ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಧಾರವಾಡ

ಮಳೆ ಬಂದರೂ ರೈತರಿಗಿಲ್ಲ ಖುಷಿ

Lingaraj Badiger
Updated On : 25 Jul 2014, 11:34 am

ಕನ್ನಡಪ್ರಭ ವಾರ್ತೆ, ಧಾರವಾಡ, ಜು. 24
ಇನ್ನೇನು ಮಳೆ ನಿರಂತರವಾಗಿ ಬರುತ್ತಿದೆ. ರೈತರು ಬಿತ್ತಿದ ಬೆಳೆಗಳಿಗೆ ಕಂಟಕವಿಲ್ಲ. ಮುಂಗಾರು ಹಂಗಾಮಿನಲ್ಲಿ ಬಂಪರ್ ಬೆಳೆ ತೆಗೆಯಬಹುದೆಂದು ಊಹಿಸಿದ್ದರೆ ತಪ್ಪು.
ವಾರದಿಂದ ನಿರಂತರವಾಗಿ ಮಳೆ ಸುರಿಯುತ್ತಿದ್ದರೂ ತಡವಾಗಿ ಮಳೆ ಬಂದ ಕಾರಣ ಮುಂಗಾರಿನ ಹಲವು ಪ್ರಮುಖ ಬೆಳೆಗಳು ನೆಲಕಚ್ಚಿದ್ದು, ರೈತ ಸಂತಸದಿಂದಿಲ್ಲ. ಮುಂಗಾರು ಹಂಗಾಮು ಆರಂಭವಾಗುವ ಜೂನ್ ಹಾಗೂ ಜುಲೈ ತಿಂಗಳಲ್ಲಿಯೇ ಕಡಿಮೆ ಪ್ರಮಾಣದಲ್ಲಿ ಮಳೆಯಾಗಿದ್ದು, ಹೆಸರು, ಬತ್ತ, ಕಬ್ಬು, ಮೆಣಸಿನಕಾಯಿ ಬೆಳೆಗಳಿಗೆ ಈಗಾಗಲೇ ಶೇ. 90ರಷ್ಟು ಹಾನಿಯಾಗಿದೆ ಎಂಬ ಮಾಹಿತಿ ಲಭ್ಯವಾಗಿದೆ.
ಮೇ ತಿಂಗಳಲ್ಲಿ ಬಿತ್ತಲು ಸಾಕಾಗುವಷ್ಟು ಮಳೆ ಬಂದಿತ್ತು. ಹೆಸರು, ಬತ್ತ, ಮೆಣಸಿನಕಾಯಿ, ಬಟಾಣಿ, ಬತ್ತ ಸೇರಿದಂತೆ ವಿವಿಧ ಬೆಳೆಗಳನ್ನು ಬಿತ್ತಲಾಗಿತ್ತು. ಜಿಲ್ಲೆಯ 23,852 ಹೆಕ್ಟೇರ್ ಪ್ರದೇಶದಲ್ಲಿ ಹೆಸರು ಬೆಳೆ ಬಿತ್ತಲಾಗಿದೆ. ಆದರೆ, ಜುಲೈ ಕೊನೆ ವಾರದ ವರೆಗೂ ಮಳೆ ಬಾರದ ಕಾರಣ ಹೆಸರು ಕಾಯಿ ಕೊರೆಯುವ ಹುಳುವಿನ ದಾಳಿಗೆ ಸಿಲುಕಿ ಶೇ. 90ರಷ್ಟು ನಷ್ಟವಾಗಿದೆ. ಅದೇ ರೀತಿ 21,500 ಹೆಕ್ಟೇರ್ ಪ್ರದೇಶದಲ್ಲಿ ಸ್ಥಳೀಯ ಹಾಗೂ ಸುಧಾರಿತ ಬತ್ತ ಬಿತ್ತಲಾಗಿದೆ. ಮಳೆ ಕೊರತೆಯಿಂದಾಗಿ ಕಲಘಟಗಿ, ಅಳ್ನಾವರ, ಧಾರವಾಡ ಭಾಗಶಃ ಪ್ರದೇಶದಲ್ಲಿ ಬತ್ತ ನೆಲಕಚ್ಚುತ್ತಿದೆ. ಇನ್ನು ಕುಂದಗೋಳ ಭಾಗದಲ್ಲಿ ಬಿತ್ತಿದ ಸಾವಿರಾರು ಹೆಕ್ಟೇರ್ ಪ್ರದೇಶದ ಮೆಣಸಿನಕಾಯಿ ಈ ಬಾರಿ ಮಳೆಯ ಕೊರತೆ ಅನುಭವಿಸುತ್ತಿದೆ.
ಇನ್ನೂ ಬಿತ್ತನೆ: ಶೇಂಗಾ, ಸೋಯಾಬೀನ್, ಗೋವಿನಜೋಳ, ಸೂರ್ಯಕಾಂತಿ, ಹತ್ತಿ ಬೆಳೆಗಳಿಗೆ ಮಳೆ ಕಡಿಮೆ ಇದ್ದರೂ ಪರವಾಗಿಲ್ಲ. ಈಗ ಬಂದಿರುವ ಮಳೆಗೆ ಜೀವ ಹಿಡಿದುಕೊಂಡಿವೆ. ಹೆಸರು, ಬತ್ತದ ಬೆಳೆಗಳು ಹಾನಿಯಾಗಿದ್ದು, ಈ ಬೆಳೆ ತೆಗೆದು ಸೂರ್ಯಕಾಂತಿ, ಗೋವಿನ ಜೋಳ ಬೆಳೆಗಳನ್ನು ಪರ್ಯಾಯ ಬೆಳೆಯಾಗಿ ಬಿತ್ತುತ್ತಿದ್ದಾರೆ. ಪ್ರಸ್ತುತ ವರ್ಷ 2,07,615 ಹೆಕ್ಟೇರ್ ಪ್ರದೇಶದಲ್ಲಿ ಬಿತ್ತನೆ ಗುರಿ ಹೊಂದಿದ್ದು, ಇದೀಗ ಶೇ. 