ಪಂಚಾಯ್ತಿ ಕಟ್ಟೆಗಳಾಗ್ತಿವೆ ಠಾಣೆ
ಹುಬ್ಬಳ್ಳಿ-ಧಾರವಾಡ ಅವಳಿ ನಗರದಲ್ಲಿರುವ ಬಹುತೇಕ ಪೊಲೀಸ್ ಠಾಣೆಗಳು ಪಂಚಾಯ್ತಿ ಕಟ್ಟೆಗಳಂತಾಗಿವೆ. ಆದರಿಲ್ಲ ಪಂಚಾಯ್ತಿ ಕಟ್ಟೆಯಲ್ಲಿ ಸಿಗುವಂತೆ ನ್ಯಾಯ ಸಿಗುವುದಿಲ್ಲ. ಬದಲಾಗಿ ಇಲ್ಲಿ ಅನ್ಯಾಯವೇ ನಡೆಯುತ್ತಿದೆ. ಆರೋಪಿಗಳಿಂದ ಹಣಕಿತ್ತು ಕಳಿಸುವುದು, ವ್ಯಾಜ್ಯ ಬಿಡಿಸುವ ನೆಪದಲ್ಲಿ ಡೀಲಿಂಗ್ ಮಾಡಲಾಗುತ್ತಿದೆ. ಹೀಗಾಗಿ ಸಭ್ಯರು ಅವಳಿ ನಗರದ ಪೊಲೀಸ್ ಠಾಣೆ ಮೆಟ್ಟಿಲೇರಲು ಹೆದರುವಂತಾಗಿದೆ.
ಕಳ್ಳತನ, ಮಟ್ಕಾ, ಜೂಜಾಟದಂತ ಪ್ರಕರಣದಲ್ಲಿ ಆರೋಪಿತರನ್ನು ಬಂಧಿಸಿ ಕಂಬಿ ಹಿಂದೆ ನೂಕುವುದು ಬಿಟ್ಟು ಅಂಥವರ ಜತೆ ವ್ಯವಹಾರ ಕುದುರಿಸಿ ಬಿಟ್ಟು ಕಳಿಸುವ ಬಗ್ಗೆ ಸಾಕಷ್ಟು ಆರೋಪಗಳು ಕೇಳಿಬರಲಾರಂಭಿಸಿವೆ. ಇಂಥ ವ್ಯವಹಾರದ ಕೆಲ ಉದಾಹರಣೆಗಳಿಲ್ಲಿವೆ.
ಘಟನೆ-1: ಇದು ಲೋಕಸಭೆ ಚುನಾವಣೆಯ ಕಾಲಕ್ಕೆ ನಡೆದ ಘಟನೆ. ಚುನಾವಣೆ ಎಂದ ಮೇಲೆ ಕೇಳಬೇಕೆ, ಬೇನಾಮಿ ಹಣ ವಹಿವಾಟು ನಡೆಯುತ್ತದೆ. ಲೋಕಸಭೆ ಚುನಾವಣೆಗೆ ಸ್ಪರ್ಧಿಸಿದ್ದ ಅಭ್ಯರ್ಥಿಯೊಬ್ಬರು ಎಲ್ಲಿಂದಲೋ ಸಾಲ ಮಾಡಿ ಚುನಾವಣೆಗೆ ಖರ್ಚು ಮಾಡಲು ಹಣ ತರಿಸಿಕೊಳ್ಳುತ್ತಿದ್ದರು. ಈ ವೇಳೆ ಪೊಲೀಸರಿಗೆ ಮಾಹಿತಿ ಸಿಕ್ಕು ದಾಳಿ ನಡೆಸಿದಾಗ, ಕಾರ್‌ನಲ್ಲಿ ಬರೋಬ್ಬರಿ ರು. 6 ಲಕ್ಷ ಸಿಕ್ಕಿತು. ಇನ್ನೇನು ಹಣ ಸಿಕ್ಕಿದ್ದೆ ತಡ ಕೇಸ್ ಮಾಡದೇ ಪೇದೆಗಳು ಹಾಗೂ ಇನ್ಸ್‌ಪೆಕ್ಟರ್‌ಗಳು ಹಣ ಬಾಚಿಕೊಂಡರು. ಈ ಸಂಗತಿ ವಿವಾದದ ಹಂತ ತಲುಪಿದಾಗ ಚುನಾವಣೆಗೆ ಸ್ಪರ್ಧಿಸಿದ್ದ ವ್ಯಕ್ತಿಗೆ ರು. 5 ಲಕ್ಷ ಕೊಟ್ಟು ಮಾಡಿದ್ದು ತಪ್ಪಾಯಿತು ಎಂದು ಕಾಲಿಗೆ ಬಿದ್ದು ಬಂದರು. ಈ ವಿಷಯ ಸಾರ್ವಜನಿಕ ಚರ್ಚೆಗೆ ಒಳಪಟ್ಟು ಪೊಲೀಸ್ ಇಲಾಖೆ ಮಾನ ಹರಾಜಾಗಿತ್ತು.
