ರೇಲ್ವೆಗೆ ಭೂಮಿ ಕೊಟ್ಟವರಿಗೆ ಉದ್ಯೋಗ ನೀಡಿ
ಕನ್ನಡಪ್ರಭ ವಾರ್ತೆ, ಹುಬ್ಬಳ್ಳಿ, ಜೂ. 11
ಬಾಗಲಕೋಟೆ-ಕುಡಚಿ ನೂತನ ರೈಲು ಮಾರ್ಗಕ್ಕೆ ಭೂಮಿ ನೀಡಿದ ರೈತ ಕುಟುಂಬಗಳಿಗೆ ಉದ್ಯೋಗ ಕಲ್ಪಿಸಲು ಹಾಗೂ ಉತ್ತರ ಕರ್ನಾಟಕದಲ್ಲಿ ರೇಲ್ವೆ ಅಭಿವೃದ್ಧಿಗೆ ಆದ್ಯತೆ ನೀಡಲು ಒತ್ತಾಯಿಸಿ ರಾಜ್ಯ ರೇಲ್ವೆ ಅಭಿವೃದ್ಧಿ ಹೋರಾಟ ಸಮಿತಿ ವತಿಯಿಂದ ನಗರದಲ್ಲಿ ಬುಧವಾರ ಪ್ರತಿಭಟನೆ ನಡೆಸಲಾಯಿತು.
ಬಾಗಲಕೋಟೆ-ಕುಡಚಿ ನೂತನ ರೈಲು ಮಾರ್ಗಕ್ಕೆ ಸಾವಿರಾರು ರೈತರು ಫಲವತ್ತಾದ ಕೃಷಿ ಭೂಮಿ ನೀಡಿದ್ದಾರೆ. ರೈಲು ಮಾರ್ಗಕ್ಕೆ ಭೂಮಿ ನೀಡುವ ರೈತರ ಕುಟುಂಬದಲ್ಲಿ ಒಬ್ಬರಿಗೆ ರೇಲ್ವೆ ಇಲಾಖೆಯಲ್ಲಿ ಡಿ ದರ್ಜೆ ಉದ್ಯೋಗ ನೀಡುವುದಾಗಿ ಲಿಖಿತವಾಗಿ ಲ್ಯಾಂಡ್ ಲೂಜರ್ ಸರ್ಟಿಫಿಕೇಟ್ ನೀಡಿ ಎರಡು ವರ್ಷವಾಗಿದ್ದರೂ ಉದ್ಯೋಗ ನೀಡಿಲ್ಲ ಎಂದು ಪ್ರತಿಭಟನಾಕಾರರು ದೂರಿದರು.
ರೈಲು ಮಾರ್ಗಕ್ಕೆ ಭೂಮಿ ನೀಡಿರುವ ರೈತರು ಸಂಕಷ್ಟದಲ್ಲಿದ್ದು, ತಕ್ಷಣ ಉದ್ಯೋಗ ಒದಗಿಸಬೇಕು. ಆ ಮೂಲಕ ರೈತ ಕುಟುಂಬ ಬೀದಿಗೆ ಬರುವುದನ್ನು ತಪ್ಪಿಸಬೇಕು ಎಂದು ಆಗ್ರಹಿಸಿದರು.
ಉತ್ತರ ಕರ್ನಾಟಕದಲ್ಲಿ ರೇಲ್ವೆ ಅಭಿವೃದ್ಧಿಗೆ ಬಜೆಟ್ನಲ್ಲಿ ಆದ್ಯತೆ ನೀಡಬೇಕು ಹಾಗೂ ಮತ್ತಿತರ ಬೇಡಿಕೆ ಈಡೇರಿಸಬೇಕು ಎಂದು ಕೋರಿದರು. ಚೆನ್ನಮ್ಮ ವೃತ್ತದಿಂದ ರೇಲ್ವೆ ಕಚೇರಿವರೆಗೆ ಮೆರವಣಿಗೆಯಲ್ಲಿ ತೆರಳಿದ ಪ್ರತಿಭಟನಾಕಾರರು ಬೇಡಿಕೆ ಈಡೇರಿಕೆಗೆ ಆಗ್ರಹಿಸಿ ರೈಲ್ವೆ ಸಚಿವ ಡಿ.ವಿ. ಸದಾನಂದಗೌಡರಿಗೆ ಹುಬ್ಬಳ್ಳಿ ವಲಯ ರೈಲ್ವೆ ಅಧಿಕಾರಿಗಳ ಮೂಲಕ ಮನವಿ ಸಲ್ಲಿಸಿದರು.
ಹೋರಾಟ ಸಮಿತಿಯ ಶ್ರೀನಿವಾಸ ಬಳ್ಳಾರಿ, ಬಾಬಾಜಾನ ಮುಧೋಳ, ನವೀನ ಮಡಿವಾಳರ, ಎನ್.ಕೆ. ಕೊರ್ಲಹಳ್ಳಿ, ಸುರೇಶ ಗೌಡರ, ಗೋಪಾಲ ರಾಠೋಡ ಮತ್ತಿತರರು ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು.