ಮಹಾರಾಷ್ಟ್ರ ಬ್ಯಾಂಕ್‌ಗೆ ಕಲ್ಲು: ಕರವೇ ಕಾರ್ಯಕರ್ತರ ಬಂಧನ
ಧಾರವಾಡ: ಕೊಲ್ಲಾಪುರದಲ್ಲಿ ಕರ್ನಾಟಕದ ಸಾರಿಗೆ ಸಂಸ್ಥೆ ಬಸ್ಸುಗಳ ಮೇಲೆ ನಡೆದ ಆಕ್ರಮಣ ಖಂಡಿಸಿ ಇಲ್ಲಿನ ಮಹಾರಾಷ್ಟ್ರ ಬ್ಯಾಂಕ್‌ಗೆ ಕಲ್ಲು ಹೊಡೆದ ಕಾರಣ ಕರ್ನಾಟಕ ರಕ್ಷಣಾ ವೇದಿಕೆ ಕಾರ್ಯಕರ್ತರನ್ನು ಬಂಧಿಸಿದ್ದಲ್ಲದೇ ಲಘು ಲಾಠಿ ಪ್ರಹಾರ ಮಾಡಿದ ಘಟನೆ ಶನಿವಾರ ಸಂಜೆ ನಡೆದಿದೆ. ಇಲ್ಲಿನ ರೀಗಲ್ ವೃತ್ತದ ಬಳಿಯಿರುವ ಮಹಾರಾಷ್ಟ್ರ ಬ್ಯಾಂಕ್‌ಗೆ ಕಲ್ಲು ಹೊಡೆದು ಮುತ್ತಿಗೆ ಹಾಕಬೇಕು ಎನ್ನುವಷ್ಟರಲ್ಲಿ ರೆಹಮಾನ್ ಹೋಳಿ, ಕುಮಾರ ಪಾಟೀಲ, ಪರಮೇಶ ರೇವಡಿಹಾಳ ಮತ್ತಿತರರನ್ನು ಶಹರ ಹಾಗೂ ಉಪನಗರ ಠಾಣೆ ಪೊಲೀಸರು ಬಂಧಿಸಿದರು. ಅಲ್ಲದೇ, ಟೋಲ್‌ನಾಕಾದ ಹತ್ತಿರವಿರುವ ಮಹಾರಾಷ್ಟ್ರ ಬ್ಯಾಂಕ್‌ನ ಇನ್ನೊಂದು ಶಾಖೆಯ ಹತ್ತಿರ ಮತ್ತೆ ಜಮಾಯಿಸಿದ್ದ ಕರವೇ ಕಾರ್ಯಕರ್ತರನ್ನು ವಿದ್ಯಾಗಿರಿ ಠಾಣೆ ಪೊಲೀಸರು ಚದುರಿಸಲು ಲಘುಲಾಠಿ ಪ್ರಹಾರ ಮಾಡಿದರು. ಕರವೇ ಕಾರ್ಯಕರ್ತರನ್ನು ಬಂಧಿಸಿದ್ದು ಹಾಗೂ ಲಾಠಿ ಪ್ರಹಾರ ಮಾಡಿರುವುದನ್ನು ಕರವೇ ಮುಖಂಡರು ಖಂಡಿಸಿದ್ದಾರೆ.