ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಧಾರವಾಡ

ಇಂದು ಕಾರ್ಗಿಲ್ ವಿಜಯೋತ್ಸವ ಆಚರಣೆ

Lingaraj Badiger
Updated On : 26 Jul 2014, 11:06 am

ಧಾರವಾಡ: ಉತ್ತರ ಕರ್ನಾಟಕ ಸೈನಿಕರ ಕಲ್ಯಾಣ ಸಮಿತಿಯು ಜಿಲ್ಲಾಡಳಿತದ ಸಹಕಾರದೊಂದಿಗೆ ಜು. 26ರ ಬೆಳಗ್ಗೆ 11ಕ್ಕೆ ಜಿಲ್ಲಾಧಿಕಾರಿ ಕಚೇರಿ ಬಳಿಯ ಕಾರ್ಗಿಲ್ ಸ್ತೂಪದ ಬಳಿ ಕಾರ್ಗಿಲ್ ವಿಜಯೋತ್ಸವ ಕಾರ್ಯಕ್ರಮ ಹಮ್ಮಿಕೊಂಡಿದೆ. ದೇಶ ರಕ್ಷಣೆಗಾಗಿ ಮಡಿದ ಯೋಧರಿಗೆ ಗೌರವ ಸಮರ್ಪಣೆ ನಡೆಯಲಿದೆ. ಜಿಲ್ಲಾಧಿಕಾರಿ ಪಿ. ರಾಜೇಂದ್ರ ಚೋಳನ್ ಅಧ್ಯಕ್ಷತೆ ವಹಿಸುವರು. ಮೇಯರ್ ಶಿವು ಹಿರೇಮಠ, ಪೊಲೀಸ್ ಆಯುಕ್ತ ರವೀಂದ್ರ ಪ್ರಸಾದ, ಹಿರಿಯ ಸೇನಾನಿ ಲೆ.ಕ. ಬಹುಗುಣ, ಎಸ್ಪಿ ಲೋಕೇಶ ಕುಮಾರ, ಕಿತ್ತೂರು ಸೈನಿಕ ಶಾಲೆಯ ಪ್ರಾಚಾರ್ಯ ಲೆ.ಕ. ನರಹರಿ, ನಿವೃತ್ತ ಸೈನ್ಯಾಧಿಕಾರಿ ಸಿ.ಎಸ್. ಹವಾಲ್ದಾರ ಮತ್ತಿತರರು ಭಾಗವಹಿಸುತ್ತಾರೆ ಎಂದು ಸಂಯೋಜಕ ಚಂದ್ರಶೇಖರ ಅಮಿನಗಡ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಕ್ಯಾಂಪಸ್ ಸಂದರ್ಶನ
ಧಾರವಾಡ: ಜೆಎಸ್ಸೆಸ್ ಮಂಜುನಾಥೇಶ್ವರ ಸ್ನಾತಕ ಮತ್ತು ಸ್ನಾತಕೋತ್ತರ ಅಧ್ಯಯನ ಸಂಸ್ಥೆಯಲ್ಲಿ ಜು. 30ರಂದು ಬಿಎಸ್ಸಿ (ಪಿ.ಸಿ.ಎಂ) ಹಾಗೂ ಬಿಕಾಂ, 2013 ಹಾಗೂ 14ರಲ್ಲಿ ಶೇ. 60ಕ್ಕಿಂತ ಹೆಚ್ಚು ಅಂಕಗಳಿಸಿರುವ ವಿದ್ಯಾರ್ಥಿಗಳಿಗೆ ಕ್ಯಾಂಪಸ್ ಸಂದರ್ಶನ ಏರ್ಪಡಿಸಲಾಗಿದೆ. ಆಸಕ್ತರು ಮಾಹಿತಿಗೆ ಮಹಾವೀರ ಉಪಾಧ್ಯೆ (0836-2462202) ಅವರನ್ನು ಸಂಪರ್ಕಿಸಲು ಪ್ರಾಚಾರ್ಯ ಡಾ. ಅಜಿತ ಪ್ರಸಾದರವರು ತಿಳಿಸಿದ್ದಾರೆ.
ವ್ಯಕ್ತಿ ಆತ್ಮಹತ್ಯೆ
ಕಲಘಟಗಿ: ತಾಲೂಕಿನ ದಾಸ್ತಿಕೊಪ್ಪ ಗ್ರಾಮದ ಆನಂದ ಹನಮಂತ ಹೆಬ್ಬಳ್ಳಿ (27) ಮನೆಯಲ್ಲಿ ನೇಣು ಹಾಕಿಕೊಂಡು ಆತ್ಮಹತ್ಯೆ ಮಾಡಿಕೊಂಡ ಪ್ರಕರಣ ಇಲ್ಲಿನ ಪೊಲೀಸ್ ಠಾಣೆಯಲ್ಲಿ ದಾಖಲಾಗಿದೆ. ಕಾರಣ ತಿಳಿದು ಬಂದಿಲ್ಲ. ಪ್ರಕರಣ ದಾಖಲಿಸಿಕೊಂಡ ಪಿ.ಐ. ನಡುವಿನಮನಿ ತನಿಖೆ ಕ್ರಮ ಕೈಗೊಂಡಿದ್ದಾರೆ.
ಪೇಂಟರ್ ಸಾವು
