ಐಎಎಸ್ ಸಾಧಕರೊಂದಿಗೆ ವಸಂತ ಹೊರಟ್ಟಿ ಚರ್ಚೆ
ಹುಬ್ಬಳ್ಳಿ: ಪಶ್ಚಿಮ ಪದವೀಧರ ಕ್ಷೇತ್ರದ ಅಭ್ಯರ್ಥಿ ವಸಂತ ಹೊರಟ್ಟಿ ಸೋಮವಾರ ಐಎಎಸ್ ಪರೀಕ್ಷೆಯಲ್ಲಿ ಸಾಧನೆಗೈದಿರುವ ಧಾರವಾಡದ ಗುರುದತ್ತ ಹೆಗಡೆಯವರನ್ನು ಭೇಟಿ ಮಾಡಿ ಅಭಿನಂದಿಸಿ, ಪಶ್ಚಿಮ ಪದವೀಧರರ ಹಿತದೃಷ್ಟಿಯಿಂದ ಏನೆಲ್ಲಾ ಕಾರ್ಯಕ್ರಮಗಳನ್ನು ರೂಪಿಸಬಹುದು ಎನ್ನುವ ದಿಸೆಯಲ್ಲಿ ಚಿಂತನೆ ನಡೆಸಿದರು.
ಹೆಗಡೆ ನಿವಾಸಕ್ಕೆ ಭೇಟಿ ನೀಡಿ ಚರ್ಚಿಸಿದ ವಸಂತ ಹೊರಟ್ಟಿ, ಪಶ್ಚಿಮ ಪದವೀಧರರ ಸಾಕಷ್ಟು ಸಮಸ್ಯೆ ಎದುರಿಸುತ್ತಿದ್ದರೂ ಯಾವುದೇ ಸರ್ಕಾರ ಅವರ ಬಗ್ಗೆ ನೈಜ ಕಾಳಜಿ ತೋರಿಸಿಲ್ಲ ಈ ನಿಟ್ಟಿನಲ್ಲಿ ತಾವು ಕಟ್ಟಿಕೊಂಡಿರುವ ಕನಸನ್ನು ಹೆಗಡೆಯವರಲ್ಲಿ ಪ್ರಸ್ತಾಪಿಸಿದರು.
ಉತ್ತರ ಕರ್ನಾಟಕ ಭಾಗದಲ್ಲಿ ಪ್ರತಿಭಾನ್ವಿತರಿಗೆ ಕೊರತೆಯಿಲ್ಲ, ಆದರೆ ಸೂಕ್ತ ವೇದಿಕೆ, ಸಕಾಲಕ್ಕೆ ಮಾರ್ಗದರ್ಶನ ಸಿಗದಿರುವುದರಿಂದ ಆ ಪ್ರತಿಭೆಗಳು ಬೆಳಕಿಗೆ ಬರುತ್ತಿಲ್ಲ. ಈ ನಿಟ್ಟಿನಲ್ಲಿ ವಿದ್ಯಾರ್ಥಿಗಳಿಗೆ ಹಾಗೂ ಉದ್ಯೋಗ ಅರಸುತ್ತಿರುವ ನಿರುದ್ಯೋಗಿಗಳಿಗೆ ಸೂಕ್ತ ಮಾರ್ಗದರ್ಶನ ನೀಡಲು, ಕೌಶಲ್ಯ ಹಾಗೂ ವ್ಯಕ್ತಿತ್ವ ವಿಕಸನಕ್ಕೆ ತಾಲೂಕಿಗೊಂದು ಕೇಂದ್ರ ತೆರೆಯುವ ಇಚ್ಛೆ ಹೊಂದಿರುವುದಾಗಿ ವಸಂತ ತಿಳಿಸಿದಾಗ, ಇಂಥ ಕೇಂದ್ರಗಳಿಗೆ ಅನುಭವಿ ಉಪನ್ಯಾಸಕರಿಂದ, ಸಾಧನೆ ಗೈದವರಿಂದ ಹಾಗೂ ಹಿರಿಯ ಅಧಿಕಾರಿಗಳಿಂದ ಮಾರ್ಗದರ್ಶನ ನೀಡುವ ಕೆಲಸವಾಗಬೇಕಿದೆ. ಜತೆಗೆ ಉನ್ನತ ಶಿಕ್ಷಣಕ್ಕೆ ಅಗತ್ಯ ಪುಸ್ತಕಗಳು ಈ ಕೇಂದ್ರದಲ್ಲಿರಬೇಕು ಎಂಬ ಅಭಿಪ್ರಾಯವನ್ನು ಹೆಗಡೆ ವ್ಯಕ್ತ ಪಡಿಸಿದರು.
ನಿರುದ್ಯೋಗಿ ಪದವೀಧರರಿಗೆ ಪ್ರತ್ಯೇಕ ಬಿಲ್ ತರುವ ವಸಂತ ಅವರ ವಿಚಾರಕ್ಕೆ ಗುರುದತ್ತ ಮೆಚ್ಚುಗೆ ವ್ಯಕ್ತ ಪಡಿಸಿದರು. ಉತ್ತರ ಕರ್ನಾಟಕ ಹೃದಯವಾಗಿರುವ ಹುಬ್ಬಳ್ಳಿ-ಧಾರವಾಡದಲ್ಲಿ ಐಎಎಸ್ ಓದಿಗೆ ಅನುಕೂಲವಾಗುವ ಕೇಂದ್ರ ತೆರೆಯುವ ಬಗ್ಗೆ ಚಿಂತನೆಯನ್ನು ವಸಂತ ವ್ಯಕ್ತ ಪಡಿಸಿದಾಗ ಇದಕ್ಕೆ ಅಗತ್ಯ ಸಹಕಾರ ನೀಡುವುದಾಗಿ ಹೆಗಡೆ ಹೇಳಿದರು.