ಆನ್‌ಲೈನ್ ಜೂಜಾಟದ ಕಿಂಗ್‌ಪಿನ್ ಎಸ್ಕೇಪ್
ಕನ್ನಡಪ್ರಭ ವಾರ್ತೆ, ಹುಬ್ಬಳ್ಳಿ, ಜೂ. 19
ಕ್ಯಾಸಿನೋ ಮಾದರಿಯ 'ಖೇಲೋ ಜೀತೋ 36' ಆನ್‌ಲೈನ್ ಜೂಜಾಟದ ಕಿಂಗ್‌ಪಿನ್ ವಿನಾಯಕ ಜರತಾರಘರ ಏಸ್ಕೇಪ್ ಆಗಿದ್ದಾನೆ. ಮಹಾನಗರ ಪೊಲೀಸ್ ಆಯುಕ್ತರ ಆದೇಶದ ಮೇರೆ ಪೊಲೀಸರು ವಿನಾಯಕಗಾಗಿ ಬಲೆ ಬೀಸಿದ್ದಾರೆ.
ಮುಂಬೈ, ಗೋವಾದಲ್ಲಿ ನಡೆಯುವ ಕ್ಯಾಸಿನೋ ಮಾದರಿಯ ಆಟ ಹುಬ್ಬಳ್ಳಿಯಂತ ನಗರದಲ್ಲಿ ನಡೆಯುತ್ತಿರುವ ಸಂಗತಿಯನ್ನು 'ಕನ್ನಡಪ್ರಭ' ಬಯಲಿಗೆಳಿದಿತ್ತು. ಈ ಆಟದ ಬಗ್ಗೆ ಮಾಹಿತಿ ಪಡೆದ ಪಾಲಕರು ಆತಂಕಕ್ಕೆ ಒಳಗಾಗಿದ್ದಾರಲ್ಲದೇ, ತಮ್ಮ ಮಕ್ಕಳು ಆಟಕ್ಕೆ ಬಲಿ ಬಿದ್ದರೆ ಏನಪ್ಪಾ ಗತಿ? ಎಂದು ಚಿಂತೆಗೀಡಾಗಿದ್ದಾರೆ.
ಹೀಗಾಗಿ ತಮ್ಮ ಮಕ್ಕಳ ಚಲನ ವಲನದ ಮೇಲೆ ನಿಗಾ ಇಡಲಾರಂಭಿಸಿದ್ದಾರೆ. ಅಲ್ಲದೇ ಅನೇಕರು 'ಕನ್ನಡಪ್ರಭ'ಕ್ಕೆ ಕರೆ ಮಾಡಿ ಎಚ್ಚರಿಸಿದ್ದಕ್ಕೆ ಧನ್ಯವಾದ ತಿಳಿಸಿದ್ದಾರೆ.
ಬುಲೆಟ್ ಸದ್ದು ಬಂದ್: ಆನ್‌ಲೈನ್ ಮೂಲಕ ದಂಧೆ ನಡೆಸುತ್ತಿದ್ದ ವಿನಾಯಕ ಜರತಾರಘರ ತನ್ನ ನೆಟ್‌ವರ್ಕನಲ್ಲಿರುತ್ತಿದ್ದವರನ್ನು ಸ್ವತಃ ಭೇಟಿ ಮಾಡಿ, ಅವರು ಹಣ ಗೆದ್ದಲ್ಲಿ ಹಣ ಪಾವತಿಸುವುದು, ಹಣ ಪಡೆದು ಅಕೌಂಟ್ ಅಪ್‌ಡೇಟ್ ಮಾಡುತ್ತಿದ್ದ. ಈತ ಬುಲೆಟ್ ಮೇಲೆ ಬರುತ್ತಿದ್ದರೆ ಆನ್‌ಲೈನ್ ಚಟಕ್ಕೆ ಬಿದ್ದವರು ಈತನ ಬುಲೆಟ್ ಸದ್ದು ಕೇಳುತ್ತಿದ್ದಂತೆಯೇ ಆತನತ್ತ ಧಾವಿಸುತ್ತಿದ್ದರು. ಅಲ್ಲದೇ ಹಣ ಕಳೆದುಕೊಂಡವರು ತಲೆ ಮರೆಸಿಕೊಳ್ಳುತ್ತಿದ್ದರು.
