಹರಿಯುತ್ತಿಲ್ಲ ಧಾರವಾಡ ಕಿಟೆಲ್ ಕಾಲೇಜು ಪ್ರಕರಣ
ಧಾರವಾಡ: 'ಬೆಕ್ಕಿಗೆ ಚೆಲ್ಲಾಟ, ಇಲಿಗೆ ಪ್ರಾಣ ಸಂಕಟ' ಎನ್ನುವ ಗಾದೆ ಮಾತು ಇಲ್ಲಿನ ಕಿಟೆಲ್ ವಿಜ್ಞಾನ ಕಾಲೇಜಿನ ಘಟನಾವಳಿಗೆ ಸರಿಹೊಂದುತ್ತದೆ.
ಕಾಲೇಜಿನ ಕೆಲ ಪ್ರಾಧ್ಯಾಪಕರ ಹಾಗೂ ಪ್ರಾಚಾರ್ಯರ ಶೀತಲ ಸಮರ 400ಕ್ಕೂ ಹೆಚ್ಚು ವಿದ್ಯಾರ್ಥಿಗಳ ಭವಿಷ್ಯಕ್ಕೆ ಕುತ್ತು ತಂದಿದೆ. ಆಂತರಿಕ ಅಂಕಗಳನ್ನು ವಿಶ್ವವಿದ್ಯಾಲಯಕ್ಕೆ ಕಳುಹಿಸಿಕೊಡದ ಕಾರಣ ವಿದ್ಯಾರ್ಥಿಗಳ ಬಿಎಸ್ಸಿ ಅಂತಿಮ ವರ್ಷದ ಫಲಿತಾಂಶ ತಡೆ ಹಿಡಿದು ವಿಶ್ವವಿದ್ಯಾಲಯ ಕಾಲೇಜಿಗೆ ನೋಟಿಸ್ ನೀಡಿ, ರು. 8 ಲಕ್ಷ ದಂಡ ವಿಧಿಸಿದೆ.
ಆದರೆ ಕಾಲೇಜಿನ ಪ್ರಾಚಾರ್ಯೆ ಸುಶಾಂತಿ ಪ್ರಸನ್ನಕುಮಾರ ವಿವಿಯ ಪರೀಕ್ಷಾ ವಿಭಾಗದಿಂದ ಎರಡು ದಿನಗಳ ಹಿಂದೆ ಬಂದಿರುವ ನೋಟಿಸ್‌ಗೆ ಪ್ರತಿ ಉತ್ತರ ಸಿದ್ಧಪಡಿಸಿದ್ದು, ತಮ್ಮದಲ್ಲದ ತಪ್ಪಿಗೆ ತಮಗೇಕೆ ಶಿಕ್ಷೆ ಎಂದು ಪ್ರತಿಕ್ರಿಯಿಸಿದ್ದಾರೆ. ಕಾಲೇಜಿನ ನಾಲ್ವರು ಅಧ್ಯಾಪಕರು ಮಾಡಿರುವ ಎಡವಟ್ಟಿನಿಂದಾಗಿ ವಿದ್ಯಾರ್ಥಿಗಳು ತೊಂದರೆಗೆ ಸಿಲುಕಿದ್ದಾರೆ. ಇದು ವಿದ್ಯಾರ್ಥಿಗಳ ಭವಿಷ್ಯದ ಮೇಲೆ ಪರಿಣಾಮ ಬೀರುತ್ತಿದೆ. ತಾವು ಯಾವುದೇ ಕಾರಣಕ್ಕೂ ಹಣ ಕಟ್ಟೋದಿಲ್ಲ. ಲಕ್ಷಗಟ್ಟಲೇ ದಂಡದ ಹಣ ಕಟ್ಟೋದಾದರೂ ಹೇಗೆ ಎಂದು ಪ್ರಾಚಾರ್ಯರು ಪ್ರಶ್ನಿಸುತ್ತಾರೆ. ಎರಡೂ ಸೆಮಿಸ್ಟರ್‌ನಲ್ಲಿ ಪರೀಕ್ಷೆ ಬರೆದ ವಿದ್ಯಾರ್ಥಿಗಳ ಸಂಖ್ಯೆ 410. ಆದರೆ, ಅವರ ಪೈಕಿ 224 ವಿದ್ಯಾರ್ಥಿಗಳ ಉತ್ತರ ಪತ್ರಿಕೆಗಳು ಮಾತ್ರ ತಡವಾಗಿ ಮುಟ್ಟಿವೆ. ಆದರೆ ವಿವಿಯ ಪರೀಕ್ಷಾ ವಿಭಾಗದ ಅಧಿಕಾರಿಗಳು 410 ವಿದ್ಯಾರ್ಥಿಗಳ ಲೆಕ್ಕ ತೋರಿಸಿ, ರು. 8 ಲಕ್ಷ ದಂಡ ಕಟ್ಟಿ ಎಂದು ನೋಟಿಸ್ ಕಳುಹಿಸಿದ್ದಾರೆ. ಇದು ಹೇಗೆ ಸಾಧ್ಯ? ಎನ್ನುತ್ತಾರೆ.
ಆರೋಪ-ಪ್ರತ್ಯಾರೋಪ: ಜು. 4ರ ಬಿಎಸ್ಸಿ 4ನೇ ಸೆಮಿಸ್ಟರ್ ಫಲಿತಾಂಶ ಬಂದಿತ್ತು. ಆದರೆ ಕಾಲೇಜಿನಿಂದ ತಮಗೆ ಪ್ರಾಯೋಗಿಕ ಪರೀಕ್ಷೆ ಉತ್ತರ ಪತ್ರಿಕೆಗಳು ಬಂದಿಲ್ಲ ಎನ್ನುವ ಕಾರಣಕ್ಕೆ ಫಲಿತಾಂಶವನ್ನು ಕವಿವಿ ತಡೆದಿದೆ. ಇದೇ ರೀತಿ ಬಿಎಸ್ಸಿ 2ನೇ ವರ್ಷದ ವಿದ್ಯಾರ್ಥಿಗಳ ಫಲಿತಾಂಶಕ್ಕೂ ತಡೆಯಾಗಿದೆ. ಇದಕ್ಕೆಲ್ಲ ಕಾರಣ ಕಾಲೇಜಿನ ಪ್ರಾಚಾರ್ಯರು, ಕೆಲ ಅಧ್ಯಾಪಕರ ನಡುವೆ ನಡೆಯುತ್ತಿರೋ ಜಗಳ. ಅಧ್ಯಾಪಕರಾದ ಸ್ಟ್ಯಾನ್ಲೀ ಪೀಟರ್, ಡಾ. ಜಾನ್ಸನ್ ಜೋಗುಳ, ಡಾ. ಜಿ.ಆರ್. ವಿಕ್ಟರ್ ಹಾಗೂ ಬಿ.ಕೆ. ಮೇಗಲಮನಿ ಕಳೆದ ಮಾರ್ಚ್‌ನಲ್ಲಿ ನಡೆದ ಪರೀಕ್ಷೆಯ ಉತ್ತರ ಪತ್ರಿಕೆಗಳನ್ನು ನೀಡದಿರುವುದು ಇದಕ್ಕೆ ಕಾರಣ ಎಂದು ಪ್ರಾಚಾರ್ಯರು ಆರೋಪಿಸುತ್ತಾರೆ. ಆದರೆ, ಉತ್ತರ ಪತ್ರಿಕೆ ನೀಡಲು ಹೋದರೆ ಪ್ರಾಚಾರ್ಯರು ನಿರಾಕರಿಸಿದರು. ಆದ್ದರಿಂದ ವಿವಿ ಮೌಲ್ಯಮಾನಪ ಕುಲಸಚಿವರ ವರೆಗೂ ಹೋಗಿ ಬಂದಿದ್ದೇವೆ ಎಂದು ಈ ನಾಲ್ವರು ಪ್ರಾಧ್ಯಾಪಕರು ಪ್ರತ್ಯಾರೋಪ ಮಾಡುತ್ತಾರೆ. ಈ ಮಧ್ಯೆ ಫಲಿತಾಂಶವಿಲ್ಲದೇ ಬಿಎಸ್ಸಿ ಅಂತಿಮ ವರ್ಷದ ವಿದ್ಯಾರ್ಥಿಗಳು ಪರದಾಡುವಂತಾಗಿದೆ.
ಫಲಿತಾಂಶ ತಡೆ ಹಿಡಿಯಲಾದ ಒಟ್ಟು 410 ವಿದ್ಯಾರ್ಥಿಗಳ ಪೈಕಿ 200ಕ್ಕೂ ಹೆಚ್ಚು ವಿದ್ಯಾರ್ಥಿಗಳು ಬಿಎಸ್ಸಿ ಅಂತಿಮ ವರ್ಷ ಮುಗಿಸಿದ್ದಾರೆ. ಮುಂದಿನ ಹಂತದ ಶಿಕ್ಷಣಕ್ಕೆ ಇದೀಗ ಅಂತಿಮ ವರ್ಷದ ಅಂಕಪಟ್ಟಿ ಬೇಕು. ಇಲ್ಲದಿದ್ದರೆ ಒಂದು ವರ್ಷ ಹಾಳಾಗುತ್ತದೆ. ವಿದ್ಯಾರ್ಥಿ ಉಮೇಶ ಮುಗದ ಬಿಎಸ್ಸಿ ಕೊನೆ ಸೆಮಿಸ್ಟರ್‌ನಲ್ಲಿ ಪಾಸಾಗಿದ್ದಾನೆ. ಆದರೆ 4ನೇ ಸೆಮಿಸ್ಟರ್‌ನ ಒಂದು ವಿಷಯ ಬಾಕಿ ಇದ್ದು, ಕಳೆದ ಮಾರ್ಚ್ ತಿಂಗಳಲ್ಲಿ ಪೂರಕ ಪರೀಕ್ಷೆ ಬರೆದಿದ್ದ. ಆದರೆ ಈಗ ಆ ಫಲಿತಾಂಶ ತಡೆಯಲಾಗಿದೆ. ಇದೀಗ ಉಮೇಶ ಎಲ್‌ಎಲ್‌ಬಿ ಪ್ರವೇಶ ಪಡೆದಿದ್ದು, ಎರಡು ದಿನಗಳೊಳಗೆ ಅಂಕಪಟ್ಟಿ ನೀಡುವಂತೆ ಕಾನೂನು ಕಾಲೇಜಿನಲ್ಲಿ ಸೂಚಿಸಲಾಗಿದೆ. ಒಂದು ವೇಳೆ ಅಂಕಪಟ್ಟಿ ನೀಡದಿದ್ದರೆ ಪ್ರವೇಶ ಕಳೆದುಕೊಳ್ಳಬೇಕಾಗುತ್ತದೆ.