ಘಟನೆ-2: ಗಾಂಜಾ, ಆಫೀಮ್‌ನಂತಹ ಅಮಲು ಪದಾರ್ಥಗಳ ಬೆನ್ನುಹತ್ತಿ ಹದಿ ಹರೆಯದವರು ಬದುಕು ಹಾಳು ಮಾಡಿಕೊಳ್ಳುತ್ತಿದ್ದಾರೆ. ಇಂಥ ಪ್ರಕರಣದಲ್ಲಿ ಪೊಲೀಸ್ ಅಧಿಕಾರಿಗಳು ತಪ್ಪಿತಸ್ಥರನ್ನು ಯಾವುದೇ ಕಾರಣಕ್ಕೂ ಕ್ಷಮಿಸಬಾರದು. ಆದರಿಲ್ಲಿ ಪೊಲೀಸರೆ ಕಳ್ಳರಂತೆ ವರ್ತಿಸಿದ್ದು, ಅಕ್ಷಮ್ಯ ಅಪರಾಧ. ಕ್ವಿಂಟಲ್‌ಗಟ್ಟಲೆ ಗಾಂಜಾ ಹಿಡಿದು ಜನರ ಮುಂದೆ ಸಾಧನೆಗೈದವರಂತೆ ಫೋಸು ಕೊಟ್ಟಿದ್ದ ಪೊಲೀಸ್ ಅಧಿಕಾರಿಗಳು, ಹಿಂದಿನಿಂದ ವ್ಯವಹಾರ ಮಾಡಿಕೊಂಡಿದ್ದು ಯಾರಿಗೂ ಗೊತ್ತಾಗಲಿಲ್ಲ ಎಂದುಕೊಂಡಿದ್ದಾರೆ. ಈ ಪ್ರಕರಣದಲ್ಲಿ ಬಂಧಿತರ ಪೈಕಿ ಮೂವರು ನಾಪತ್ತೆಯಾಗಿದ್ದಾರೆಂದು ತೋರಿಸಿ ಬಿಟ್ಟು ಕಳುಹಿಸಲು ರು. 9 ಲಕ್ಷ ಡೀಲಿಂಗ್ ನಡೆದಿರುವುದು ಜಗಜ್ಜಾಹೀರಾಗಿದೆ.
ಘಟನೆ-3: ಕೇಶ್ವಾಪುರ ಸಮೀಪದ ಮನೆಯೊಂದರಲ್ಲಿ ಇಸ್ಪೀಟ್ ಆಡುತ್ತಿದ್ದ ವೇಳೆ ದಾಳಿ ನಡೆಯುತ್ತದೆ. ಈ ಸಂದರ್ಭ ಲಕ್ಷಾಂತರ ರುಪಾಯಿ ಸಿಗುತ್ತದೆಯಲ್ಲದೇ, 20 ಜನರನ್ನು ಪೊಲೀಸರು ಬಂಧಿಸುತ್ತಾರೆ. ಆದರೆ, ಅವರನ್ನು ಪೊಲೀಸ್ ಠಾಣೆಗೆ ಕರೆದೊಯ್ಯದೆ ನೇರವಾಗಿ ಲಾಡ್ಜ್‌ವೊಂದರಲ್ಲಿ ಕರೆದೊಯ್ದು ತಲಾ ರು. 1 ಲಕ್ಷ ಪಡೆದು ಬಿಟ್ಟು ಕಳುಹಿಸುತ್ತಾರೆ.
ಘಟನೆ-4: ಮಟಕಾ ದಂಧೆ ಯಾವುದೇ ಕಾರಣಕ್ಕೂ ನಡೆಯಕೂಡದು ಎಂದು ಮಹಾನಗರ ಪೊಲೀಸ್ ಆಯುಕ್ತ ರವೀಂದ್ರ ಪ್ರಸಾದ ಕಟ್ಟಾಜ್ಞೆ ಮಾಡಿದ್ದರು. ಸಾಲದ್ದಕ್ಕೆ ಯಾವುದೇ ದಂಧೆ ನಡೆದರೂ ಸಹಿಸುವುದಿಲ್ಲ ಎಂದು ಅಧಿಕಾರಿಗಳ ವಿರುದ್ಧ ಗುಡುಗಿದ್ದರು. ಆಯುಕ್ತರ ಆದೇಶವನ್ನೇ ಕೇಶ್ವಾಪುರ ಠಾಣೆಯ ಕ್ರೈಂ ಪಿಸಿ ದುರ್ಬಳಕೆ ಮಾಡಿಕೊಂಡ. ಮಟಕಾ ಆರೋಪಿಗಳನ್ನು ಠಾಣೆಗೆ ಕರೆತಂದಂತೆ ಮಾಡಿ ಬರೋಬ್ಬರಿ ರು. 80 ಸಾವಿರ ಪೀಕಿದ. ಆರೋಪಿ ವಿರುದ್ಧ ಕೇಸ್ ಹಾಕಲೇ ಇಲ್ಲ.
