ಕಬ್ಬಿಗೆ ಪ್ರೋತ್ಸಾಹಧನ ನೀಡಲು ಸರ್ಕಾರಕ್ಕೆ ರೈತರ ಆಗ್ರಹ
ಧಾರವಾಡ: ಹೊರ ರಾಜ್ಯಗಳಿಗೆ ಕಳುಹಿಸಿದ ಕಬ್ಬಿಗೆ ಪ್ರೋತ್ಸಾಹಧನ ನೀಡುವಂತೆ ಆಗ್ರಹಿಸಿ ಧಾರವಾಡ ತಾಲೂಕಿನ ರೈತರು ಸೋಮವಾರ ಜಿಲ್ಲಾಧಿಕಾರಿ ಕಚೇರಿ ಎದುರು ಪ್ರತಿಭಟನೆ ನಡೆಸಿದರು.
ಸ್ಥಳೀಯ ಕಾರ್ಖಾನೆಗಳಿಗೆ ಕಳುಹಿಸಿದ ಕಬ್ಬಿಗೆ ಸರ್ಕಾರ ರು. 150 ಪ್ರೋತ್ಸಾಹಧನ ನೀಡಲು ನಿರ್ಧರಿಸಿದೆ. ಆದರೆ, ಕಾರ್ಖಾನೆಗಳ ಅಲಭ್ಯದಿಂದ ಹೊರ ರಾಜ್ಯಗಳಿಗೆ ಸಾಗಿಸಿದ ಕಬ್ಬಿಗೆ ರಾಜ್ಯ ಸರ್ಕಾರದ ಪ್ರೋತ್ಸಾಹಧನ ಸಿಗುತ್ತಿಲ್ಲ. ಇದರಿಂದ ಜಿಲ್ಲೆಯ ಕಬ್ಬು ಬೆಳೆಗಾರರು ತೀವ್ರ ಹಾನಿ ಅನುಭವಿಸುವ ಪರಿಸ್ಥಿತಿ ನಿರ್ಮಾಣವಾಗಿದೆ.
ತಾಲೂಕಿನಲ್ಲಿ ಕಬ್ಬು ಅಧಿಕ ಪ್ರಮಾಣದಲ್ಲಿ ಉತ್ಪಾದನೆಯಾಗುತ್ತಿದೆ. ಆದರೆ, ಜಿಲ್ಲೆಯಲ್ಲಿ ಯಾವುದೇ ಸಕ್ಕರೆ ಕಾರ್ಖಾನೆಗಳಿಲ್ಲ. ಅಲ್ಲದೇ ನಿಗದಿತ ಸಮಯಕ್ಕೆ ಸ್ಥಳೀಯ ಕಾರ್ಖಾನೆಗಳಿಗೆ ಕಬ್ಬು ಸಾಗಿಸದ ಪರಿಣಾಮ ನೆರೆಯ ಗೋವಾ, ಮಹಾರಾಷ್ಟ್ರ ರಾಜ್ಯದಲ್ಲಿನ ಕಾರ್ಖಾನೆಗಳಿಗೆ ರೈತರು ಕಬ್ಬು ಸಾಗಿಸುತ್ತಿದ್ದಾರೆ. ಇದೇ ವೇಳೆ ಖಾನಾಪುರದ ಲೈಲಾ, ಹಿರೇನಂದಿ ಸೌಭಾಗ್ಯಲಕ್ಷ್ಮಿ ಮತ್ತು ಎಂ.ಕೆ.ಹುಬ್ಬಳ್ಳಿಯ ರಾಣಿ ಶುಗರ್ಸ್ ಕಾರ್ಖಾನೆಗಳು ಇದುವರೆಗೂ ರೈತರಿಗೆ ಬಿಲ್ ಪಾವತಿಸಿಲ್ಲ. ಆದ್ದರಿಂದ ಹೊರ ರಾಜ್ಯಗಳಿಗೆ ಸಾಗಿಸಿದ ಕಬ್ಬಿಗೆ ರಾಜ್ಯ ಸರ್ಕಾರದ ಪ್ರೋತ್ಸಾಹಧನ ನೀಡಬೇಕು. ಬಿಲ್ ನೀಡದ ಕಾರ್ಖಾನೆಗಳಿಂದ ಕೂಡಲೇ ಬಿಲ್ ಪಾವತಿಸಲು ಆದೇಶ ನೀಡಬೇಕು ಎಂದು ಜಿಲ್ಲಾಧಿಕಾರಿಗೆ ಸಲ್ಲಿಸಿದ ಮನವಿಯಲ್ಲಿ ರೈತರು ಆಗ್ರಹಿಸಿದರು.
ಮಲ್ಲನಗೌಡ ಪಾಟೀಲ, ಶಿವಾಜಿ ಡೊಳ್ಳಿನ, ನಿಂಗಪ್ಪ ಬೇಕ್ವಾಡಕರ, ರಾಯಪ್ಪ ಹುಡೇದ, ಡಿ.ಬಿ. ಪಾಟೀಲ, ಸಿದ್ದು ಕಂಬಾರ, ದಶರಥರಾವ್ ದೇಸಾಯಿ, ಸುರೇಶ ಪಾಟೀಲ, ಶಿವಶಂಕರ ಗೇಣಪ್ಪನವರ, ಉದಯಕುಮಾರ ಇನಾಮದಾರ, ರಾಮಚಂದ್ರ ಬಡಿಗೇರ ಇದ್ದರು.