ಹುದ್ದೆ ಭರ್ತಿಗೆ ಮೇಯರ್ ಆಗ್ರಹ
ಹುಬ್ಬಳ್ಳಿ: ನಗರಾಭಿವೃದ್ಧಿ ಇಲಾಖೆ ಹಂತದಲ್ಲಿ ಆಗಬೇಕಿರುವ ಹುಬ್ಬಳ್ಳಿ-ಧಾರವಾಡ ಮಹಾನಗರ ಪಾಲಿಕೆಗೆ ಸಂಬಂಧಿಸಿದ ಅಗತ್ಯ ಕೆಲಸಗಳ ಕುರಿತು ಮೇಯರ್ ಶಿವು ಹಿರೇಮಠ ಜಿಲ್ಲಾ ಉಸ್ತುವಾರಿ ಸಚಿವ ದಿನೇಶ ಗುಂಡೂರಾವ್ಗೆ ನಗರದಲ್ಲಿ ಬುಧವಾರ ಮನವಿ ಸಲ್ಲಿಸಿದರು.
ಪಾಲಿಕೆಯಲ್ಲಿ ವಿವಿಧ ವೃಂದಗಳಲ್ಲಿ ಮಂಜೂರಾತಿ ಹುದ್ದೆಗಳ ಸಂಖ್ಯೆ 3,794 ಇದ್ದರೂ 1,648 ಸಿಬ್ಬಂದಿ ಮಾತ್ರ ಕಾರ್ಯನಿರ್ವಹಿಸುತ್ತಿದ್ದಾರೆ. ಪೌರ ಕಾರ್ಮಿಕರು ಸೇರಿದಂತೆ ಒಟ್ಟು 2,146 ಹುದ್ದೆ ಖಾಲಿ ಇದ್ದು, ಹುದ್ದೆಗಳ ಭರ್ತಿಗೆ ಕ್ರಮಕೈಗೊಳ್ಳಬೇಕು. ಉಪ ಕಂದಾಯ ಆಯುಕ್ತರು, ಪರಿಷತ್ ಕಾರ್ಯದರ್ಶಿ, ಆರೋಗ್ಯ ಅಧಿಕಾರಿಗಳು ಸೇರಿದಂತೆ ಪ್ರಮುಖ ಹುದ್ದೆಗಳೂ ಖಾಲಿ ಇರುವುದರಿಂದ ಆಡಳಿತ ನಿರ್ವಹಣೆಯಲ್ಲಿ ತೊಂದರೆಯಾಗುತ್ತಿದೆ ಎಂದು ಮೇಯರ್ ಇದೇ ಸಂದರ್ಭದಲ್ಲಿ ತಿಳಿಸಿದರು.
ಆಶ್ರಯ ಬಡಾವಣೆಗಳಲ್ಲಿ ಮೂಲ ಸೌಲಭ್ಯ ಕಲ್ಪಿಸಲು ಸರ್ಕಾರದಿಂದ ರು. 1.20 ಕೋಟಿ ಬಿಡುಗಡೆ ಮಾಡಿಸಬೇಕು. ಹುಬ್ಬಳ್ಳಿ-ಧಾರವಾಡ ಮಹಾನಗರ ಪಾಲಿಕೆಗೆ ರು. 100 ಕೋಟಿ ಬದಲಾಗಿ ಜನಸಂಖ್ಯೆಗನುಗುಣವಾಗಿ ರು. 300 ಕೋಟಿ ವಿಶೇಷ ಅನುದಾನ ನೀಡಬೇಕು. ಅವಳಿ ನಗರದ 138 ಕೊಳಚೆ ಪ್ರದೇಶಗಳಲ್ಲಿ ಮೂಲ ಸೌಲಭ್ಯ ಕಲ್ಪಿಸಲು ವಿಶೇಷ ಅನುದಾನ ಮಂಜೂರು ಮಾಡಬೇಕು.
ಅವಳಿ ನಗರದ ನವಲೂರು ಕೆರೆ, ಉಣಕಲ್ಲ ಕೆರೆ, ಕೋಳಿಕೆರೆ, ತೋಳನಕೆರೆ ಮತ್ತಿತರ ಕೆರೆಗಳಲ್ಲಿ ಹೂಳು ತೆಗೆಯಲು ಮತ್ತು ಕೆರೆಗಳ ಸಂರಕ್ಷಣೆಗೆ ಕ್ರಮ ತೆಗೆದುಕೊಳ್ಳಬೇಕು. ಅವಳಿ ನಗರದ ಜನಸಂಖ್ಯೆ ಪರಿಗಣಿಸಿ ಹುಬ್ಬಳ್ಳಿ-ಧಾರವಾಡ ಮಹಾನಗರ ಪಾಲಿಕೆಯನ್ನು ಬೃಹತ್ ಮಹಾನಗರ ಪಾಲಿಕೆಯನ್ನಾಗಿ ಘೋಷಿಸಬೇಕು. ಅವಸಾನದ ಅಂಚಿನಲ್ಲಿರುವ ಅವಳಿ ನಗರದ ಮಾರುಕಟ್ಟೆಗಳನ್ನು ಮಾದರಿ ಮಾರುಕಟ್ಟೆಗಳನ್ನಾಗಿ ನಿರ್ಮಿಸಬೇಕು. ಕ್ರೀಡಾಪಟುಗಳ ಪ್ರೋತ್ಸಾಹಕ್ಕೆ ಸಂಜೀವಿನಿ ಪಾರ್ಕ್ ಎದುರಿನ ಸರ್ಕಾರಿ ಜಾಗೆಯಲ್ಲಿ ಕ್ರೀಡಾ ಸಂಕೀರ್ಣ ನಿರ್ಮಿಸಬೇಕು. ಹುಬ್ಬಳ್ಳಿ ಈದ್ಗಾ ಮೈದಾನ ಪಕ್ಕದ ಜಾಗೆಯಲ್ಲಿ ಬಹುಮಡಿ ಕಟ್ಟಡದ ಪಾರ್ಕಿಂಗ್ ಯೋಜನೆ ಜಾರಿಗೊಳಿಸಬೇಕು ಹಾಗೂ ಮತ್ತಿತರ ಬೇಡಿಕೆ ಈಡೇರಿಕೆಗೆ ಕ್ರಮ ತೆಗೆದುಕೊಳ್ಳುವಂತೆ ಮೇಯರ್ ಹಿರೇಮಠ ಆಗ್ರಹಿಸಿದರು.
ಮನವಿ ಸಲ್ಲಿಸುವ ಸಂದರ್ಭದಲ್ಲಿ ಬಿಜೆಪಿ ಮಹಾನಗರ ಜಿಲ್ಲಾ ಘಟಕದ ವತಿಯಿಂದಲೂ ಮನವಿ ಸಲ್ಲಿಸಿ, ಅವಳಿ ನಗರದ ಅಭಿವೃದ್ಧಿಗೆ ಸೂಕ್ತ ಕ್ರಮಕೈಗೊಳ್ಳುವಂತೆ ಆಗ್ರಹಿಸಲಾಯಿತು. ಮಹಾನಗರ ಜಿಲ್ಲಾಧ್ಯಕ್ಷ ಲಿಂಗರಾಜ ಪಾಟೀಲ, ಮಹೇಶ ಟೆಂಗಿನಕಾಯಿ, ರಂಗಾ ಬದ್ದಿ ಮತ್ತಿತರರು ಹಾಜರಿದ್ದರು.