ಪಾರ್ಕಿಂಗ್ ಶುಲ್ಕ ತಾತ್ಕಾಲಿಕ ರದ್ದು
ಕನ್ನಡಪ್ರಭ ವಾರ್ತೆ, ಹುಬ್ಬಳ್ಳಿ, ಜೂ. 12
ಅವಳಿ ನಗರದಲ್ಲಿರುವ ವಾಹನಗಳ ಪಾರ್ಕಿಂಗ್ ಮತ್ತು ಹಾಕರ್ಸ್ ಝೋನ್ನ ಶುಲ್ಕವನ್ನು ತಕ್ಷಣದಿಂದ ಜಾರಿಗೆ ಬರುವಂತೆ ತಾತ್ಕಾಲಿಕವಾಗಿ ರದ್ದುಪಡಿಸಲಾಗಿದೆ.
ವಾಹನಗಳ ಪಾರ್ಕಿಂಗ್ ಹಾಗೂ ಹಾಕರ್ಸ್ ಝೋನ್ನ ಈಗಿರುವ ಗುತ್ತಿಗೆಗಳನ್ನೆಲ್ಲ ರದ್ದುಪಡಿಸಿ, ಹೊಸ ಟೆಂಡರ್ ಕರೆಯುವವರೆಗೂ ಸಾರ್ವಜನಿಕರು ಯಾವುದೇ ರೀತಿಯ ಶುಲ್ಕ ನೀಡುವಂತಿಲ್ಲ ಎಂದು ಮೇಯರ್ ಶಿವು ಹಿರೇಮಠ ಆದೇಶ ಹೊರಡಿಸಿದ್ದಾರೆ.
ಗುರುವಾರ ನಡೆದ ಮಹಾನಗರ ಪಾಲಿಕೆ ಸಾಮಾನ್ಯ ಸಭೆಯ ಶೂನ್ಯ ವೇಳೆಯಲ್ಲಿ ಪಾರ್ಕಿಂಗ್ ಅವೈಜ್ಞಾನಿಕ ಶುಲ್ಕದ ಕುರಿತು ಗಮನ ಸೆಳೆದ ಬಿಜೆಪಿ ಸದಸ್ಯೆ ಕಮಲಾಕ್ಷೀ ಸಜ್ಜನರ ಅವರೊಂದಿಗೆ ಪಕ್ಷಾತೀತವಾಗಿ ಎಲ್ಲ ಸದಸ್ಯರು ಧ್ವನಿಗೂಡಿಸಿ, ಈಗಿರುವ ಟೆಂಡರ್ಗಳನ್ನು ರದ್ದುಗೊಳಿಸಬೇಕೆಲ್ಲದೇ ನೂತನ ಟೆಂಡರ್ ಕರೆಯುವವರೆಗೂ ಶುಲ್ಕ ವಸೂಲಿ ಮಾಡುವುದನ್ನು ನಿಲ್ಲಿಸಬೇಕು ಎಂದು ಒತ್ತಾಯಿಸಿದರು.
ಪೊಲೀಸ್ ಇಲಾಖೆಯೊಂದಿಗೆ ಸೇರಿ ಪಾರ್ಕಿಂಗ್ ಸ್ಥಳ ನಿಗದಿಪಡಿಸಲು ಪಾಲಿಕೆ ಸದಸ್ಯರು ಹಾಗೂ ಅಧಿಕಾರಿಗಳನ್ನೊಳಗೊಂಡ ಸಮಿತಿ ರಚಿಸುವಂತೆ ಸಭಾನಾಯಕ ಸುಧೀರ ಸರಾಫ ಸಲಹೆ ನೀಡಿದರು.
ವಿಮಾನ ನಿಲ್ದಾಣ ಅಭಿವೃದ್ಧಿಗೆ ಗೋಕುಲ ಸ್ಮಶಾನದ ರಸ್ತೆ ವಶಪಡಿಸಿಕೊಂಡ ನಂತರ ನೀಡಿರುವ ಪರ್ಯಾಯ ಸ್ಮಶಾನ ಭೂಮಿಯಲ್ಲಿ ಯಾವುದೇ ಅಭಿವೃದ್ಧಿ ಇಲ್ಲವೆಂದು ಬಿಜೆಪಿ ಸದಸ್ಯ ರಾಮಣ್ಣ ಬಡಿಗೇರ ದೂರಿದರು.
ಧಾರವಾಡದಲ್ಲಿ ಬೀದಿದೀಪಗಳ ನಿರ್ವಹಣೆ ಅಸಮರ್ಪಕವಾಗಿದ್ದು, ಗುತ್ತಿಗೆದಾರರು ಸರಿಯಾಗಿ ಕೆಲಸ ನಿರ್ವಹಿಸುತ್ತಿಲ್ಲವೆಂದು ಧಾರವಾಡದ ಸದಸ್ಯರೆಲ್ಲ ಆರೋಪಿಸಿದರು. ಕಳೆದ ಅವಧಿಯಲ್ಲಿ ಧಾರವಾಡದಲ್ಲಿ ನಡೆದಿದ್ದ ಸಾಮಾನ್ಯ ಸಭೆ ಸಂದರ್ಭದಲ್ಲಿ ಗುತ್ತಿಗೆದಾರರೊಬ್ಬರನ್ನು ಕಪ್ಪುಪಟ್ಟಿಗೆ ಸೇರಿಸುವಂತೆ ಮೇಯರ್ ನೀಡಿದ್ದ ಆದೇಶವನ್ನು ಪಾಲಿಕೆ ಅಧಿಕಾರಿಗಳು ಜಾರಿಗೆ ತಂದಿಲ್ಲವೆಂದು ಬಿಜೆಪಿ ಸದಸ್ಯ ಕೃಷ್ಣಾ ಗಂಡಗಾಳೇಕರ ಆಪಾದಿಸಿದರು.
ಬೀದಿದೀಪ ನಿರ್ವಹಣೆಯಲ್ಲಿ ನಿರ್ಲಕ್ಷ ತೋರುವ ಗುತ್ತಿಗೆದಾರರ ವಿರುದ್ಧ ಕ್ರಮಕೈಗೊಳ್ಳುವಂತೆ ಬಿಜೆಪಿ ಹಿರಿಯ ಸದಸ್ಯ ಡಾ. ಪಾಂಡುರಂಗ ಪಾಟೀಲ ಒತ್ತಾಯಿಸಿದರು. 30 ದಿನಗಳೊಳಗಾಗಿ ಬೀದಿದೀಪಗಳ ನಿರ್ವಹಣೆ ಸರಿಪಡಿಸುವಂತೆ ಸೂಚಿಸಿದ ಮೇಯರ್ ಶಿವು ಹಿರೇಮಠ, ಬೀದಿದೀಪಗಳ ಖರೀದಿಗೆ ಅಗತ್ಯಬಿದ್ದರೆ ಪಾಲಿಕೆಯಿಂದ ವಿಶೇಷ ಅನುದಾನ ಬಿಡುಗಡೆ ಮಾಡುವುದಾಗಿ ತಿಳಿಸಿದರು.
ಕೊಳಚೆ ಪ್ರದೇಶಗಳ ಹಸ್ತಾಂತರ ಸೇರಿದಂತೆ ಮೂಲ ಸೌಲಭ್ಯ ಒದಗಿಸುವುದಕ್ಕಾಗಿ 10 ದಿನಗಳೊಳಗೆ ಕೊಳಚೆ ನಿರ್ಮೂಲನಾ ಮಂಡಳಿ ಹಾಗೂ ಹೆಸ್ಕಾಂ ಅಧಿಕಾರಿಗಳ ಸಭೆ ಕರೆಯುವುದಾಗಿ ಮೇಯರ್ ಪ್ರಕಟಿಸಿದರು.
ಪಾಲಿಕೆಯಲ್ಲಿ ಅಧಿಕಾರಿಗಳ ಕೊರತೆ ಇದ್ದು, ಯಾವುದೇ ಕಾರಣಕ್ಕೂ ಇಲ್ಲಿಯ ಅಧಿಕಾರಿಗಳನ್ನು ವರ್ಗಾಯಿಸದಂತೆ ಸಭೆಯಲ್ಲಿ ಒಮ್ಮತದ ನಿರ್ಣಯ ಕೈಗೊಂಡು ನಗರಾಭಿವೃದ್ಧಿ ಇಲಾಖೆ ಫ್ಯಾಕ್ಸ್ ಮಾಡಬೇಕೆಂದು ಕಾಂಗ್ರೆಸ್ ಸದಸ್ಯ ಪ್ರಕಾಶ ಕ್ಯಾರಕಟ್ಟಿ, ಜೆಡಿಎಸ್ನ ಅಲ್ತಾಫ ಕಿತ್ತೂರ ಒತ್ತಾಯಿಸಿದರು.
'ಕನ್ನಡಪ್ರಭ' ಎಫೆಕ್ಟ್
ಅವೈಜ್ಞಾನಿಕ ಪಾರ್ಕಿಂಗ್ ಶುಲ್ಕ ವಸೂಲಿ ಕುರಿತಂತೆ 'ಕನ್ನಡಪ್ರಭ' ವಿಶೇಷ ವರದಿ ಪ್ರಕಟಿಸಿತ್ತು. ಗುತ್ತಿಗೆದಾರರು ದಬ್ಬಾಳಿಕೆ ಮಾಡಿ ಅಕ್ರಮವಾಗಿ ಶುಲ್ಕ ವಸೂಲಾತಿ ಮಾಡುತ್ತಿದ್ದಾರೆ. ಇದರಿಂದ ವಾಹನ ಮಾಲೀಕರು ತೊಂದರೆ ಪಡುವಂತಾಗಿತ್ತು. ಈ ವಿಷಯ ಸಭೆಯಲ್ಲಿ ಚರ್ಚೆಯಾಗಿ, ಶುಲ್ಕ ವಸೂಲಾತಿಗೆ ತಾತ್ಕಾಲಿಕವಾಗಿ ರದ್ದಾಗುವಂತಾಗಿದೆ.