ಘಟನೆ-5: ಕೆಲ ದಿನಗಳ ಹಿಂದೆ ನಡೆದ ಘಟನೆ ಇದು. ಹುಬ್ಬಳ್ಳಿಯಿಂದ ಕಾಲ್ಕಿತ್ತಿದ್ದ ಹವಾಲಾ ಕಿಂಗ್‌ಪಿನ್ ಹುಬ್ಬಳ್ಳಿಗೆ ಪುನಃ ಎಂಟ್ರಿ ಕೊಟ್ಟಿದ್ದು ಭ್ರಷ್ಟ ಅಧಿಕಾರಿಗಳ ಪಾಲಿಗೆ ಸುಗ್ಗಿಕಾಲ ಬಂದಂತಾಗಿದೆ. ಈತನ ಅಳಿಯ ಕೆಲ ದಿನಗಳ ಹಿಂದೆ ವ್ಯಕ್ತಿಯೊಬ್ಬರ ಐ-ಫೋನ್ ಕದ್ದಿದ್ದ. ಈ ಕುರಿತು ಮೊಬೈಲ್ ಕಳೆದುಕೊಂಡಿದ್ದ ವ್ಯಕ್ತಿ ಶಹರ ಠಾಣೆಗೆ ಹೋದರೆ ಅಲ್ಲಿ ನಡೆದಿದ್ದೇ ಬೇರೆ. ಆ ಸಮಯಕ್ಕಾಗಲೇ ಹವಾಲಾ ಕಿಂಗ್‌ಪಿನ್ ಎಂಟ್ರಿಕೊಟ್ಟು ತನ್ನ ಅಳಿಯನನ್ನು ಬಿಡಿಸಲು ಮುಂದಾದ. " ಕೇಸ್ ದಾಖಲಾಗುವುದು ಗ್ಯಾರಂಟಿ ಏನೂ ಮಾಡಲಾಗದು" ಎನ್ನುವಂತೆ ಪೊಲೀಸರು ನಟಿಸಿದರು. ಬಳಿಕ ಕಿಂಗ್‌ಪಿನ್ ಬಳಿ ಡೀಲಿಂಗ್ ಮಾಡಿ, ಮೊಬೈಲ್ ಕಳೆದುಕೊಂಡವನಿಗೆ ಮೊಬೈಲ್ ಕೊಟ್ಟು ಪ್ರಕರಣಕ್ಕೆ ಎಳ್ಳುನೀರು ಬಿಟ್ಟರು.
ಘಟನೆ-6: ಶುಕ್ರವಾರ ರಾತ್ರಿ ನಡೆದ ಘಟನೆಯಿದು. ಹುಬ್ಬಳ್ಳಿಯ ತಂಡವೊಂದು ಜೂಜಾಟದಲ್ಲಿ ರು. 35 ಲಕ್ಷ ಗೆದ್ದು ವಾಪಾಸಾಗುತ್ತಿತ್ತು. ಹಳೆಹುಬ್ಬಳ್ಳಿ ಠಾಣೆ ಕೆಲ ಕಳ್ಳ ಪೊಲೀಸರು ದಾಳಿ ಮಾಡಿದವರಂತೆ ನಟಿಸಿ, ಆರೋಪಿತರಿಂದ ರು. 6 ಲಕ್ಷ ಕಿತ್ತು ಕೇಸ್ ರಪಾದಪಾ ಮಾಡಿದರು.
ಕೆಲವರು ಬಕಪಕ್ಷಿಗಳಂತೆ ಠಾಣೆಯಲ್ಲಿ ಕಾಯುತ್ತಾರೆ
ಪೊಲೀಸ್ ಠಾಣೆಯಲ್ಲಿ ಬಕಪಕ್ಷಿಗಳಂತೆ ಕೆಲವು ಪೊಲೀಸ್ ಕಾನಸ್ಟೇಬಲ್‌ಗಳು ಕಷ್ಟ ಎಂದು ಹೇಳಿಕೊಂಡು ಬಂದವರನ್ನು ಬಲಿ ಹಾಕಲು ಬಕಪಕ್ಷಿಗಳಂತೆ ಕಾಯುತ್ತಿರುತ್ತಾರೆ. ಎಲ್ಲ ಠಾಣೆಗಳಲ್ಲಿ ಇಂಥ ಭಕ್ಷಕ ಪಿಸಿಗಳಿದ್ದಾರೆ. ಮಪ್ತಿಯಲ್ಲಿರುವ ಇವರು ಹಣ ಮಾಡುವುದನ್ನೇ ಕಾಯಕ ಮಾಡಿಕೊಂಡಿದ್ದಾರೆ. ಹಣ ಸಿಗುತ್ತದೆ ಎಂದಾದರೆ, ದೂರು ಕೊಡಲು ಬಂದವನನ್ನೇ ಆರೋಪಿಯನ್ನಾಗಿ, ಆರೋಪಿಯನ್ನು ನಿರಪರಾಧಿಯನ್ನಾಗಿ ಮಾಡುವ ಕಳ್ಳಬುದ್ಧಿಯವರಿವರು. ಇಂಥವರಿಂದಲೇ ಪೊಲೀಸ್ ಇಲಾಖೆಗೆ ಕಳಂಕ ಬರುತ್ತಿದೆ.