ಕಿರ್ಲೋಸ್ಕರ್ ಕಾರ್ಮಿಕರು ಕೆಲಸಕ್ಕೆ ಹಾಜರ್!
ಕನ್ನಡಪ್ರಭ ವಾರ್ತೆ, ಹುಬ್ಬಳ್ಳಿ, ಜು. 29
ಗೋಕುಲ ರಸ್ತೆಯಲ್ಲಿರುವ ಕಿರ್ಲೋಸ್ಕರ್ ಇಲೆಕ್ಟ್ರಿಕಲ್ ಕಂಪನಿ ಹಾಗೂ ಆಡಳಿತ ಮಂಡಳಿ ನಡುವಿನ ಹಗ್ಗಜಗ್ಗಾಟ ಸುಖಾಂತ್ಯ ಕಂಡಿದೆ. ನ್ಯಾಯಾಲಯದ ಆಜ್ಞೆಯಿಂದ ಈ ಬಿಕ್ಕಟ್ಟು ಪರಿಹಾರವಾಗಿದ್ದು, ಮಂಗಳವಾರದಿಂದ ಕಾರ್ಮಿಕರು ಹಾಗೂ ನೌಕರರು ಕೆಲಸಕ್ಕೆ ಹಾಜರಾಗಿದ್ದಾರೆ.
ಕಿರ್ಲೋಸ್ಕರ್ ಆಡಳಿತ ಮಂಡಳಿ ವೇತನ ಪರಿಷ್ಕರಣೆ ಸೇರಿದಂತೆ ಇನ್ನಿತರ ಸೌಲಭ್ಯ ನೀಡುವಲ್ಲಿ ತಾರತಮ್ಯ ನೀತಿ ಅನುಸರಿಸುತ್ತಿದೆ ಎಂದು ಕಾರ್ಮಿಕರು ಹಾಗೂ ನೌಕರರು ಆಡಳಿತ ಮಂಡಳಿಯ ವಿರುದ್ಧ ಜುಲೈ 8ರಂದು ಹೋರಾಟ ಆರಂಭಿಸಿದ್ದರು. ಇದಕ್ಕೂ ಪೂರ್ವದಲ್ಲಿ ಕಾರ್ಮಿಕರ ಬೇಡಿಕೆ ಈಡೇರಿಸಲಾಗದೆ ಆಡಳಿತ ಮಂಡಳಿ ಇದ್ದಕ್ಕಿದ್ದ ಹಾಗೆ ಯಾವುದೇ ನೋಟಿಸ್ ಜಾರಿ ಮಾಡದೆ ಕಂಪನಿ ಬಂದ್ ಮಾಡಿ ಕಾರ್ಮಿಕರನ್ನು ಹಾಗೂ ನೌಕರರನ್ನು ಹೊರಹಾಕಿತ್ತು. ಈ ಕುರಿತು ಆಡಳಿತ ಮಂಡಳಿ ಹಾಗೂ ಕಾರ್ಮಿಕರ ಮಧ್ಯೆ ಸಾಕಷ್ಟು ತಿಕ್ಕಾಟ ನಡೆದಿತ್ತು. ಅಲ್ಲದೇ, ಕಾರ್ಮಿಕ ಇಲಾಖೆಯ ನೇತೃತ್ವದಲ್ಲಿ ಆಡಳಿತ ಮಂಡಳಿ ಹಾಗೂ ಕಾರ್ಮಿಕ ಸಂಘಟನೆ ಮಧ್ಯೆ ಸಂಧಾನ ಸಭೆ ಕೂಡ ನಡೆದಿತ್ತು. ಇದಾದ ಬಳಿಕ ಜಿಲ್ಲಾ ಉಸ್ತುವಾರಿ ಸಚಿವ ದಿನೇಶ ಗುಂಡೂರಾವ್, ಮಾಜಿ ಸಿಎಂ ಜಗದೀಶ ಶೆಟ್ಟರ್ ಸಹ ಆಡಳಿತ ಮಂಡಳಿ ಹಾಗೂ ಕಾರ್ಮಿಕರ ಮಧ್ಯೆ ಸಂಧಾನಕ್ಕೆ ಪ್ರಯತ್ನಿಸಿ ವಿಫಲರಾಗಿದ್ದರು.