ದುಡ್ಡು ಹಾಕಿದರ ಕಥೆ: ಇದೀಗ ವಿನಾಯಕ ಜರತಾರಘರ ತಲೆ ಮರೆಸಿಕೊಂಡಿರುವುದು ಆನ್‌ಲೈನ್ ಜೂಜಾಟದಲ್ಲಿ ಹಣ ತೊಡಗಿಸಿರುವವರಲ್ಲಿ ನಿದ್ದೆಗೆಡಿಸಿದೆ. ತಾವು ಹೂಡಿದ ಹಣದ ಕಥೆ ಏನು ಎನ್ನುವ ಚಿಂತೆ ಕಾಡಿದೆ. ಅದೆಷ್ಟೋ ಜನ ವಿನಾಯಕ ಮೊಬೈಲ್‌ಗೆ ಕರೆ ಮಾಡಿದ್ದಾರೆಯಾದರೂ ಆ ನಂಬರ್ ಸ್ವಿಚ್‌ಆಫ್ ಆಗಿದೆ. ಹೀಗಾಗಿ ಆಟದಲ್ಲಿ ಹಣಗೆದ್ದವರು ಆತನ ಮನೆಯತ್ತ ಗಿರಕಿ ಹೊಡೆಯುತ್ತಿದ್ದಾರೆ. ಇನ್ನು ಆಟದಲ್ಲಿ ಹಣ ಕಳೆದುಕೊಂಡವರು ವಿನಾಯಕ ಕಾಟ ತಪ್ಪಿತು ಎಂದು ಕೊಳ್ಳುತ್ತಿದ್ದಾರೆ.
ಗಂಭೀರವಾಗಿ ಪರಿಗಣಿಸಲಿ: ಪೊಲೀಸರು ಈ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಬೇಕಿದೆ. ಇಲ್ಲದೇ ಹೋದಲ್ಲಿ ಕ್ರಿಕೆಟ್ ಬೆಟ್ಟಿಂಗ್ ದಂಧೆಯಲ್ಲಿ ಬಿದ್ದು ಜೀವ ಕಳೆದುಕೊಂಡ ನೇಹಾಲ್ ಹಾಗೂ ಸ್ವರೂಪನಂತೆ ಮತ್ತಷ್ಟು ಹುಡುಗರು ಬಲಿ ಬೀಳುವುದರಲ್ಲಿ ಸಂದೇಹವೇ ಇಲ್ಲ. ಬೆಟ್ಟಿಂಗ್ ಕುಳಗಳ ಪ್ರಭಾವದಿಂದಾಗಿಯೇ ರೇಲ್ವೆ ಪೊಲೀಸರು ನೇಹಾಲ್ ಹಾಗೂ ಸ್ವರೂಪ ಸಾವಿನ ಹಿಂದಿರುವ ಸತ್ಯ ತನಿಖೆ ಮಾಡಲು ಆಸಕ್ತಿ ತೋರಿಲ್ಲ. ಹೀಗಾಗಿ ಈ ಪ್ರಕರಣಕ್ಕೆ ರೇಲ್ವೆ ಪೊಲೀಸರೇ ಡೆತ್‌ನೋಟ್ ಬರೆದಿರುವಂತಿದೆ.
ಕ್ರಿಕೆಟ್ ಬೆಟ್ಟಿಂಗ್ ವಿಷವರ್ತುಲಕ್ಕಿಂತಲೂ ಗಂಭೀರವಾಗಿರುವ ಆನ್‌ಲೈನ್ ಜೂಜಾಟಕ್ಕೆ ಯುವಕರು ಸಲೀಸಾಗಿ ಬಲಿ ಬೀಳುತ್ತಾರೆ. ಎಲ್ಲರ ಕೈಯಲ್ಲೀಗ ಮೊಬೈಲ್ ಇರುವುದರಿಂದ ಅದರ ಮೂಲಕ ಆನ್‌ಲೈನ್ ಆಟವಾಡುತ್ತಾರೆ. ಹೀಗಾಗಿ ಈ ವಿಷವರ್ತುಲ ಹಬ್ಬಲು ಸಮಯ ಬೇಕಿಲ್ಲ. ಈ ನಿಟ್ಟಿನಲ್ಲಿ ಪೊಲೀಸ್ ಆಯುಕ್ತರ ಪ್ರಕರಣ ಗಂಭೀರವಾಗಿ ಪರಿಗಣಿಸಿ ಇದನ್ನು ಬೇರು ಸಮೇತ ಕಿತ್ತೊಗೆಯಬೇಕಿದೆ.
ವಿನಾಯಕ ಲಾಪತಾ
ಏತನ್ಮಧ್ಯೆ ಪತ್ರಿಕೆಯಲ್ಲಿ ಸುದ್ದಿ ಪ್ರಕಟವಾಗುತ್ತಿದ್ದಂತೆಯೇ ಕಿಂಗ್‌ಪಿನ್ ವಿನಾಯಕ ಜರತಾರಘರ ಹುಬ್ಬಳ್ಳಿಯಿಂದ ಕಾಲ್ಕಿತ್ತಿದ್ದಾನೆ. ಅಲ್ಲದೇ ತನ್ನ ಮೊಬೈಲ್ (9916353489) ಸ್ವಿಚ್‌ಆಫ್ ಮಾಡಿದ್ದಾನೆ. ಮೂಲಗಳ ಪ್ರಕಾರ ವಿನಾಯಕನಿಗೆ ಪತ್ರಿಕೆಯಲ್ಲಿ ಸುದ್ದಿ ಪ್ರಕಟವಾಗಿದ್ದು ಗೊತ್ತಿರಲಿಲ್ಲ, ಈತನಿಂದ ಹಪ್ತಾ ವಸೂಲಿ ಮಾಡುತ್ತಿದ್ದ ಪೊಲೀಸರೇ ಮಾಹಿತಿಕೊಟ್ಟು ಅವನನ್ನು ಊರು ಬಿಡುವಂತೆ ಮಾಡಿದ್ದಾರೆ. ಕೇಶ್ವಾಪುರ ಠಾಣಾ ವ್ಯಾಪ್ತಿಯಲ್ಲಿಯೇ ವಿನಾಯಕ ಮನೆಯಿದೆ. ಈ ಠಾಣೆಯ ಕ್ರೈಂ ಪೊಲೀಸರೊಬ್ಬರಿಂದ ಆತನಿಗೆ ಎಸ್ಕೇಪ್ ಆಗುವಂತೆ ಮಾಹಿತಿ ಹೋಗಿದೆ.
ಗೂಂಡಾ ಕಾಯ್ದೆಯಡಿ ಬಂಧನ
ವಿನಾಯಕ ಜರತಾರಘರನನ್ನು ಗೂಂಡಾ ಕಾಯ್ದೆಯಡಿ ಬಂಧಿಸಲಾಗುವುದು. ಆತನನ್ನು ಬಂಧಿಸುವಂತೆ ಪೊಲೀಸ್ ಅಧಿಕಾರಿಗಳಿಗೆ ಸೂಚನೆ ನೀಡಿದ್ದೇನೆ. ಯಾವುದೇ ಕಾರಣಕ್ಕೂ ಕ್ಯಾಸಿನೋದಂತಹ ಆಟ ಹುಬ್ಬಳ್ಳಿಯಲ್ಲಿ ನಡೆಯಲು ಬಿಡುವುದಿಲ್ಲ. ವಿನಾಯಕ ರಾಜಸ್ತಾನಕ್ಕೆ ಬೇರು ಬಿಡಲು ಹೊಂಚು ಹಾಕಿದ್ದಾನೆನ್ನುವುದು 'ಕನ್ನಡಪ್ರಭ' ಮೂಲಕ ತಿಳಿದು ಬಂದಿದ್ದು, ಯಾವುದೇ ಕಾರಣಕ್ಕೂ ಅವನನ್ನು ರಾಜಸ್ತಾನಕ್ಕೆ ಹೋಗಲು ಬಿಡುವುದಿಲ್ಲ. ಆತನನ್ನು ಬಂಧಿಸಿ ಈ ಜೂಜಾಟವನ್ನು ಬೇರು ಸಮೇತಿ ಕಿತ್ತೊಗೆಯಲಾಗುವುದು. ಈತನಿಗೆ ಸಹಕಾರ ನೀಡಿದವರ ವಿರುದ್ಧವೂ ಕ್ರಮ ಕೈಗೊಳ್ಳಲಾಗುವುದು. ಪೊಲೀಸ್ ಅಧಿಕಾರಿಗಳೂ ಇದರಲ್ಲಿ ಶಾಮೀಲಿದ್ದರೂ ನಿರ್ದಾಕ್ಷಿಣ್ಯವಾಗಿ ಕ್ರಮ ಕೈಗೊಳ್ಳಲಾಗುವುದು.
- ರವೀಂದ್ರ ಪ್ರಸಾದ
ಮಹಾನಗರ ಪೊಲೀಸ್ ಆಯುಕ್ತ
- ಪ್ರಕಾಶ ಎಸ್. ಶೇಟ್