ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಧಾರವಾಡ

ದೌರ್ಜನ್ಯ ತಡೆ: ಎಚ್ಚೆತ್ತ ಶಿಕ್ಷಣ ಇಲಾಖೆ

Lingaraj Badiger
Updated On : 26 Jul 2014, 11:05 am

ಕನ್ನಡಪ್ರಭ ವಾರ್ತೆ, ಧಾರವಾಡ, ಜು. 25
ಬೆಂಗಳೂರಿನ ವಿಬ್‌ಗ್ಯೋರ್ ಶಾಲೆಯ ಆರು ವರ್ಷದ ಬಾಲಕಿ ಮೇಲೆ ನಡೆದ ಅತ್ಯಾಚಾರ ಪ್ರಕರಣದಿಂದಾಗಿ ಶಿಕ್ಷಣ ಇಲಾಖೆ ಎಚ್ಚೆತ್ತುಕೊಂಡಿದ್ದು, ಇದೀಗ ಹಲವು ಕಠಿಣ ಕ್ರಮಗಳಿಗೆ ಮುಂದಾಗಿದೆ.
ಶಾಲೆ-ಕಾಲೇಜುಗಳ ವಿದ್ಯಾರ್ಥಿಗಳ ಮೇಲೆ ಲೈಂಗಿಕ ದೌರ್ಜನ್ಯ ತಡೆಯಲು ಹಲವು ಉಪಕ್ರಮಗಳನ್ನು ಕಟ್ಟುನಿಟ್ಟಾಗಿ ಅನುಸರಿಸಲು ರಾಜ್ಯದ ಎಲ್ಲ ಶಾಲೆಗಳಿಗೆ ಸೂಚಿಸಿದೆ. ಈ ಕುರಿತು ಜು. 23ರಂದು ಸುತ್ತೋಲೆಯೊಂದನ್ನು ಹೊರಡಿಸಿದ್ದು, ರಾಜ್ಯದ ಆಯಾ ಜಿಲ್ಲಾಧಿಕಾರಿಗಳು, ಡಿಡಿಪಿಐ, ಶಿಕ್ಷಣಾಧಿಕಾರಿಗಳು ಹಾಗೂ ಪೊಲೀಸ್ ಅಧಿಕಾರಿಗಳು ಈ ಕ್ರಮಗಳ ಬಗ್ಗೆ ಮೇಲುಸ್ತುವಾರಿ ವಹಿಸಲು ಶಿಕ್ಷಣ ಇಲಾಖೆ ಆಯುಕ್ತರು ಆದೇಶಿಸಿದ್ದಾರೆ.
ಕ್ರಮಗಳೇನು?: ಶಾಲೆಯ ಮುಖ್ಯಸ್ಥರು, ಶಿಕ್ಷಕರು, ವಿದ್ಯಾರ್ಥಿ ಹಾಗೂ ಪೋಷಕರನ್ನು ಒಳಗೊಂಡು ರಾಜ್ಯದ ಎಲ್ಲ ಶಾಲೆಗಳಲ್ಲಿ ಮಕ್ಕಳ ಸುರಕ್ಷಾ ಸಮಿತಿ ರಚಿಸಿ ಈ ಮೂಲಕ ಮಕ್ಕಳ ಮೇಲಾಗುವ ದೌರ್ಜನ್ಯ ತಡೆಯಬೇಕು. ಪ್ರತಿ ಶಾಲೆ ಆಯಾ ಶಾಲಾ ವ್ಯಾಪ್ತಿಯ ಪೊಲೀಸ್ ಠಾಣೆಯಲ್ಲಿ ಶಾಲೆಯ ಹೆಸರು ಮತ್ತು ವಿಳಾಸದ ಮಾಹಿತಿ ಒದಗಿಸಬೇಕು. ಶಾಲಾ ಆಡಳಿತ ಮಂಡಳಿ ಪದಾಧಿಕಾರಿ, ಶಿಕ್ಷಕರ ಹೆಸರು, ಪೂರ್ಣ ವಿಳಾಸವನ್ನೂ ಪೊಲೀಸರಿಗೆ ಕಡ್ಡಾಯವಾಗಿ ನೀಡಬೇಕು. ಶಾಲಾ ಆಡಳಿತ ಮಂಡಳಿಗೆ ನೇಮಕ ಮಾಡಿಕೊಳ್ಳುವ ಸಿಬ್ಬಂದಿ ಬಗ್ಗೆ ತುಂಬಾ ಜಾಗರೂಕತೆಯಿಂದಿದ್ದು, ಆತನ ಹಿನ್ನೆಲೆ ಪರಿಶೀಲಿಸಿ ನೇಮಕ ಮಾಡಿಕೊಳ್ಳಬೇಕು. ಮಕ್ಕಳ ಕಲ್ಯಾಣ ಸಮಿತಿ, ಜಿಲ್ಲಾ ಮಕ್ಕಳ ರಕ್ಷಣಾ ಘಟಕ 1098, ಮಕ್ಕಳ ವಿಶೇಷ ಪೊಲೀಸ್ ಘಟಕ ದೂರವಾಣಿ ಸಂಖ್ಯೆಗಳನ್ನು ಕಡ್ಡಾಯವಾಗಿ ಸೂಚನಾ ಫಲಕದಲ್ಲಿ ಹಾಕಬೇಕೆಂದು ಸುತ್ತೋಲೆಯಲ್ಲಿ ತಿಳಿಸಲಾಗಿದೆ.
