ತಾಲೂಕಿಗೊಂದು ಕೌಶಲ್ಯಾಭಿವೃದ್ಧಿ ಕೇಂದ್ರ
ಹುಬ್ಬಳ್ಳಿ: ಭಾರತೀಯ ಸಂವಿಧಾನದಲ್ಲಿ ಮಹಿಳೆಯರಿಗೆ, ಮಕ್ಕಳಿಗೆ ಪ್ರತ್ಯೇಕ ಮಸೂದೆಗಳಿವೆ. ಆದರೆ ಯುವಕರಿಗಾಗಿ ಯಾವುದೇ ಪ್ರತ್ಯೇಕ ಮಸೂದೆಯಿಲ್ಲ. ತಾವು ಪರಿಷತ್ ಸದಸ್ಯರಾಗಿ ಆಯ್ಕೆಯಾದಲ್ಲಿ ಯುವಕರಿಗಾಗಿ ಪ್ರತ್ಯೇಕ ಮಸೂದೆ ರಚಿಸಲು ಪ್ರಯತ್ನಿಸುವುದಾಗಿ ವಿಧಾನ ಪರಿಷತ್ ಪಶ್ಚಿಮ ಪದವೀಧರ ಮತ ಕ್ಷೇತ್ರದ ಜೆಡಿಎಸ್ ಅಭ್ಯರ್ಥಿ ವಸಂತ ಹೊರಟ್ಟಿ ಹೇಳಿದರು.
ನಗರದಲ್ಲಿ ಭಾನುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಎಲ್ಲ ಸರ್ಕಾರಗಳು ಯುವಕರಿಗೆ ಪ್ರಾತಿನಿಧ್ಯ ನೀಡುವುದಾಗಿ ಹೇಳುತ್ತಿದ್ದರೂ ಈ ಬಗ್ಗೆ ಗಂಭೀರ ಚಿಂತನೆ ನಡೆಸಿಲ್ಲ, ಪ್ರಾಮಾಣಿಕ ಪ್ರಯತ್ನ ಮಾಡಿಲ್ಲ. ತಾವು ಹೊಸ ಮಸೂದೆ ಮೂಲಕ ತಾಲೂಕಿಗೊಂದು ಕೌಶಲ್ಯಾಭಿವೃದ್ಧಿ ಕೇಂದ್ರ ತೆರೆಯುವ ಬಗ್ಗೆ ತಾವು ಚಿಂತಿಸಿದ್ದು, ಈ ಕೇಂದ್ರಗಳ ಮುಖಾಂತರ ಯುವಕರಿಗೆ ಶೈಕ್ಷಣಿಕ, ಔದ್ಯೋಗಿಕ ಮಾಹಿತಿ ನೀಡಲಾಗುವುದು. ಉದ್ಯಮಕ್ಕೆ ಹಾಗೂ ಶಿಕ್ಷಣಕ್ಕೆ ಸಾಲ ವಿತರಿಸುವ ವ್ಯವಸ್ಥೆ ಕಲ್ಪಿಸಲಾಗುವುದು. ಐಎಎಸ್, ಐಪಿಎಸ್, ಸಿಎಗಳಂತಹ ಕೋಚಿಂಗ್ ನೀಡಲಾಗುವುದು ಎಂದರು.
ಹುಬ್ಬಳ್ಳಿ-ಧಾರವಾಡ ಐಟಿ ಸೆಂಟರ್ ಆಗಿ ಪರಿವರ್ತಿಸಲಾಗುವುದು ಎಂದು ಅಧಿಕಾರಸ್ಥರು ಹೇಳಿದ್ದರೂ, ಈ ನಿಟ್ಟಿನಲ್ಲೂ ಪ್ರಯತ್ನ ಮಾಡಿಲ್ಲ. ಈ ಭಾಗಕ್ಕೆ ಐಟಿ ಸಂಸ್ಥೆಗಳು ಬಂದಿದ್ದೇ ಆದಲ್ಲಿ ವಿಪುಲ ಉದ್ಯೋಗಾವಕಾಶಗಳು ಸೃಷ್ಟಿಯಾಗಲಿವೆ. ಈ ಭಾಗದ ವಿದ್ಯಾರ್ಥಿಗಳು ಓದಿನಲ್ಲಿ ಮುಂದಿದ್ದರೂ ಕಾರ್ಪೊರೇಟ್ ಜಗತ್ತಿಗೆ ಬೇಕಾದ ಕೌಶಲ್ಯ ಅವರಲ್ಲಿಲ್ಲ. ವ್ಯಕ್ತಿತ್ವ ವಿಕಸನ ತರಬೇತಿ ಕೇಂದ್ರ ಆರಂಭಿಸಲೂ ತಾವು ಪ್ರಯತ್ನ ಮಾಡುವುದಾಗಿ ವಸಂತ ಹೊರಟ್ಟಿ ಭರವಸೆ ನೀಡಿದರು.
ಒಂಬತ್ತು ತಿಂಗಳಿನಿಂದ ಚುನಾವಣೆ ಹಿನ್ನೆಲೆಯಲ್ಲಿ ಕೆಲಸ ಮಾಡುತ್ತಿದ್ದೇವೆ. ಶೈಕ್ಷಣಿಕ ಕ್ಷೇತ್ರದ, ಪದವೀಧರರ ಸಮಸ್ಯೆಗಳನ್ನು ಪರಿಹರಿಸುವೆ. ರಾಣಿ ಚೆನ್ನಮ್ಮ ವಿವಿಯಲ್ಲಿ ನಡೆಯುತ್ತಿದ್ದ ಭ್ರಷ್ಟಾಚಾರದ ವಿರುದ್ಧ ಹೋರಾಟ ನಡೆಸಿದ್ದೇನೆ. ಮುಂದೆಯೂ ಭ್ರಷ್ಟಾಚಾರ ವಿರುದ್ಧ ದನಿ ಎತ್ತುವೆ ಎಂದರು.
ಮಾಜಿ ಸಚಿವ ಬಸವರಾಜ ಹೊರಟ್ಟಿ ಮಾತನಾಡಿ, ಕೇಂದ್ರದಲ್ಲಿ ಬಿಜೆಪಿ ಅಧಿಕಾರಕ್ಕೆ ಬಂದಿದ್ದು ಮೋದಿ ಅಲೆಯಿಂದಲೇ ವಿನಃ ಬಿಜೆಪಿಯ ಸ್ವಂತ ಶಕ್ತಿಯಿಂದಲ್ಲ. ಈ ಕ್ಷೇತ್ರದಲ್ಲಿ ಮೋದಿ ಅಲೆ ಇಲ್ಲ, ವಸಂತ ಹೊರಟ್ಟಿ ಪರ ಗಾಳಿ ಇದೆ. ವಸಂತ್ ಗೆಲುವು ನಿಶ್ಚಿತ. ಆದರೂ ಗಂಭೀರ ಪ್ರಯತ್ನ ನಡೆಸಿದ್ದೇವೆ ಎಂದರು. ಶಾಸಕ ಎನ್.ಎಚ್. ಕೋನರಡ್ಡಿ, ರಾಜಣ್ಣ ಕೊರವಿ, ಜಗದೀಶ ದ್ಯಾವಪ್ಪನವರ, ಸಂತೋಷ ಹಿರೇಕೆರೂರ ಗೋಷ್ಠಿಯಲ್ಲಿದ್ದರು.