ಅಣುವ್ರತ ಸಂಕಲ್ಪದಿಂದ ಸಮಾಜದಲ್ಲಿ ಬದಲಾವಣೆ
ಕನ್ನಡಪ್ರಭ ವಾರ್ತೆ, ಹುಬ್ಬಳ್ಳಿ, ಜೂ. 22
ಭಾರತೀಯ ಧಾರ್ಮಿಕ ಪರಂಪರೆಯಲ್ಲಿ ಸಂತ ತುಳಸಿಯವರದ್ದು ವಿಶಿಷ್ಟ ಸ್ಥಾನ. ಆರೋಗ್ಯಕರ ಸಮಾಜ ನಿರ್ಮಾಣದಲ್ಲೂ ಅವರ ಕೊಡುಗೆ ಅಪಾರ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಪ್ರಹ್ಲಾದ ಜೋಶಿ ಹೇಳಿದರು.
ಸಂತ ತುಳಸಿಯವರ ಜನ್ಮ ಶತಮಾನೋತ್ಸವದ ಅಂಗವಾಗಿ ನಗರ ಶಾಂತಿನಾಥ ಭವನದಲ್ಲಿ ಭಾನುವಾರ ನಡೆದ ಅಣುವ್ರತ ಸಂಕಲ್ಪ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಅಹಿಂಸಾ ಮಾರ್ಗ ಬೋಧನೆ ಮಾಡಿದ ತುಳಸಿಯವರು ಸಮಾಜದಲ್ಲಿ ಬದಲಾವಣೆ ರೂಪಿಸಿದರು. ಪರೋಪಕಾರ, ಸನ್ಮಾರ್ಗದಲ್ಲಿ ನಡೆದರೆ ಮಾತ್ರ ನೆಮ್ಮದಿ ಪ್ರಾಪ್ತ ಎಂದು ಬೋಧಿಸಿದ ಅವರು ಮಾಜಿ ಪ್ರಧಾನಿ ಇಂದಿರಾ ಗಾಂಧಿಯಂಥವರಿಗೆ ಮಾರ್ಗದರ್ಶನ ಮಾಡಿದ್ದರು. ಇಂಥ ಮಹಾನ ಚೇತನರ ತತ್ವಗಳನ್ನು ಜೀವನದಲ್ಲಿ ಅಳವಡಿಸಿಕೊಳ್ಳಬೇಕು ಎಂದರು.
ಸಾಧ್ವಿ ಕಾವ್ಯಲತಾ ಮಾತನಾಡಿ, ಜೈನ ಸಂತ ತುಳಸಿಯವರು ಅಣುವೃತ ಸಂಕಲ್ಪದ ಮೂಲಕ ಭವ್ಯ ಭಾರತ ನಿರ್ಮಾಣದ ಕನಸು ಕಂಡವರು. ವ್ಯಕ್ತಿ ಏಳ್ಗೆಯಾದರೆ ಮಾತ್ರ ದೇಶದ ಪ್ರಗತಿ ಸಾಧ್ಯ ಎಂದು ಸಾರಿದ್ದರು. ಅಲ್ಲದೇ ಸತ್ಯ, ಅಹಿಂಸೆಯಂತಹ ಧರ್ಮ ಮಾರ್ಗದಲ್ಲಿ ನಡೆಯಬೇಕೆಂದು ಬೋಧಿಸಿದವರು ಎಂದು ಹೇಳಿದರು.
ನಾವಿಂದು ಜೀವನ ಶೈಲಿಯಲ್ಲಿ ಬದಲಾವಣೆ ಮಾಡಿಕೊಂಡಿದ್ದರಿಂದ ಅನೇಕ ತೊಂದರೆಯಲ್ಲಿ ಸಿಲುಕಿಕೊಳ್ಳುತ್ತಿದ್ದೇವೆ. ಅಣುವ್ರತ ಸಂಕಲ್ಪ ಮಾರ್ಗ ಅನುಸರಿಸಿದರೆ ಜೀವನದ ಎಲ್ಲ ಕಷ್ಟಗಳು ದೂರವಾಗುತ್ತವೆ ಎಂದರು.
ಕಾಂಚನ ಪ್ರಗ್ಯಾ ಮಾತನಾಡಿ, ಸಂತ ತುಳಸಿಯವರು ಹೇಳಿಕೊಟ್ಟ ಸಂಪ್ರದಾಯ ಅತೀತ ಆಂದೋಲನ.
ಇಂದಿನ ತಲೆ ಮಾರಿನವರು ಅವರು ಪ್ರತಿಪಾದಿಸಿದ ಸಂಪ್ರದಾಯ ಅಳವಡಿಸಿಕೊಳ್ಳದೇ ಹೋದಲ್ಲಿ ಮತ್ತಷ್ಟು ಸಂಕಷ್ಟ ಎದುರಿಸಬೇಕಾದೀತು. ಈ ನಿಟ್ಟಿನಲ್ಲಿ ಪಾಲಕರು ಸ್ವತಃ ಅಣುವ್ರತ ಮಾರ್ಗದಲ್ಲಿ ನಡೆದು ಮಕ್ಕಳನ್ನೂ ಅದೇ ಮಾರ್ಗದಲ್ಲಿ ಕೊಂಡೊಯ್ಯಬೇಕು ಎಂದರು.
ಭವರಲಾಲ್ ಜೈನ್, ದತ್ತಾ ಡೋರ್ಲೆ, ಜೀತೇಂದ್ರ ಮಜೇಥಿಯಾ, ಛಗನರಾಜ ಭುರಟ, ಶಾಂತಿಲಾಲ ಕಾಂಕರಿಯಾ, ಪಾರಸಮಲ್ ಬಾಫಣಾ, ರತನ ಬಾಗರೇಚಾ, ಕೇಸರಿಚಂದ ಗೋಯಲ್ ಮತ್ತಿತರರಿದ್ದರು. ಕಾರ್ಯಕ್ರಮಕ್ಕೂ ಪೂರ್ವ ನಗರದಲ್ಲಿ ಅಣುವೃತ ಸಂಕಲ್ಪ ಯಾತ್ರೆ ನಡೆಯಿತು.