ಧರಣಿ ಎಚ್ಚರಿಕೆ
ತ್ಯಾಜ್ಯ ನಿರ್ವಹಣೆ ಹಾಗೂ ಮರುಬಳಕೆಗೆ ಸರ್ಕಾರ ತುರ್ತು ಕ್ರಮಕೈಗೊಳ್ಳದಿದ್ದರೆ ಬೆಂಗಳೂರು ವಿಕಾಸಸೌಧದಲ್ಲಿರುವ ನಗರಾಭಿವೃದ್ಧಿ ಇಲಾಖೆ ಕಾರ್ಯದರ್ಶಿಯವರ ಕಚೇರಿ ಎದುರು ಪಾಲಿಕೆಯ ಎಲ್ಲ ಸದಸ್ಯರು ಧರಣಿ ನಡೆಸಲಾಗುವುದೆಂದು ಬಿಜೆಪಿ ಸದಸ್ಯ ವೀರಣ್ಣ ಸವಡಿ ಎಚ್ಚರಿಕೆ ನೀಡಿದರು.
ತ್ಯಾಜ್ಯನಿರ್ವಹಣೆ ದಿನದಿಂದ ದಿನಕ್ಕೆ ಗಂಭೀರವಾಗುತ್ತಿದೆ. ಕಾರವಾರ ರಸ್ತೆ ಮತ್ತು ಧಾರವಾಡ ಹೊಸಯಲ್ಲಾಪುರದಲ್ಲಿರುವ ತ್ಯಾಜ್ಯವಿಲೇವಾರಿ ಘಟಕದಲ್ಲಿನ ತ್ಯಾಜ್ಯ ಇನ್ನೂ ಕೆಲವೇ ದಿನಗಳಲ್ಲಿ ರಸ್ತೆಗೆ ಬೀಳುವ ಆತಂಕವಿದೆ. ತ್ಯಾಜ್ಯವಿಲೇವಾರಿ ಹಾಗೂ ಮರುಬಳಕೆಗೆ ತುರ್ತು ಕ್ರಮಕೈಗೊಳ್ಳದ ನಗರಾಭಿವೃದ್ಧಿ ಇಲಾಖೆ ವರ್ತನೆಯಿಂದಾಗಿ ಅವಳಿ ನಗರದಲ್ಲಿ ಬೆಂಗಳೂರಿನಂಥ ಸ್ಥಿತಿ ಉದ್ಭವಿಸಲಿದೆ ಎಂದರು.
ಮನೆ ಮನೆಯಿಂದ ಕಸ ಸಂಗ್ರಹಿಸುವಂತೆ ಸರ್ಕಾರ 2005ರಲ್ಲಿಯೇ ಕಾಯ್ದೆ ಜಾರಿಗೊಳಿಸಿದೆ. ಹುಬ್ಬಳ್ಳಿ-ಧಾರವಾಡದಲ್ಲಿ ಈ ಕಾಯ್ದೆ ಇನ್ನೂ ಜಾರಿಗೊಂಡಿಲ್ಲ. ಈ ಕುರಿತು ನಾಗರಿಕರು ನ್ಯಾಯಾಲಯದ ಮೆಟ್ಟಿಲು ಏರಿದರೆ ಆಯುಕ್ತರು ಕಂಬಿ ಎಣಿಸಬೇಕಾಗುತ್ತದೆ ಎಂದು ಬಿಜೆಪಿಯ ಡಾ. ಪಾಂಡುರಂಗ ಪಾಟೀಲ ಎಚ್ಚರಿಸಿದರು.
ಅಭಿವೃದ್ಧಿ ಮಂತ್ರ ಜಪಿಸಿದ ಮೇಯರ್
ಕನ್ನಡಪ್ರಭ ವಾರ್ತೆ, ಹುಬ್ಬಳ್ಳಿ, ಜೂ. 12
ಉಚಿತ ವೈಫೈ ಸೌಲಭ್ಯ... ನಿಯಂತ್ರಣ ಕೊಠಡಿ ಮೂಲಕ ಎಸ್ಎಂಎಸ್ ಯೋಜನೆ... ಸ್ವಚ್ಛತೆ... ಆಸ್ತಿಗಳ ಸಂರಕ್ಷಣೆ... ಸ್ಮಶಾನಗಳ ಅಭಿವೃದ್ಧಿ... ಮಹಿಳಾ ಸುರಕ್ಷಾ ಘಟಕ....
ಗುರುವಾರ ನಡೆದ ಮಹಾನಗರ ಪಾಲಿಕೆ ಸಾಮಾನ್ಯ ಸಭೆಯಲ್ಲಿ ಮೇಯರ್ ಶಿವು ಹಿರೇಮಠ ಮಂಡಿಸಿದ ತಮ್ಮ ಪ್ರಥಮ ಭಾಷಣದಲ್ಲಿ ಅವಳಿ ನಗರದ ನಾಗರಿಕರಿಗೆ ನೀಡಿದ ಭರವಸೆಗಳಿವು.
ಹುಬ್ಬಳ್ಳಿಯ ಇಂದಿರಾಗಾಜಿನ ಮನೆ, ಉಣಕಲ್ ಕೆರೆ ಪಾರ್ಕ್, ನೃಪತುಂಗ ಬೆಟ್ಟ, ಧಾರವಾಡದ ಕೆ.ಸಿ. ಪಾರ್ಕ್, ಆಜಾದ್ ಪಾರ್ಕ್, ಸಾಧನಕೆರೆಯ ಬೇಂದ್ರೆ ಪಾರ್ಕ್ನಲ್ಲಿ ರು. 50 ಲಕ್ಷ ವೆಚ್ಚದಲ್ಲಿ ಉಚಿತ ವೈಫೈ ಸೌಲಭ್ಯ ಒದಗಿಸಲಾಗುವುದು.
ರು. 1,146 ಕೋಟಿ ವೆಚ್ಚದಲ್ಲಿ ನಿರಂತರ ನೀರು ಪೂರೈಕೆ ಯೋಜನೆ ಎಲ್ಲ ವಾರ್ಡ್ಗಳಿಗೆ ವಿಸ್ತರಿಸಲಾಗುವುದು. 2015ರ ಜನೇವರಿ ಅಂತ್ಯದಲ್ಲಿ ಅವಳಿ ನಗರದಾದ್ಯಂತ ಒಳಚರಂಡಿ ಯೋಜನೆ ಪೂರ್ಣಗೊಳಿಸುವ ಗುರಿ ಹೊಂದಲಾಗಿದೆ. ಕೇಂದ್ರ ಸರ್ಕಾರದ ನೂರು ಸ್ಮಾರ್ಟ್ ನಗರಗಳ ಯೋಜನೆಯಡಿ ಹುಬ್ಬಳ್ಳಿ-ಧಾರವಾಡ ಮಹಾನಗರವನ್ನೂ ಸೇರಿಸಲು ಪ್ರಯತ್ನಿಸಲಾಗುವುದು.
ಧಾರವಾಡದಲ್ಲಿ ಹೊಸ ಸ್ಕೇಟಿಂಗ್ ಕ್ರೀಡಾಂಗಣ, ರು. 20 ಲಕ್ಷ ವೆಚ್ಚದಲ್ಲಿ ಎರಡು ಶ್ರದ್ಧಾಂಜಲಿ ವಾಹನ ಖರೀದಿಸಲಾಗುವುದು. ರು. 1.60 ಕೋಟಿ ವೆಚ್ಚದಲ್ಲಿ ಪಾಲಿಕೆ ಒಡೆತನದ ಆಸ್ಪತ್ರೆ ನವೀಕರಿಸಲಾಗುವುದು. ರು. 10 ಲಕ್ಷ ವೆಚ್ಚದಲ್ಲಿ ಸಾರ್ವಜನಿಕ ಶೌಚಾಲಯ ನಿರ್ಮಿಸಲಾಗುವುದು.
ಸ್ಮಶಾನಗಳ ಅಭಿವೃದ್ಧಿ, ಬಸ್ ನಿಲ್ದಾಣಗಳ ನಿರ್ಮಾಣ, ಸಮುದಾಯ ಭವನ ಹಾಗೂ ಹುಬ್ಬಳ್ಳಿ ಟೌನ್ಹಾಲ್ ಅಭಿವೃದ್ಧಿಪಡಿಸಲಾಗುವುದು. ರು. 25 ಲಕ್ಷ ವೆಚ್ಚದಲ್ಲಿ ಮಹಿಳಾ ಸುರಕ್ಷಾ ಘಟಕ ಸ್ಥಾಪಿಸಲಾಗುವುದು. ಹೊಸ ತುರ್ತು ವಾಹನಗಳನ್ನು ಖರೀದಿಸಲಾಗುವುದು ಎಂದು ಮೇಯರ್ ಶಿವು ಹಿರೇಮಠ ಭರವಸೆ ನೀಡಿದರು.