ಏತನ್ಮಧ್ಯೆ ಕಂಪನಿಯ ಆಡಳಿತ ಮಂಡಳಿ, ಹುಬ್ಬಳ್ಳಿಯ ಜೆಎಂಎಫ್ಸಿ ಕೋರ್ಟ್ ಮೊರೆ ಹೋಗಿ ತನ್ನ ಆಸ್ತಿ ಉಳಿಸಿಕೊಳ್ಳಲು ಇಂಜೆಕ್ಷನ್ ಆದೇಶ ತಂದಿತ್ತು. ಆದರೀಗ ಈ ಪ್ರಕರಣ ಸುಖಾಂತ್ಯ ಕಂಡಿದೆ. ಕಾರ್ಮಿಕರನ್ನು ಕೆಲಸಕ್ಕೆ ಸೇರಿಸಿಕೊಳ್ಳಬೇಕೆಂದು ಕೋರ್ಟ್ ಸೂಚಿಸಿದೆ. ಆದರೆ, ವೇತನ ಪರಿಷ್ಕರಣೆಯ ಪ್ರಕರಣ ಮಾತ್ರ ಪೂರ್ಣ ಪ್ರಮಾಣದಲ್ಲಿ ಬಗೆಹರಿದಿಲ್ಲ. ಈ ಕುರಿತು ಕಾರ್ಮಿಕ ಇಲಾಖೆಯ ಆಯುಕ್ತ ಕಚೇರಿಯಲ್ಲಿಯೇ ವಿಚಾರಣೆಯ ಹಂತದಲ್ಲಿದೆ.
ಆಡಳಿತ ಮಂಡಳಿ ಕಾರ್ಮಿಕರಿಗೆ ರು. 1,250 ವೇತನ ಪರಿಷ್ಕರಣೆಗೆ ಮುಂದಾಗಿತ್ತು. ಆದರೆ, ಕಾರ್ಮಿಕರು ರು. 2600 ವೇತನ ಹೆಚ್ಚಿಸಬೇಕೆಂದು ಪಟ್ಟು ಹಿಡಿದಿದ್ದಾರೆ. ಜತೆಗೆ ಸುರಕ್ಷತಾ ಸಲಕರಣೆ ಸೇರಿದಂತೆ ಅಗತ್ಯ ಸೌಲಭ್ಯಕ್ಕಾಗಿ ಆಗ್ರಹಿಸಿದ್ದಾರೆ. ಈಗಲೂ ಕಂಪನಿ ಕಾರ್ಮಿಕರ ಬೇಡಿಕೆಗೆ ಒಪ್ಪಿಗೆ ಸೂಚಿಸಿಲ್ಲ. ಆದರೆ, ಬೇಡಿಕೆ ಈಡೇರಿಸುವುದಾಗಿ ಹೇಳಿ ಕಾರ್ಮಿಕರನ್ನು ಕೆಲಸಕ್ಕೆ ಸೇರಿಸಿಕೊಂಡಿದೆ. ಜತೆಗೆ ಇಷ್ಟರಲ್ಲಿಯೇ ಅಂತಿಮ ನಿರ್ಣಯಕ್ಕೆ ಸಭೆ ನಡೆಸುವುದಾಗಿ ಹೇಳಿದೆ.
ಈ ಕುರಿತು ಕನ್ನಡಪ್ರಭದೊಂದಿಗೆ ಮಾತನಾಡಿದ ಕಾರ್ಮಿಕ ಸಂಘಟನೆ ಕಾರ್ಯದರ್ಶಿ ಸಿ.ಎಸ್. ಪೌಲ್, ಕಾರ್ಮಿಕ ಸಂಘಟನೆಯ ಅಧ್ಯಕ್ಷ ಕೆ.ಎಂ. ಸುಬ್ರಮಣಿ ಈಗಾಗಲೇ ಆಡಳಿತ ಮಂಡಳಿಯ ಚೇರ್ಮನ್ ವಿಜಯ ಕಿರ್ಲೋಸ್ಕರ್ ಅವರೊಂದಿಗೆ ಮಾತುಕತೆ ನಡೆಸಿದ್ದಾರೆ. ಬೆಂಗಳೂರಿನಲ್ಲಿ ಕಾರ್ಮಿಕರಿಗೆ ನೀಡಿರುವಂತೆ ರು. 2600 ವೇತನ ಹೆಚ್ಚಿಸಬೇಕೆಂಬುದು ತಮ್ಮ ಬೇಡಿಕೆ. ನಾವು ಹೋರಾಟಕ್ಕೆ ಹೋದ ದಿನವನ್ನೂ ಸೇರಿದಂತೆ ವೇತನ ನೀಡಬೇಕು. ಇದು ಕಂಪನಿ ತಪ್ಪಿನಿಂದಾದ ಸಮಸ್ಯೆ. ಸದ್ಯಕ್ಕೆ ನಾವು ಕೆಲಸಕ್ಕೆ ಹಾಜರಾಗುತ್ತಿದ್ದೇವೆ. ಬೇಡಿಕೆ ಈಡೇರದಿದ್ದರೆ ಮತ್ತೆ ಹೋರಾಟಕ್ಕೆ ಇಳಿಯಲಿದ್ದೇವೆಂದು ಹೇಳಿದರು.
ಪ್ರಸ್ತುತ ಈ ಸಮಸ್ಯೆ ಪರಿಹಾರವಾಗಿ ಮಂಗಳವಾರದಿಂದ ಕಾರ್ಮಿಕರು ಕೆಲಸಕ್ಕೆ ಹಾಜರಾಗಿದ್ದರೂ ಬಿಕ್ಕಟ್ಟು ಮಾತ್ರ ಪೂರ್ಣ ಪರಿಹಾರವಾಗಿಲ್ಲ.