ವ್ಯವಸ್ಥಿತ ಅಧ್ಯಯನದಿಂದ ಯಶಸ್ಸು: ಸಿಪಿಐ ಶ್ರೀಕಾಂತ
ಕನ್ನಡಪ್ರಭ ವಾರ್ತೆ, ಧಾರವಾಡ, ಜು. 24
ವ್ಯವಸ್ಥಿತ ಅಧ್ಯಯನದಿಂದ ಯಾವುದೇ ಸ್ಪರ್ಧಾತ್ಮಕ ಪರೀಕ್ಷೆಯಲ್ಲಿ ಯಶಸ್ಸು ಪಡೆಯಲು ಸಾಧ್ಯ. ಇದು ಪೊಲೀಸ್ ಪೇದೆ ನೇಮಕಾತಿ ಪರೀಕ್ಷೆಗೂ ಅನ್ವಯವಾಗುತ್ತದೆ ಎಂದು ಧಾರವಾಡ ನಗರ ಸಂಚಾರಿ ಠಾಣೆ ಪೊಲೀಸ್ ಇನ್ಸ್‌ಪೆಕ್ಟರ್ ಶ್ರೀಕಾಂತ ತೋಟಗಿ ಹೇಳಿದರು.
ನಗರದ ನೌಕರರ ಭವನದಲ್ಲಿ ಕ್ಲಾಸಿಕ್ ಕೆಎಎಸ್, ಐಎಎಸ್ ಸ್ಟಡಿ ಸರ್ಕಲ್ ಆಯೋಜಿದ್ದ ಉಚಿತ ಮಾರ್ಗದರ್ಶನ ಕಾರ್ಯಕ್ರಮದಲ್ಲಿ ಪೊಲೀಸ್ ಕಾನ್‌ಸ್ಟೇಬಲ್ ನೇಮಕಾತಿ ಪರೀಕ್ಷೆ ಅಭ್ಯರ್ಥಿಗಳನ್ನು ಉದ್ದೇಶಿಸಿ ಅವರು ಮಾತನಾಡಿದರು.
ಪೊಲೀಸ್ ಇಲಾಖೆಯಿಂದ ಸಾವಿರಾರು ಕಾನ್‌ಸ್ಟೇಬಲ್ ಹುದ್ದೆಗಳಿಗೆ ಅರ್ಜಿ ಆಹ್ವಾನಿಸಲಾಗಿದೆ. ದೈಹಿಕ ಪರೀಕ್ಷೆಯಲ್ಲಿ ಉತ್ತೀರ್ಣರಾದ ಅಭ್ಯರ್ಥಿಗಳಿಗೆ ಇಲಾಖೆಯಿಂದ ಲಿಖಿತ ಪರೀಕ್ಷೆ ನಡೆಸಲಾಗುತ್ತದೆ. ಅಭ್ಯರ್ಥಿಗಳು ಪರೀಕ್ಷೆಯ ಪಠ್ಯಕ್ರಮಕ್ಕನುಗುಣವಾಗಿ ಅಧ್ಯಯನ ಮಾಡುವುದರ ಜತೆಗೆ ಹೆಚ್ಚು ಹೆಚ್ಚು ಪ್ರಶ್ನೆಗಳನ್ನು ಬಿಡಿಸುವುದರ ಮೂಲಕ ತಮ್ಮನ್ನು ತಾವು ಸಿದ್ಧಗೊಳಿಸಿಕೊಳ್ಳಬೇಕು. ಈ ಪರೀಕ್ಷೆಯಲ್ಲಿ ಸಾಕಷ್ಟು ಸ್ಪರ್ಧೆಯಿದ್ದು, ಯಶಸ್ಸು ಪಡೆಯಬೇಕಾದರೆ ಅಭ್ಯರ್ಥಿಗಳು ಪ್ರಾಮಾಣಿಕವಾಗಿ ಓದಬೇಕು ಮತ್ತು ಪರೀಕ್ಷೆಯ ಕುರಿತಾದ ಯಾವುದೇ ಊಹಾ-ಪೋಹಗಳಿಗೆ ಕಿವಿಗೊಡಬಾರದು ಎಂದರು.
ಸಂಪನ್ಮೂಲ ವ್ಯಕ್ತಿ ಸುರೇಶ ಕುಲಕರ್ಣಿ ಹಾಗೂ ದೈಹಿಕ ಶಿಕ್ಷಕ ಸುರೇಶ ಜಟ್ಟೆನ್ನವರ ಭಾಗವಹಿಸಿದ್ದರು. ಹಿರಿಯ ಉಪನ್ಯಾಸಕ ಐ.ಜಿ. ಚೌಗಲಾ ಅಧ್ಯಕ್ಷತೆ ವಹಿಸಿದ್ದರು. ಬಸವರಾಜ ಬಂಗಾರಿ ನಿರೂಪಿಸಿದರು. ಸುಮಾರು ಐದು ನೂರು ಅಭ್ಯರ್ಥಿಗಳು ಭಾಗವಹಿಸಿದ್ದರು.