ಕಲಘಟಗಿ: ಪಟ್ಟಣದ ಗಾಂಧಿ ನಗರದಲ್ಲಿ ಮನೆಯೊಂದಕ್ಕೆ ಬಣ್ಣ ಹಚ್ಚುತ್ತಿದ್ದ ಧರಣೇಂದ್ರ ಕುರಬೇರಪ್ಪ ನವಲಗುಂದ (45) ಏಣಿಯಿಂದ ಕೆಳಗೆ ಬಿದ್ದು ಮೃತಪಟ್ಟಿದ್ದಾನೆ. ಕಲಘಟಗಿ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ.
ಕೊಲೆ ಯತ್ನ: ಆರೋಪಿಗೆ ನಾಲ್ಕು ವರ್ಷ ಸಜೆ
ಧಾರವಾಡ: ವ್ಯಕ್ತಿಯೊಬ್ಬನ ಕೊಲೆ ಯತ್ನ ಮಾಡಿರುವುದು ಸಾಬೀತಾದ ಹಿನ್ನೆಲೆಯಲ್ಲಿ ನವಲಗುಂದ ತಾಲೂಕಿನ ಕಾಶಪ್ಪ ಬೆಳಗವಿ ಎಂಬಾತನಿಗೆ ನಾಲ್ಕು ವರ್ಷ ಸಾದಾಶಿಕ್ಷೆ ಹಾಗೂ ರು. 10 ಸಾವಿರ ದಂಡ ವಿಧಿಸಿ ಇಲ್ಲಿನ ಜಿಲ್ಲಾ ನ್ಯಾಯಾಲಯ ಆದೇಶಿಸಿದೆ. ದ್ವೇಷದ ಹಿನ್ನೆಲೆಯಲ್ಲಿ ವನಹಳ್ಳಿ ಗ್ರಾಮದ ಶಿವಪುತ್ರಪ್ಪ ಹೆಸರಗನ್ನವರ ಎಂಬುವರ ಮೇಲೆ 2012ರ ನವೆಂಬರ್ 18ರಂದು ಕಾಶಪ್ಪ ಮಾರಣಾಂತಿಕ ಹಲ್ಲೆ ಮಾಡಿದ್ದನು. ಈ ಕುರಿತು ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಆಗಿದ್ದ ಪಿಎಸ್‌ಐ ಸುರೇಶ ಯಳ್ಳೂರ ಪ್ರಕರಣದ ತನಿಖೆ ನಡೆಸಿದ್ದರು. ತನಿಖೆಯಿಂದ ಕಾಶಪ್ಪನ ಮೇಲಿರುವ ಆರೋಪ ಸಾಬೀತಾಗಿದ್ದು, ಇದೀಗ ಕಾಶಪ್ಪನಿಗೆ ಶಿಕ್ಷೆ ವಿಧಿಸಲಾಗಿದೆ. ಜೈಲು ಶಿಕ್ಷೆ, ದಂಡ ಅಲ್ಲದೇ, ಹಲ್ಲೆಗೊಳಗಾದ ಶಿವಪುತ್ರಪ್ಪನಿಗೆ ಕಾಶಪ್ಪ ರು. 7 ಸಾವಿರ ಪರಿಹಾರಧನ ನೀಡುವಂತೆಯೂ ನ್ಯಾಯಾಲಯ ಆದೇಶಿಸಿದೆ. ಸರ್ಕಾರದ ಪರ ಸರ್ಕಾರಿ ಅಭಿಯೋಜಕ ಎಂ.ಎಚ್. ಕಬಾಡಿ ವಕಲಾತು ವಹಿಸಿದ್ದರು.
ಮದ್ಯ ಅಕ್ರಮ ಮಾರಾಟ: ಒಬ್ಬನ ಬಂಧನ
ಧಾರವಾಡ: ಅಕ್ರಮವಾಗಿ ಮದ್ಯ ಮಾರುತ್ತಿದ್ದ ಒಬ್ಬನನ್ನು ಕಲಘಟಗಿ ತಾಲೂಕಿನ ಗಂಭ್ಯಾಪುರ ಗ್ರಾಮದಲ್ಲಿ ಅಬಕಾರಿ ಜಾರಿ ಮತ್ತು ಲಾಟರಿ ನಿಷೇಧ ವಿಭಾಗದ ಅಧಿಕಾರಿಗಳ ತಂಡ ಬಂಧಿಸಿದೆ. ಗಂಭ್ಯಾಪುರ ಗ್ರಾಮದ ಬಸ್ ನಿಲ್ದಾಣದ ಬಳಿ ಅಕ್ರಮವಾಗಿ ಮದ್ಯ ಮಾರುತ್ತಿದ್ದ ಸಂದರ್ಭದಲ್ಲಿ ದಾಳಿ ನಡೆಸಿ ಮುದಕಪ್ಪ ಭೀಮಪ್ಪ ಬಾಗಲಕೋಟಿ ಎಂಬಾತನನ್ನು ಬಂಧಿಸಿದ್ದಾರೆ. ಈತನಿಂದ 2660 ಮೌಲ್ಯದ ಮದ್ಯದ ಬಾಟಲಿಗಳನ್ನು ವಶಪಡಿಸಿಕೊಳ್ಳಲಾಗಿದೆ. ಅಬಕಾರಿ ಜಾರಿ ಮತ್ತು ಲಾಟರಿ ನಿಷೇಧ ವಿಭಾಗದ ಸಿಪಿಐ ವಿಜಯಕುಮಾರ ಟಿ., ನೇತೃತ್ವದ ತಂಡ ದಾಳಿ ನಡೆಸಿತ್ತು. ಪ್ರಕರಣ ದಾಖಲಿಸಿಕೊಂಡು ಆರೋಪಿಯನ್ನು ಕೋರ್ಟ್‌ಗೆ ಹಾಜರುಪಡಿಸಲಾಗಿದೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement