ತಪ್ಪಿತಸ್ಥ ವೈದ್ಯರ ರಕ್ಷಿಸುತ್ತಿರುವ ಡಾ. ಹಂಗರಗಾ: ಆರೋಪ
ಹುಬ್ಬಳ್ಳಿ: ಕಿಮ್ಸ್ನಲ್ಲಿ ಕಳೆದ ಭಾನುವಾರ ಐದು ಹಸುಳೆಗಳು ಸಾವನ್ನಪ್ಪಿರುವ ಪ್ರಕರಣಕ್ಕೆ ಕಿಮ್ಸ್ ನಿರ್ದೇಶಕರು ಸೇರಿದಂತೆ ಪ್ರಸೂತಿ ವಿಭಾಗದ ವೈದ್ಯರೇ ಹೊಣೆಗಾರರು ಎಂದು ಮಾಹಿತಿ ಹಕ್ಕು ಹೋರಾಟಗಾರ ಮೋಹನ ಮಾಳಿಗೇರ ಆರೋಪಿಸಿದ್ದಾರಲ್ಲದೆ, ಕಿಮ್ಸ್ ನಿರ್ದೇಶಕರ ವಿರುದ್ಧವೇ ಈ ಹಿಂದೆ ದೂರು ದಾಖಲಾಗಿವೆ ಎಂದಿದ್ದಾರೆ.
ಪತ್ರಿಕಾ ಹೇಳಿಕೆ ನೀಡಿರುವ ಮಾಳಿಗೇರ, ಕಿಮ್ಸ್ನಲ್ಲಿ ವೈದ್ಯರ ನಿರ್ಲಕ್ಷ್ಯದಿಂದಾಗಿ ಮಹಿಳೆಯರು, ಮಕ್ಕಳು ಸಾವನ್ನಪ್ಪುವ ಘಟನೆ ಇತ್ತೀಚಿನ ದಿನಗಳಲ್ಲಿ ಹೆಚ್ಚುತ್ತಾ ಸಾಗಿದೆ. ಇದರಿಂದಾಗಿ ರೋಗಿಗಳು ಕಿಮ್ಸ್ಗೆ ಬರಲು ಹಿಂದೇಟು ಹಾಕುವಂತಾಗಿದೆ ಎಂದವರು ಆತಂಕ ವ್ಯಕ್ತ ಪಡಿಸಿದ್ದಾರೆ.
ಕಿಮ್ಸ್ ಬಡವರ ಪಾಲಿನ ಸಂಜೀವಿನಿ ಎಂದೆನಿಸಿಕೊಂಡಿದೆ. ಆದರೆ ವೈದ್ಯರು ಬಡ ರೋಗಿಗಳಿಗೆ ಸರಿಯಾದ ಚಿಕಿತ್ಸೆ ನೀಡುತ್ತಿಲ್ಲ. ಅದರಲ್ಲೂ ಮುಖ್ಯವಾಗಿ ಪ್ರಸೂತಿ ವಿಭಾಗದಲ್ಲಿ ಮೇಲಿಂದ ಮೇಲೆ ಅವಾಂತರಗಳು ನಡೆಯುತ್ತಿವೆ. ಇತ್ತೀಚೆಗೆ ಆಯಾ ಗಂಗವ್ವ ಎಂಬಾಕೆ ಬಾಣಂತಿಯೋರ್ವಳು 'ಖುಷಿ' ಕೊಡಲಿಲ್ಲ ಎನ್ನುವ ಕಾರಣಕ್ಕೆ ಆಕೆಗೆ ಕಪಾಳಮೋಕ್ಷ ಮಾಡಿದ್ದಳು. ಇದಲ್ಲದೇ ವೈದ್ಯರ ನಿರ್ಲಕ್ಷ್ಯದಿಂದಾಗಿ ಕಳೆದ ಭಾನುವಾರದಂದೇ ಐವರು ಮಕ್ಕಳು ಸಾವನ್ನಪ್ಪಿದ್ದಾರೆ. ಈ ಬಗ್ಗೆ ಕೂಲಂಕಷ ತನಿಖೆ ನಡೆಸಿ ತಪ್ಪಿತಸ್ಥರ ವಿರುದ್ಧ ಕ್ರಮ ಕೈಗೊಳ್ಳಬೇಕಾದ ಜವಾಬ್ದಾರಿ ಕಿಮ್ಸ್ ನಿರ್ದೇಶಕ ಡಾ. ಯು.ಎಸ್. ಹಂಗರಗಾ ಅವರದ್ದು. ಅದನ್ನು ಬಿಟ್ಟು ವೈದ್ಯರು ಮಾಡಿದ್ದೇ ಸರಿ ಎನ್ನುವ ಮೂಲಕ ಸಾವಿನ ಸರಣಿ ಮುಂದುವರಿಸ ಹೊರಟಿರುವುದು ದುರಂತ.
ಡಾ. ಹಂಗರಗಾ ಅವರಿಗೆ ನಿರ್ದೇಶಕ ಸ್ಥಾನದಲ್ಲಿ ಕುಳ್ಳಿಸಿರುವುದೇ ತಪ್ಪು. ವೈದ್ಯರಾಗಲು ಅನರ್ಹರಾಗಿರುವ ಡಾ. ಹಂಗರಗಾ ಲಾಬಿ ಮಾಡಿ ನಿರ್ದೇಶಕ ಸ್ಥಾನದಲ್ಲಿ ಕುಳಿತಿದ್ದಾರೆ. 2007ರಲ್ಲಿ ಬದಾಮಿಯ ವಸಂತ ಚಿಂತಾಮಣಿ ಅವರ ಮಗಳಿಗೆ ಡಾ. ಯು.ಎಸ್. ಹಂಗರಗಾ, ಡಾ. ಎಂ.ಜಿ. ಹಿರೇಮಠ, ಡಾ. ನವೀನ ಪ್ರಸಾದ ಸಂತಾನ ಹರಣ ಚಿಕಿತ್ಸೆ ಮಾಡುವ ಕಾಲಕ್ಕೆ ಆಕೆ ಮೃತಪಟ್ಟಿದ್ದಳು. ಈ ಬಗ್ಗೆ ದೂರು ದಾಖಲಾಗಿತ್ತು. ಇದಲ್ಲದೇ ಮನ್ಸೂರ್ ನಿವಾಸಿಯೊಬ್ಬಳಿಗೆ ಸಂತಾನ ಹರಣ ಚಿಕಿತ್ಸೆ ಮಾಡುವಾಗ ಹೊಟ್ಟೆ ಹಾಗೂ ಕರುಳು ಸೇರಿದಂತೆ ಹೊಲಿಗೆ ಹಾಕಿ ಆಕೆಯ ಸಾವಿಗೆ ಕಾರಣರಾಗಿದ್ದರು. ಈ ಬಗ್ಗೆಯೂ ವಿದ್ಯಾನಗರ ಪೊಲೀಸ್ ಠಾಣೆಯಲ್ಲಿ ಡಾ. ಹಂಗರಗಾ ವಿರುದ್ದ ಪ್ರಕರಣ ದಾಖಲಾಗಿದೆ. ಹೀಗಿರುವಾಗ ತಾವು ಮಾಡಿರುವ ಅಪರಾಧವನ್ನೇ ಮಾಡಿರುವ ತಮ್ಮ ಸಹಪಾಠಿ ವೈದ್ಯರನ್ನು ರಕ್ಷಿಸಲು ಹೊರಟಿದ್ದಾರೆಂದು ಮಾಳಿಗೇರ ದೂರಿದ್ದಾರೆ.