ಹೆಚ್ಚುವರಿ ಡಿಜಿಪಿಯಾಗಿ ಧಾರವಾಡದಲ್ಲಿ ಅಧಿಕಾರ ವಹಿಸಿಕೊಂಡ ರವೀಂದ್ರನಾಥ
ಸಂಶೋಧನೆ ಮತ್ತು ಪುನರ್ ರಚನೆ ಇಲಾಖೆಗೆ ಸರ್ಕಾರ ನನ್ನನ್ನು ವರ್ಗಾವಣೆ ಮಾಡಿದೆ. ಆದರೆ, ಅದಕ್ಕಾಗಿ ನಿರ್ದಿಷ್ಟ ಕಚೇರಿ ಇಲ್ಲ...
ಧಾರವಾಡ: ಸಂಶೋಧನೆ ಮತ್ತು ಪುನರ್ ರಚನೆ ಇಲಾಖೆಗೆ ಸರ್ಕಾರ ನನ್ನನ್ನು ವರ್ಗಾವಣೆ ಮಾಡಿದೆ. ಆದರೆ, ಅದಕ್ಕಾಗಿ ನಿರ್ದಿಷ್ಟ ಕಚೇರಿ ಇಲ್ಲ. ಹಾಗಾಗಿ ಡಿಜಿಪಿ ಅವರನ್ನು ಭೇಟಿಯಾಗಿ ಅವರ ಮೂಲಕ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸುತ್ತೇನೆ ಎಂದು ಸಂಶೋಧನೆ ಮತ್ತು ಪುನರ್ ರಚನೆ ಇಲಾಖೆ ಹೆಚ್ಚುವರಿ ಡಿಜಿಪಿ ರವೀಂದ್ರನಾಥ ಹೇಳಿದರು.
ಕಾಫಿಶಾಪ್ ಫೋಟೋ ವಿವಾದದ ಬಳಿಕ ಧಾರವಾಡಕ್ಕೆ ವರ್ಗಾವಣೆ ಗೊಂಡಿದ್ದ ಅವರು ನಗರದಲ್ಲಿ ಮಂಗಳವಾರ ಅಧಿಕಾರ ವಹಿಸಿಕೊಂಡ ನಂತರ ಸುದ್ದಿಗಾರರೊಂದಿಗೆ ಮಾತನಾಡಿದರು. ಎಡಿಜಿಪಿ ಸ್ಥಾನದಿಂದ ಈ ಇಲಾಖೆಗೆ ವರ್ಗಾವಣೆ ಮಾಡಿದ ಹಿನ್ನೆಲೆಯಲ್ಲಿ ಜೂ.14ರ ವರೆಗೆ ಅಧಿಕಾರ ಸ್ವೀಕರಿಸಲು ಸಮಯಾವಕಾಶ ಇತ್ತು. ಈ ಹಿನ್ನೆಲೆಯಲ್ಲಿ ಇಂದು ಧಾರವಾಡದ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳ ಕಚೇರಿಗೆ ಆಗಮಿಸಿ ಅಧಿಕಾರ ವಹಿಸಿಕೊಂಡಿದ್ದೇನೆ. ಸದ್ಯ ಫೋಟೋ ವಿವಾದ ಕುರಿತು ತನಿಖೆ ನಡೆದಿರುವುದರಿಂದ, ಆ ಕುರಿತು ಯಾವುದೇ ಪ್ರತಿಕ್ರಿಯೆ ನೀಡಲು ಬಯಸುವುದಿಲ್ಲ. ರಾಜಿನಾಮೆ ನೀಡಿದ ಕಾರಣ ಸರ್ಕಾರದ ನಿಯಮಗಳ ಪ್ರಕಾರ ನಡೆದುಕೊಳ್ಳಬೇಕಾಗುತ್ತದೆ. ಸದ್ಯ ಅಧಿಕಾರ ವಹಿಸಿಕೊಂಡಿರುವ ಸಂಶೋಧನೆ ಮತ್ತು ಪುನರ್ ರಚನೆ ಇಲಾಖೆಯಲ್ಲಿ ಪ್ರಾಮಾಣಿಕ ಕಾರ್ಯ ಮಾಡುತ್ತೇನೆ ಎಂದರು.