ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಧಾರವಾಡ

ಅಧಿಕಾರಿ-ತಾಪಂ ಸದಸ್ಯನ ಮಧ್ಯೆ ವಾಗ್ವಾದ

Mainashree
Updated On : 3 Jun 2014, 11:11 am

ಧಾರವಾಡ: ಅನಿರೀಕ್ಷಿತವಾಗಿ ಅಪಘಾತಕ್ಕೊಳಗಾಗಿ ಹಲವು ದಿನಕಾಲ ವೈದ್ಯಕೀಯ ರಜೆಯ ಮೇಲೆ ತೆರಳಿ ಮೇ 30ರಿಂದ ಲಿಖಿತ ಆದೇಶವಿಲ್ಲದೇ ಕರ್ತವ್ಯಕ್ಕೆ ಹಾಜರಾದ ಇಲ್ಲಿಯ ತಾಲೂಕು ಪಂಚಾಯ್ತಿ ಕಾರ್ಯನಿರ್ವಹಣಾಧಿಕಾರಿ ಬಸವರಾಜ ಗಂಗಾಧರ ಅವರಿಗೆ ತಾಪಂ ಸದಸ್ಯ ಯೋಗೀಶಗೌಡ ಗೌಡರ ಅವರು ಆದೇಶದೊಂದಿಗೆ ಬಂದು ಸೇವೆಗೆ ಹಾಜರಾಗಿ ಎಂದು ಒತ್ತಾಯಿಸಿದ ಘಟನೆ ಸೋಮವಾರ ಜರುಗಿದೆ.
ನಾಲ್ಕು ತಿಂಗಳ ಹಿಂದೆ ರಸ್ತೆ ಅಪಘಾತದಲ್ಲಿ ತೀವ್ರವಾಗಿ ಗಾಯಗೊಂಡು, ಎಡಗೈ ಕಳೆದುಕೊಂಡು ಸದ್ಯ ಗುಣಮುಖರಾಗಿ ತಮ್ಮ ಸೇವೆಗೆ ಹಾಜರಾಗಿ ಕರ್ತವ್ಯ ನಿರ್ವಹಿಸುತ್ತಿರುವಾಗ, ಅವರ ಸೇವೆಯ ಆದೇಶ ಪತ್ರವನ್ನು ತಾಪಂ ಸದಸ್ಯ ಯೋಗೀಶಗೌಡ ಗೌಡರ ಕೇಳಿದ್ದಾರೆ. ಆಗ ಅಧಿಕಾರಿಯ ಹಾಗೂ ಸದಸ್ಯರ ಮಧ್ಯೆ ಮಾತಿನ ಚಕಮಕಿ ನಡೆದಿದೆ. ಕರ್ತವ್ಯ ನಿರ್ವಹಿಸಲು ದೈಹಿಕವಾಗಿ ನಾನು ಸಮರ್ಥನಾಗಿದ್ದೇನೆಂದು ವೈದ್ಯರು ಪ್ರಮಾಣಪತ್ರ ನೀಡಿದ್ದಾರೆ. ಕಾರಣ ನಾನು ಮರಳಿ ಕರ್ತವ್ಯಕ್ಕೆ ಹಾಜರಾಗಲು ಯಾವುದೇ ಆದೇಶ ಬೇಕಿಲ್ಲ. ಮೇಲಧಿಕಾರಿಗಳಿಗೆ ತಿಳಿಸಿ, ವೈದ್ಯಕೀಯ ಪ್ರಮಾಣಪತ್ರ ಹಾಜರುಪಡಿಸಿ, ಕರ್ತವ್ಯಕ್ಕೆ ಹಾಜರಾಗಿದ್ದೇನೆ ಎಂದು ಗಂಗಾಧರ ಸ್ಪಷ್ಟಪಡಿಸಿದರು.
ಆದರೆ, ತಾಪಂ ಸದಸ್ಯ, ವೈದ್ಯಕೀಯ ರಜೆ ಮೇಲಿದ್ದ ಬಸವರಾಜ ಗಂಗಾಧರ ಅವರು ಲಿಖಿತ ಆದೇಶವಿಲ್ಲದೇ ಮೇ 30ರಿಂದ ಕರ್ತವ್ಯಕ್ಕೆ ಹಾಜರಾಗಿರುವುದಕ್ಕೆ ನಮ್ಮ ಆಕ್ಷೇಪವಿದೆ ಎಂದರು.  ನಾಲ್ಕು ತಿಂಗಳ ರಜೆ ಮೇಲೆ ತೆರಳಿದ್ದ ಗಂಗಾಧರ ಅವರ ಸ್ಥಾನಕ್ಕೆ ಜಿಪಂ ಎಂಜಿನಿಯರ್ ಎಸ್.ಕೆ.  ಗೌಡರ ಅವರನ್ನು ತಾತ್ಕಾಲಿಕವಾಗಿ ನೇಮಕ ಮಾಡಲಾಗಿತ್ತು. ಅವರಿಗೂ ಈ ಸ್ಥಾನ ತೆರವುಗೊಳಿಸುವಂತೆ ಆದೇಶ ಇದುವರೆಗೂ ಮೇಲಧಿಕಾರಿಗಳಿಂದ ಬಂದಿಲ್ಲ. ಹೀಗಿದ್ದಾಗ ನಾವು ಯಾರನ್ನು ತಾಪಂ ಕಾರ್ಯನಿರ್ವಹಣಾಧಿಕಾರಿ ಎಂದು ತಿಳಿಯಬೇಕು ಎಂದು ಪ್ರಶ್ನಿಸಿದರು.
ಬಸವರಾಜ ಗಂಗಾಧರ ನಾನು ಶಾಸಕರಿಗೂ ಹೇಳಿದ್ದೇನೆ ಎಂದಾಗ, ಕೋಪಗೊಂಡ ತಾಪಂ ಸದಸ್ಯ ಇಲ್ಲಿ ನೀವು ನಮ್ಮ ಮಾತು ಕೇಳಬೇಕು ಶಾಸಕರದ್ದಲ್ಲ. ಶಾಸಕರು ಅವರ ವ್ಯಾಪ್ತಿಯಲ್ಲಿ ಮಾತ್ರ ಕೆಲಸ ಮಾಡಲಿ, ಎಲ್ಲ ವಿಷಯದಲ್ಲಿ ಮೂಗು ತೂರಿಸುವುದನ್ನು ನಿಲ್ಲಿಸಲಿ ಎಂದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement