ಧಾರವಾಡದಲ್ಲಿ ಬಲಿಗಾಗಿ ಕಾದಿವೆ ಕೊಳವೆಬಾವಿ
ಧಾರವಾಡ: ಬಿಜಾಪುರದ ನಾಗಠಾಣ ಬಳಿ ನಡೆದ ಅಕ್ಷತಾಳ ದುರ್ಘಟನೆ ಧಾರವಾಡ ನಗರದ ಪಾಲಕರನ್ನು ನಿದ್ದೆಗೆಡಿಸಿದೆ. ಕಾರಣ ಧಾರವಾಡದ ಹಲವೆಡೆ ತೆರೆದ ಕೊಳವೆಬಾವಿಗಳು ಮಕ್ಕಳ ಬಲಿಗಾಗಿ ಕಾಯುತ್ತಿವೆ. ಕೆಲಗೇರಿ-ಆಂಜನೇಯ ನಗರದಲ್ಲಿ ಮೂರು ಕೊಳವೆಬಾವಿಗಳು ತೆರದಿವೆ.
ನಾಗಠಾಣದ ಬಳಿ ಕೊಳವೆಬಾವಿಗೆ ಬಿದ್ದಿರುವ ಅಕ್ಷತಾಳನ್ನು ಉಳಿಸಿಕೊಳ್ಳುವ ಪ್ರಯತ್ನ ವಿಫಲವಾಗಿದೆ. ಉಪಯೋಗವಾಗದ ಕೊಳವೆಬಾವಿಗಳನ್ನು ಮುಚ್ಚುವ ಕುರಿತು ಈಗ ರಾಜ್ಯಾದ್ಯಂತ ಚರ್ಚೆ ನಡೆದಿದೆ. ಆದರೆ, ಧಾರವಾಡದ ಅನೇಕ ಕಡೆ ಹಲವು ಕೊಳವೆಬಾವಿಗಳು ಬಾಯ್ತೆರೆದು ಇವೆ.
ಆಂಜನೇಯನಗರದ ಬಡಾವಣೆಯಲ್ಲಿ ನೀರು ಬೀಳದ ಮೂರು ಕೊಳವೆಬಾವಿ ತೆರದು 10 ವರ್ಷಗಳಿಂದ ಹಾಗೆ ಬಿಡಲಾಗಿದೆ. ಈ ಕೊಳವೆಬಾವಿಗಳ ಸುತ್ತಮುತ್ತ ಅಂಗನವಾಡಿ, ಪ್ರೌಢಶಾಲೆ ಇವೆ. ಮಕ್ಕಳೆಲ್ಲಾ ಈ ಕೊಳವೆಬಾವಿಗಳ ಸುತ್ತ ಆಟವಾಡುತ್ತವೆ. ಈ ಕೊಳವೆಬಾವಿ ಜಲಮಂಡಳಿ ವ್ಯಾಪ್ತಿಯಲ್ಲಿದ್ದು, ಹಲವಾರು ವರ್ಷಗಳ ಹಿಂದೆಯೇ ಇವುಗಳ ಬಳಕೆ ನಿಲ್ಲಿಸಲಾಗಿದೆ ಎನ್ನುವುದು ಬಡಾವಣೆಯ ಶಂಕರ ಮುಗಳಿ ಅವರ ಹೇಳಿಕೆ.
ಒಂದು ಕೊಳವೆಬಾವಿ ಜಲಮಂಡಳಿ ಹೌಸ್ಪಂಪ್ನ ಒಳಗಡೆ ಇದೆ. ಈ ಕೊಳವೆಬಾವಿ ಮುಚ್ಚುವ ಪ್ರಯತ್ನ ಯಾರೂ ಮಾಡಿಲ್ಲ. ಈ ಕೊಳವೆಬಾವಿ ಮುಚ್ಚಲು ಸ್ಥಳೀಯ ಆಡಳಿತಗಳು ಕ್ರಮ ಕೈಗೊಳ್ಳಬೇಕಿದೆ. ಆಂಜನೇಯನಗರ ಮಾತ್ರವಲ್ಲ ಧಾರವಾಡದ ಇನ್ನೂ ಅನೇಕ ಕಡೆ ಇವೆ. ಪಾಲಿಕೆ, ಜಲಮಂಡಳಿ ಕೂಡಲೇ ತೆರೆದ ಕೊಳವೆಬಾವಿಗಳನ್ನು ಮುಚ್ಚುವ ಪ್ರಯತ್ನ ಮಾಡಬೇಕಾಗಿದೆ ಎನ್ನುತ್ತಾರೆ ಕೆಲಗೇರಿ ಮಂಜುನಾಥ.