ಚುನಾವಣಾ ಕಾರ್ಯಕ್ಕೆ ಶಿಕ್ಷಕರು: ಹೊರಟ್ಟಿ ಆಕ್ರೋಶ
ಹುಬ್ಬಳ್ಳಿ: ಪಶ್ಚಿಮ ಪದವೀಧರ ಮತ ಕ್ಷೇತ್ರದ ಚುನಾವಣಾ ಕಾರ್ಯಕ್ಕೆ ಶಿಕ್ಷಕರನ್ನು ನೇಮಿಸಿರುವ ಅಧಿಕಾರಿಗಳ ಕಾರ್ಯವೈಖರಿಗೆ ಆಕ್ರೋಶ ವ್ಯಕ್ತಪಡಿಸಿರುವ ಮಾಜಿ ಸಚಿವ ಬಸವರಾಜ ಹೊರಟ್ಟಿ, ಈ ಕೂಡಲೇ ಶಿಕ್ಷಕರನ್ನು ಚುನಾವಣಾ ಕಾರ್ಯದಿಂದ ಬಿಡುಗಡೆಗೊಳಿಸಬೇಕು ಎಂದು ಬೆಳಗಾವಿ ಪ್ರಾದೇಶಿಕ ಆಯುಕ್ತರನ್ನು ಕೋರಿದ್ದಾರೆ.
ಈ ಕುರಿತು ಪತ್ರಿಕಾ ಹೇಳಿಕೆ ನೀಡಿರುವ ಅವರು, ಪಶ್ಚಿಮ ಪದವೀಧರ ಮತ ಕ್ಷೇತ್ರಕ್ಕೆ ಶಿಕ್ಷಕರೇ ಮತದಾರರಾಗಿದ್ದಾರೆ. ಹೀಗಿದ್ದಾಗ ನಾಲ್ಕೂ ಜಿಲ್ಲೆಗಳಿಂದ ಸುಮಾರು 50ಕ್ಕೂ ಹೆಚ್ಚು ಶಿಕ್ಷಕರನ್ನು ಚುನಾವಣಾ ಕಾರ್ಯಕ್ಕೆ ನೇಮಿಸಿದ್ದಾರೆ. ಇದರಿಂದಾಗಿ ಶಿಕ್ಷಕರು ಚುನಾವಣಾ ಪ್ರಕ್ರಿಯೆಯಿಂದ ಹಾಗೂ ಮತದಾನ ಹಕ್ಕಿನಿಂದ ವಂಚಿತರಾಗಲಿದ್ದಾರೆ. ಸಾರ್ವತ್ರಿಕ ಚುನಾವಣೆಯಲ್ಲಿಯೇ ಶಿಕ್ಷಕರನ್ನು ಬಳಸಿಕೊಳ್ಳುವುದು ಸರಿಯಲ್ಲ, ಅಂಥದ್ದರಲ್ಲಿ ಶಿಕ್ಷಕರನ್ನೊಳಗೊಂಡು ನಡೆಯುವ ಪದವೀಧರ ಮತ ಕ್ಷೇತ್ರದ ಚುನಾವಣೆಯಲ್ಲಿಯೂ ಶಿಕ್ಷಕರನ್ನು ಬಳಸಿಕೊಂಡಿರುವುದು ಅಧಿಕಾರಿಗಳ ಮಿತಿಮೀರಿದ ವರ್ತನೆಯನ್ನು ಎತ್ತಿ ತೋರಿಸುತ್ತದೆ ಎಂದಿದ್ದಾರೆ.
ಪ್ರಸಕ್ತ ಚುನಾವಣೆಗೆ ಸಾರ್ವತ್ರಿಕ ಚುನಾವಣೆಗಳಂತೆ ಹೆಚ್ಚಿನ ಸಿಬ್ಬಂದಿ ಅಗತ್ಯವಿರುವುದಿಲ್ಲ. ಹೀಗಿರುವಾಗ ಅಧಿಕಾರಿಗಳು ಶಿಕ್ಷಕರನ್ನು ಬಿಟ್ಟು ಬೇರೆ ಇಲಾಖೆಗಳಿಂದ ಚುನಾವಣಾ ಕಾರ್ಯಕ್ಕೆ ಬಳಸಿಕೊಳ್ಳಲಿ. ಅಲ್ಲದೇ ಈಗಷ್ಟೇ ಶಾಲೆಗಳು ಆರಂಭವಾಗಿದೆ. ಹೀಗಿರುವಾಗ ಶಿಕ್ಷಕರನ್ನು ಚುನಾವಣಾ ಕಾರ್ಯಕ್ಕೆ ನೇಮಿಸಿದ್ದೇ ಆದಲ್ಲಿ ವಿದ್ಯಾರ್ಥಿಗಳ ಕಲಿಕೆಗೆ ತೊಂದರೆಯಾಗಲಿದೆ. ಇಂಥ ಸಾಮಾನ್ಯ ಅರಿವು ಹೊಂದಿರದ ಹಿರಿಯ ಅಧಿಕಾರಿಗಳು ಶಿಕ್ಷಕರನ್ನು ಚುನಾವಣಾ ಕಾರ್ಯಕ್ಕೆ ನೇಮಿಸಿರುವುದು ಅಪರಾಧ ಎಂದು ಹೊರಟ್ಟಿ ಆಕ್ರೋಶ ಹೊರಗೆಡವಿದ್ದಾರೆ.
--