84ರಷ್ಟು ಬಿತ್ತನೆಯಾಗಿದೆ. ಇನ್ನುಳಿದ ಪ್ರದೇಶದಲ್ಲಿ ಇನ್ನೂ ಬಿತ್ತನೆಯಾಗುವ ಸಾಧ್ಯತೆ ಇದೆ. ಈ ಹಿನ್ನೆಲೆಯಲ್ಲಿ ಬಿತ್ತನೆ ಬೀಜ, ರಸಗೊಬ್ಬರ ಸಂಗ್ರಹ ಇಟ್ಟುಕೊಳ್ಳಲಾಗಿದೆ ಎಂದು ಕೃಷಿ ಇಲಾಖೆ ಅಧಿಕಾರಿಗಳು ಪತ್ರಿಕೆಗೆ ತಿಳಿಸಿದರು.
ಎಷ್ಟು ಕೊರತೆ?: 2014ರ ಜನವರಿಯಿಂದ ಜುಲೈ 22ರ ವರೆಗೆ 371.4 ಮಿ.ಮೀ. ವಾಡಿಕೆ ಮಳೆಯಾಗಬೇಕಿತ್ತು. ಆದರೆ, 300.5 ಮಿ.ಮೀ. ಆಗಿದ್ದು, ಶೇ. 20ರಷ್ಟು ಕೊರತೆಯಾಗಿದೆ. ಅದೇ ರೀತಿ ಜೂನ್ ತಿಂಗಳಲ್ಲಿ 113.6 ಮಿ.ಮೀ. ಬದಲು 51.1ರಷ್ಟಾಗಿದ್ದು ಶೇ. 53ರಷ್ಟು ಕೊರತೆ ಮಳೆಯಾಗಿದೆ. ಇನ್ನು ಜುಲೈ ತಿಂಗಳಲ್ಲಿ 117.2 ಮಿ.ಮೀ. ಬದಲು ಬರೀ 59.6ರಷ್ಟಾಗಿದ್ದು ಶೇ. 50ರಷ್ಟು ಕೊರತೆಯಾಗಿದೆ. ಪ್ರಮುಖವಾಗಿ ಮುಂಗಾರು ಹಂಗಾಮು ಜೂನ್ ಮತ್ತು ಜುಲೈ ತಿಂಗಳು. ಇದೇ ತಿಂಗಳಲ್ಲಿ ಮಳೆ ಕೊರತೆ ಕಂಡು ಬಂದಿರುವುದೇ ರೈತರಿಗೆ ಸಂಕಟ ತಂದಿದೆ.
ಸಾವಿರಾರು ರುಪಾಯಿ ಖರ್ಚು ಮಾಡಿ ರೈತರು ಬಿತ್ತನೆ ಬೀಜ, ರಸಗೊಬ್ಬರ ತಂದು ಭೂಮಿಗೆ ಹಾಕಿದ್ದಾರೆ. ಆದರೆ, ಪ್ರತಿ ವರ್ಷ ಒಂದಲ್ಲ ಒಂದು ಕಾರಣದಿಂದಾಗಿ ರೈತ ಪೆಟ್ಟು ತಿನ್ನುತ್ತಿದ್ದಾನೆ. ಹೀಗಾಗಿ ರೈತರು ವರ್ಷದಿಂದ ವರ್ಷಕ್ಕೆ ಕೃಷಿಯಿಂದ ವಿಮುಖರಾಗುತ್ತಿದ್ದು, ರೈತನ ಮಕ್ಕಳಂತೂ ಇತ್ತೀಚೆಗೆ ರೈತರಾಗುವುದು ಇಲ್ಲವೇ ಇಲ್ಲ ಎನ್ನುವ ಸ್ಥಿತಿ ಉಂಟಾಗಿದೆ.
ಹವಾಮಾನ ವೈಪರೀತ್ಯದಿಂದಾಗಿ ಪ್ರತಿ ಬಾರಿ ರೈತ ಕೃಷಿಯಲ್ಲಿ ಹಾನಿ ಅನುಭವಿಸುತ್ತಾನೆ. ಸರ್ಕಾರಗಳೂ ರೈತರ ಮೂಗಿಗೆ ತುಪ್ಪ ಸವರುವ ಕೆಲಸ ಮಾಡುತ್ತಿವೆಯೇ ಹೊರತು ರೈತ ಸ್ವಾಭಿಮಾನಿಯಾಗಿ ಬದುಕುವ ರೀತಿಯಲ್ಲಿ ಚಿಂತಿಸುತ್ತಿಲ್ಲ. ಆತ ಬೆಳೆದ ಬೆಳೆಗೆ ಬೆಂಬಲ ಬೆಲೆ ಇಲ್ಲ. ರೈತರ ಎರಡನೇ ದರ್ಜೆ ಪ್ರಜೆಯಾಗಿ ಬದುಕುತ್ತಿದ್ದಾನೆ ಎಂಬುದು ರೈತ ಮುಖಂಡ ಶಿವಾನಂದ ಪಾಟೀಲ್ ಬೇಸರದ ಮಾತು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement