ವ್ಯಸನ ಮುಕ್ತರಾದಾಗ ಅಪರಾಧ ಮುಕ್ತ ಗ್ರಾಮ: ಫಾ. ಜೇಕಬ್
ಕಲಘಟಗಿ: ಮನುಷ್ಯನಿಗೆ ಅಸಾಧ್ಯವಾದುದು ಯಾವುದೂ ಇಲ್ಲ. ಮನಸ್ಸಿದ್ದರೆ ಮಾರ್ಗವೆಂದು ಪ್ರತಿಯೊಬ್ಬರೂ ವ್ಯಸನ ಮುಕ್ತರಾಗಲು ಪ್ರಯತ್ನಿಸಿದಾಗ ಅಪರಾಧ ಮುಕ್ತ ಗ್ರಾಮಗಳಾಗಲು ಸಾಧ್ಯ ಎಂದು ಫಾದರ್ ಜೇಕಬ್ ಪಿ.ಜೆ. ಹೇಳಿದರು.
ತಾಲೂಕಿನ ಹುಲ್ಲಂಬಿ ಗ್ರಾಮದ ಗ್ರಾಮದೇವಿ ದೇವಸ್ಥಾನದಲ್ಲಿ ವಿಮೋಚನಾ ಡೆವಲಪ್‌ಮೆಂಟ್ ಸೊಸೈಟಿ, ಸ್ನೇಹಿತರ ಸ್ವಸಹಾಯ ಸಂಘ, ಧರ್ಮಗಿರಿ ಮಾಚಾಪುರ, ಎಮ್ಮೆಟ್ಟಿಯ ಚೆನ್ನ ಚಿನ್ನ ಗುರುಕುಲ ಜಂಟಿಯಾಗಿ ಏರ್ಪಡಿಸಿದ್ದ ಸುವರ್ಣ ಮಹೋತ್ಸವ ವರ್ಷಾಚರಣೆಯಲ್ಲಿ ಅವರು ಮಾತನಾಡಿದರು.
ಪ್ರತಿ ಪುರುಷನ ಯಶಸ್ಸಿನ ಹಿಂದೆ ಒಬ್ಬ ಮಹಿಳೆ ಇರುತ್ತಾಳೆ ಎಂಬುದಕ್ಕೆ ಹಿರೇಹೊನ್ನಳ್ಳಿ ಗ್ರಾಪಂ ಸದಸ್ಯೆ ಈರವ್ವ ಯಲ್ಲಪ್ಪ ದಾಸನಕೊಪ್ಪ ಸಾಕ್ಷಿ. ಇವರಿಂದಾಗಿ ವೈ.ಬಿ. ದಾಸನಕೊಪ್ಪ ಅವರು ಹಲವು ರಂಗದಲ್ಲಿ ಸೇವೆ ಸಲ್ಲಿಸಿ ರಾಜಕೀಯ ಕ್ಷೇತ್ರದಲ್ಲಿ ಯಶಸ್ಸು ಸಾಧಿಸಿ ಜಿಪಂ ಸದಸ್ಯ, ಧಾರವಾಡ ಕೆಎಂಎಫ್ ನಿರ್ದೇಶಕರಾಗಿ ಸಮಾಜ ಸೇವೆಯಲ್ಲಿ ಸಾಧನೆ ಮಾಡುತ್ತಾ ಸಾಗಿದ್ದಾರೆ. ಇದರ ಯಶಸ್ಸು ಅವರ ಪತ್ನಿಗೂ ಸೇರಬೇಕು ಎಂದರು.
ದಾಸನಕೊಪ್ಪ ದಂಪತಿ, ಹಿರಿಯ ನಾಗರಿಕರ ಪರವಾಗಿ ಶಿವನಗೌಡ್ರ ಪಾಟೀಲ, ವಿಕಲಚೇತನ ಶಂಕ್ರಪ್ಪ ಈರಪ್ಪ ಬೇಗೂರ ಅವರನ್ನು ಸನ್ಮಾನಿಸಲಾಯಿತು.
ಶ್ರೀದೇವಿ ಮಾನಪ್ಪ ಬಡಿಗೇರ ಸಾಧನೆಗಳ ಸರದಾರ ಎಂಬ ಕವನ ಕಾಣಿಕೆ ಸಲ್ಲಿಸಿದರು. ರಾಜ್ಯ ರೈತ ಸಂಚಾಲಕ ಬಿ.ಸಿ. ಪಾಟೀಲ ಅಧ್ಯಕ್ಷತೆ ವಹಿಸಿದ್ದರು. ನಿವೃತ್ತ ಪ್ರಾಧ್ಯಾಪಕ ಸಿ.ಕೆ. ಉಣಕಲ್ಲ, ಕೆ.ಸಿ. ಮಲ್ಲಿಗವಾಡ, ಹಿರಿಯ ನ್ಯಾಯವಾದಿ ಬಿ.ವಿ. ಪಾಟೀಲ, ಗ್ರಾಪಂ ಅಧ್ಯಕ್ಷೆ ವಿಶಾಲಾಕ್ಷಿ ಗಂಜಿಹಾಳ, ಕೆ.ಬಿ. ಗುಡಿಹಾಳ, ರುದ್ರಪ್ಪ ಬಿಸರಳ್ಳಿ, ಶಂಕ್ರಪ್ಪ ನಡುವಿನಮನಿ, ಕೆ.ಬಿ. ಕಟ್ಟಿಮನಿ, ವಿನಾಯಕ ಭಟ್ಟ, ಮಹಾದೇವಿ ಬಡಿಗೇರ ಇದ್ದರು.