ಖಾತೆ ಬದಲಾವಣೆ: ಇಬ್ಬರು ಅಧಿಕಾರಿಗಳ ಸೆರೆ
ಧಾರವಾಡ: ಸಾರ್ವಜನಿಕ ಆಸ್ತಿಯನ್ನು ಖಾಸಗಿ ವ್ಯಕ್ತಿಗೆ ಖಾತೆ ಬದಲಾವಣೆಗೆ ಸಹಾಯ ಮಾಡಿದ ಆರೋಪ ಮೇಲ್ನೋಟಕ್ಕೆ ಸಾಬೀತಾದ ಕಾರಣ ಇಬ್ಬರು ಸರ್ಕಾರಿ ಅಧಿಕಾರಿಗಳನ್ನು ಬಂಧಿಸಿ ನ್ಯಾಯಾಲಯಕ್ಕೆ ಒಪ್ಪಿಸಲಾಗಿದೆ.
ಹು-ಧಾ ಮಹಾನಗರ ಪಾಲಿಕೆಯ ಹಿಂದಿನ ಡಿಡಿಟಿಪಿ, ಪ್ರಸ್ತುತ ಮಾಗಡಿ ಯೋಜನಾ ಪ್ರಾಧಿಕಾರ ನಿರ್ದೇಶಕ ಎಲ್.ಎಸ್. ಪವಾರ ಹಾಗೂ ಪಾಲಿಕೆಯ ಈ ಹಿಂದಿನ ಡಿಡಿಟಿಪಿ ಜೆ.ಕೆ. ಗಂಜಿಗಟ್ಟಿ ಇತರರು ತಮ್ಮ ಕರ್ತವ್ಯದಲ್ಲಿ ನಿರ್ಲಕ್ಷ್ಯತನ ತೋರಿದ್ದು ಸಾಬೀತಾಗಿದೆ.
ಆ ಹಿನ್ನೆಲೆಯಲ್ಲಿ ಲೋಕಾಯುಕ್ತ ಉಪಾಧೀಕ್ಷಕ ಉಮೇಶ ಶಿವಳ್ಳಿ ಏ. 29ರಂದು ಪ್ರಕರಣ ದಾಖಲಿಸಿದ್ದರು. ಈ ಇಬ್ಬರು ಆರೋಪಿಗಳನ್ನು ಸದ್ಯ ನ್ಯಾಯಾಲಯ ವಶಕ್ಕೊಪ್ಪಿಸಿದೆ ಎಂದು ಲೋಕಾಯುಕ್ತ ಅಧೀಕ್ಷಕರು ಪತ್ರಿಕೆಗೆ ತಿಳಿಸಿದ್ದಾರೆ.
ಏನಿದು ಪ್ರಕರಣ?: ಹುಡಾದಿಂದ ಹುಬ್ಬಳ್ಳಿಯ ಉಣಕಲ್ ಗ್ರಾಮದ ಸರ್ವೆ ನಂ. 55/4ಎ, 55/9ಎ, 560ರಲ್ಲಿ ರಾಜೀವ್ ಗೃಹ ನಿರ್ಮಾಣ ಸಹಕಾರ ಸಂಘಕ್ಕೆ ಲೇಔಟ್ ನಿರ್ಮಾಣಕ್ಕೆ ಮಂಜೂರಾತಿ ದೊರೆತಿತ್ತು. ಆರೋಪಿತ ಅಧಿಕಾರಿಗಳು ಖಾಸಗಿ ವ್ಯಕ್ತಿಯ ಹೆಸರಿಗೆ ಈ ಎರಡೂ ಖಾತೆಗಳನ್ನು ಬದಲಾಯಿಸಿದ್ದರು. ಈ ನಿವೇಶನದಲ್ಲಿ ಕಟ್ಟಡ ಕಟ್ಟಲು ಪರವಾನಗಿಯನ್ನೂ ನೀಡಿದ್ದರು.