ಹಳೆ ಬಸ್ ನಿಲ್ದಾಣಕ್ಕೆ ಹೊಸ ಕಳೆ
ಕನ್ನಡಪ್ರಭ ವಾರ್ತೆ, ಧಾರವಾಡ, ಜೂ. 9
ಹೌದು. ಇನ್ನು, ಹದಿನೈದು ತಿಂಗಳೊಳಗೆ ಇಲ್ಲಿಯ ಹಳೆಯ ಕೇಂದ್ರೀಯ ಬಸ್ ನಿಲ್ದಾಣಕ್ಕೆ ಹೊಸ ಕಳೆ ಬರಲಿದೆ.
ಕಳೆದ ಜೂ. 4ರಂದು ಈ ಬಸ್ ನಿಲ್ದಾಣವನ್ನು ಸ್ಥಳಾಂತರಿಸಿದ್ದು, ಇದೀಗ ಕಟ್ಟಡ ನೆಲಸಮ ಕಾಮಗಾರಿ ಶುರುವಾಗಿದೆ. ಹು-ಧಾ ಮಧ್ಯೆ ತ್ವರಿತ ಬಸ್ ಸಂಚಾರ (ಬಿಆರ್ಟಿಎಸ್) ಯೋಜನೆಗೆ ಪೂರಕವಾಗಿ ಪ್ರಸ್ತುತ ಹಳೆಯ ಬಸ್ ನಿಲ್ದಾಣವನ್ನು ತೆರವುಗೊಳಿಸಿ ರು. 14.87 ಕೋಟಿ ವೆಚ್ಚದಲ್ಲಿ ನೂತನ ಬಸ್ ನಿಲ್ದಾಣ ರೂಪಿಸಲು ಸಿದ್ಧತೆ ನಡೆದಿದೆ. ಈ ಮೂಲಕ ಧಾರವಾಡದ ಗ್ರಾಮೀಣ ಹಾಗೂ ದೂರದ ಊರುಗಳಿಗೆ ಹೋಗುವ ಪ್ರಯಾಣಿಕರಿಗೆ ತೀವ್ರ ಕಿರಿಕಿರಿಯಾಗಿದ್ದ ಹಳೆ ಬಸ್ ನಿಲ್ದಾಣಕ್ಕೆ ಹೊಸ ಟಚ್ ದೊರೆಯುವುದು ಖಾತ್ರಿಯಾಗಿದೆ.
ಏನೇನು ಸೌಲಭ್ಯಗಳು: ಪ್ರಯಾಣಿಕರ ಹಿತದೃಷ್ಟಿಯಿಂದ ಬಿಆರ್ಟಿಎಸ್ ಯೋಜನೆ ಪೂರಕವಾಗಿ ನೂತನ ಬಸ್ ನಿಲ್ದಾಣ ಕಾಮಗಾರಿ ಕಾರ್ಯ ಆರಂಭವಾಗಿದೆ. ಬೆಂಗಳೂರಿನ ಮೆಜೆಸ್ಟಿಕ್ ಮಾದರಿಯ ನಿಲ್ದಾಣ ಇದಾಗಲಿದ್ದು, ಸುತ್ತುವರೆದ 18 ಪ್ಲಾಟ ಪಾರ್ಮ್ ನಿರ್ಮಿಸಲಾಗುವುದು. ಇದರಿಂದ ಬಸ್ಸುಗಳ ಬಂದ ಮಾರ್ಗದಲ್ಲಿ ನಿಂತು ಪ್ರಯಾಣಿಕರನ್ನು ಹತ್ತಿಸಿಕೊಂಡು ಅದೇ ಮಾರ್ಗದಲ್ಲಿ ಚಲಿಸುತ್ತವೆ. ಅಲ್ಲದೇ, ಏಕಕಾಲಕ್ಕೆ ಎರಡು ಪ್ರವೇಶಗಳ ಮೂಲಕ ಬಸ್ಸುಗಳ ನಿಲ್ದಾಣದ ಒಳಗೆ ಬರುವಂತೆ ಹಾಗೂ ಇನ್ನೆರೆಡು ಮಾರ್ಗಗಳ ಮೂಲಕ ಹೊರ ಹೋಗುವಂತೆ ಯೋಜನೆ ಹಾಕಲಾಗಿದ್ದು, ಇದರಿಂದ ಈ ಮುಂಚಿನ ನಿಲ್ದಾಣದಲ್ಲಾಗುತ್ತಿದ್ದ ಟ್ರಾಫಿಕ್ ಸಮಸ್ಯೆ ಬರೋದಿಲ್ಲ ಎಂದು ನೂತನ ಬಸ್ ನಿಲ್ದಾಣ ಕುರಿತು ಬಿಆರ್ಟಿಎಸ್ ಉಪ ಪ್ರಧಾನ ವ್ಯವಸ್ಥಾಪಕ ಬಸವರಾಜ ಕೇರಿ 'ಕನ್ನಡಪ್ರಭ' ಕ್ಕೆ ಮಾಹಿತಿ ನೀಡಿದರು.
ಒಟ್ಟು 5029 ಚದರ ಮೀಟರ್ ಪ್ರದೇಶದಲ್ಲಿ ಬಸ್ ನಿಲ್ದಾಣ ನಿರ್ಮಾಣವಾಗಲಿದ್ದು, ಔರಂಗಾಬಾದಿನ ಶ್ರೀಹರಿ ಅಸೋಸಿಯೇಟ್ಸ್ ಕಂಪನಿಗೆ ಗುತ್ತಿಗೆ ನೀಡಲಾಗಿದೆ. ಬಸ್ ನಿಲ್ದಾಣದಲ್ಲಿ ಸುವ್ಯವಸ್ಥಿತ 18 ಪ್ಲಾಟ್ ಫಾರಂ, ಟಿಕೆಟ್ ಕೌಂಟರ್, ಶೌಚಾಲಯ, ಚಾಲಕ, ನಿರ್ವಾಹಕ ಹಾಗೂ ಪ್ರಯಾಣಿಕರಿಗೆ ಪ್ರತ್ಯೇಕ ವೆಟಿಂಗ್ ರೂಂ ನಿರ್ಮಿಸಲಾಗುವುದು. ವಾಕರಸಾಸಂಗೆ ಆಡಳಿತ ಕಟ್ಟಡವೂ ಇಲ್ಲಿರುತ್ತದೆ. ಜೊತೆಗೆ ವಾಣಿಜ್ಯ ಮಳಿಗೆಗಳ ಮೂಲಕ ಸಂಪನ್ಮೂಲವನ್ನು ವಾಕರಸಾಸಂ ಪಡೆಯಲಿದೆ. ಪ್ರಯಾಣಿಕರ ಹಿತದೃಷ್ಟಿಯಿಂದ 12 ರಿಂದ 15 ತಿಂಗಳೊಳಗಾಗಿ ನಿಲ್ದಾಣ ಕಾಮಗಾರಿ ಮುಗಿಸಿ ವಾಕರಸಾಸಂಗೆ ಹಸ್ತಾಂತರಿಸಬೇಕೆಂದು ನಿಯಮ ಹೇರಲಾಗಿದೆ. ಒಂದು ವೇಳೆ ಮುಗಿಯದಿದ್ದರೆ ದಂಡ ಹಾಕಲು ಅವಕಾಶವಿದೆ ಎನ್ನುತ್ತಾರೆ ಬಸವರಾಜ ಕೇರಿ.
ಒಟ್ಟಿನಲ್ಲಿ ಧಾರವಾಡದ ಮಂದಿಗೆ ಅದೇ ಹಳೆಯ ಬಸ್ ನಿಲ್ದಾಣದ ಗದ್ದಲ-ಗೌಜಲು ತಲೆನೋವಾಗಿತ್ತು. ಇದೀಗ ಬಿಆರ್ಟಿಸ್ ಮೂಲಕ ಹೊಸ ಬಸ್ ನಿಲ್ದಾಣದ ಸೌಕರ್ಯ ಪಡೆಯುತ್ತಿದ್ದು, ಸಂತಸವೇ ಸರಿ.
ಪ್ರಸ್ತುತ ಹಳೆ ಕೇಂದ್ರೀಯ ಬಸ್ ನಿಲ್ದಾಣ ತೆರವುಗೊಳಿಸಲಾಗಿದ್ದು, ಪ್ರಯಾಣಿಕರಿಗೆ ತೊಂದರೆಯಾಗದಂತೆ ನಗರದ ಸುತ್ತಲೂ ಏಳು ತಾತ್ಕಾಲಿಕ ಬಸ್ ನಿಲ್ದಾಣಗಳನ್ನು ನಿರ್ಮಿಸಲಾಗಿದೆ. ಅವುಗಳ ಬಗ್ಗೆ ಸಾಕಷ್ಟು ರೀತಿಯಲ್ಲಿ ಪ್ರಚಾರ ಮಾಡಿದ್ದು, ಪ್ರಯಾಣಿಕರು ನೂತನ ವ್ಯವಸ್ಥೆಗೆ ಸ್ಪಂದಿಸುತ್ತಿದ್ದಾರೆ. ಬಸ್ ನಿಲ್ದಾಣದ ತೆರವು ಪ್ರಯಾಣಿಕರಿಗೆ ತುಸು ಕಷ್ಟ ಎನಿಸಿದರೂ ಕೆಲವು ತಿಂಗಳು ಮಾತ್ರ. ಪ್ರಯಾಣಿಕರು ಸಹಕರಿಸಬೇಕು.
ಎಸ್.ಜಿ. ಜೋಶಿ
ವಾಯವ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆ, ಮುಖ್ಯಾಧಿಕಾರಿ
-ಬಸವರಾಜ ಹಿರೇಮಠ