ಅಲ್ಲದೇ, ಮಕ್ಕಳನ್ನು ಸಂಬಂಧಪಟ್ಟ ಪೋಷಕರು ಬಂದಾಗ ಮಾತ್ರ ಅವರೊಡನೆ ಕಳುಹಿಸಬೇಕು. ಶಾಲೆಯಲ್ಲಿ ಪುರುಷ, ಮಹಿಳೆಯರಿಗೆ ಪ್ರತ್ಯೇಕ ಶೌಚಾಲಯ ವ್ಯವಸ್ಥೆ ಕಲ್ಪಿಸಬೇಕು. ಹೆಚ್ಚಾಗಿ ಮಹಿಳಾ ಸಿಬ್ಬಂದಿ ನೇಮಕ ಮಾಡಿದರೆ ಒಳಿತು. ಬದಲಾದ ಪರಿಸರಕ್ಕೆ ತಕ್ಕಂತೆ ಶಿಕ್ಷಕರ ಮಕ್ಕಳನ್ನು ಶಿಕ್ಷೆಗೆ ಗುರಿಪಡಿಸುವಂತಿಲ್ಲ. ಪ್ರೀತಿಯ ಮಾತುಗಳನ್ನು ಹೇಳುವ ಮೂಲಕ ಅಥವಾ ಆಪ್ತ ಸಮಾಲೋಚನೆ ಮೂಲಕ ಅವರ ಮನಸ್ಸು ಬದಲಿಸಬೇಕೆ ಹೊರತು ಮಕ್ಕಳನ್ನು ಕತ್ತಲು ಕೋಣೆ ಹಾಗೂ ಇತರ ಶಿಕ್ಷೆ ನೀಡುವುದನ್ನು ನಿಲ್ಲಿಸಬೇಕು. ಒಂದು ವೇಳೆ ಮಕ್ಕಳು ಗೈರು ಹಾಜರಾದರೆ ಪೋಷಕರಿಗೆ ತಿಳಿಸಿ ಕಾರಣ ಪಡೆಯಬೇಕು. ಶಾಲಾ ವಾಹನದಲ್ಲಿ ಅನಧಿಕೃತ ವ್ಯಕ್ತಿಗಳನ್ನು ಕರೆದೊಯ್ಯದಂತೆ ಕಟ್ಟುನಿಟ್ಟಾಗಿ ಪಾಲಿಸಬೇಕೆಂದು ಸುತ್ತೋಲೆಯಲ್ಲಿ ತಿಳಿಸಲಾಗಿದೆ.
ಪೋಲೀಸರ ಕಾರ್ಯ: ಪೊಲೀಸ್ ಇಲಾಖೆ ಸಹ ಕೈಗೊಳ್ಳುವ ಕ್ರಮಗಳ ಬಗ್ಗೆ ಶಿಕ್ಷಣ ಇಲಾಖೆ ತಿಳಿಸಿದ್ದು, ಶಾಲೆಗಳ ಮಕ್ಕಳ ಮೇಲೆ ಮಾನಸಿಕ, ದೈಹಿಕ ಶಿಕ್ಷೆ, ದೌರ್ಜನ್ಯ, ಲೈಂಗಿಕ ಕಿರುಕುಳ ಸಂಭವಿಸಿದಾಗ ಕೂಡಲೇ ಶಾಲೆಗೆ ಭೇಟಿ ನೀಡಿ ತ್ವರಿತ ಕ್ರಮ ತೆಗೆದುಕೊಳ್ಳಬೇಕು. ಶಾಲಾ ಮಕ್ಕಳಿಂದ, ಪೋಷಕರಿಂದ ಮಕ್ಕಳ ಕುರಿತು ಬರುವ ದೂರುಗಳನ್ನು ಕೂಡಲೇ ಸ್ವೀಕರಿಸಿ ಕ್ರಮ ತೆಗೆದುಕೊಳ್ಳಬೇಕು. ಸಾರ್ವಜನಿಕ ಸ್ಥಳಗಳಲ್ಲಿ ಶಾಲಾ ವಿದ್ಯಾರ್ಥಿಗಳನ್ನು ಚುಡಾಯಿಸುವುದು, ಲೈಂಗಿಕ ಪ್ರಚೋದನೆ ಘಟನೆಗಳು ಕಂಡು ಬಂದಾಗ ಸ್ಥಳದಲ್ಲಿಯೇ ಕ್ರಮ ವಹಿಸಬೇಕೆಂದು ಸುತ್ತೋಲೆಯಲ್ಲಿ ಸೂಚಿಸಲಾಗಿದೆ.
ಒಟ್ಟಾರೆ ಮಕ್ಕಳ ರಕ್ಷಣೆಗಾಗಿ ಶಾಲೆಯ ಮುಖ್ಯಸ್ಥರು, ಶಿಕ್ಷಕರು, ಪಾಲಕ-ಪೋಷಕರು ಹಾಗೂ ಪೊಲೀಸ್ ಇಲಾಖೆಯ ಜವಾಬ್ದಾರಿಗಳನ್ನು ಶಿಕ್ಷಣ ಇಲಾಖೆ ಪರಿಣಾಮಕಾರಿಯಾಗಿ ಮನದಟ್ಟು ಮಾಡಿದೆ. ಆದರೆ, ಎಷ್ಟರ ಮಟ್ಟಿಗೆ ಈ ಕ್ರಮಗಳು ಸಮರ್ಪಕವಾಗಿ ಅನುಷ್ಠಾನವಾಗುತ್ತವೆ ಎಂಬುದೇ ಮಕ್ಕಳ ಸಂರಕ್ಷಣೆ ದೃಷ್ಟಿಯಿಂದ ದೊಡ್ಡ ಸವಾಲು.
-ಬಸವರಾಜ ಹಿರೇಮಠ

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement